ಹಿರಿಯ ನಾಯಕ ಜೈಪಾಲ್ ರೆಡ್ಡಿ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

Update: 2019-07-28 11:01 GMT

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕರಾದ ಜೈಪಾಲ್ ರೆಡ್ಡಿ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

‘ಜೈಪಾಲ್ ರೆಡ್ಡಿ ಅವರು ಸರಳ ವ್ಯಕ್ತಿತ್ವದ ನಾಯಕರು. ಅವರ ನಡವಳಿಕೆ ಇತರರಿಗೆ ಮಾದರಿಯಾಗುವಂತಹದ್ದು. ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಬೇಸರವಾಗಿದೆ. ಅವರ ಅಗಲಿಕೆಯಿಂದ ನಾವು ಅತ್ಯುತ್ತಮ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ’ ಎಂದು ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಕಾರ್ಯಕರ್ತರಾಗಿ ಪಕ್ಷ ಸೇವೆ ಆರಂಭಿಸಿದ್ದ ಜೈಪಾಲ ರೆಡ್ಡಿ ಅವರು ಸಂಘಟನೆಯಲ್ಲಿ ಚತುರತೆ ಮೆರೆದವರು. ಅವರು ರಾಜಕೀಯ ಜೀವನದಲ್ಲಿ ಐದು ಬಾರಿ ಲೋಕಸಭಾ ಸದಸ್ಯರಾಗಿ, 2 ಬಾರಿ ರಾಜ್ಯಸಭೆ ಸದಸ್ಯರಾಗಿ, 4 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲ ವರ್ಷಗಳ ಕಾಲ ಜನತಾ ಪಕ್ಷಕ್ಕೆ ಹೋದರೂ ನಂತರ ಕಾಂಗ್ರೆಸ್ ಗೇ ಮರಳಿ ತಮ್ಮ ಸೇವೆ ಮುಂದುವರಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಜೈಪಾಲ್ ರೆಡ್ಡಿ ಅವರು ನೀಡಿರುವ ಕೊಡುಗೆ ಅಪಾರ' ಎಂದು ಅವರು ಸ್ಮರಿಸಿದ್ದಾರೆ.

‘ಅವರು ಕೇವಲ ಪಕ್ಷ ಸಂಘಟನೆಯಲ್ಲಿ ಮಾತ್ರವಲ್ಲದೇ, ಅತ್ಯುತ್ತಮ ಸಂಸದೀಯಪಟು ಎಂಬ ಹೆಸರನ್ನೂ ಪಡೆದವರು. ತಮ್ಮ ಇಡೀ ಜಿವನವನ್ನು ಸಾರ್ವಜನಿಕ ಸೇವೆಗಾಗಿ ಮೀಸಲಿಟ್ಟ ಅಪರೂಪದ ರಾಜಕಾರಣಿ. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ.’

‘ಅವರ ಸಾವಿನ ನೋವನ್ನು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಭರಿಸುವ ಶಕ್ತಿ ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಡಿ.ಕೆ. ಶಿವಕುಮಾರ್ ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News