ನಾಳೆ ಯಡಿಯೂರಪ್ಪ ವಿಶ್ವಾಸಮತ ಯಾಚನೆ: ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ?

Update: 2019-07-28 15:15 GMT

ಬೆಂಗಳೂರು, ಜು.28: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಂಡ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪ, ಸೋಮವಾರ(ಜು.29) ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.

225 ಸದಸ್ಯರನ್ನು(ಸ್ಪೀಕರ್ ಸೇರಿಸಿ) ಹೊಂದಿರುವ ರಾಜ್ಯ ವಿಧಾನಸಭೆಯ ಸಂಖ್ಯಾಬಲವು 17 ಶಾಸಕರ ಅನರ್ಹತೆಯಿಂದಾಗಿ, 208ಕ್ಕೆ ಕುಸಿದಿದೆ. ಸದನದಲ್ಲಿ ಬಹುಮತ ಸಾಬೀತುಪಡಿಸಲು 105 ಸದಸ್ಯರ ಬೆಂಬಲ ಅಗತ್ಯವಿದ್ದು, ಬಿಜೆಪಿ ಏಕಾಂಗಿಯಾಗಿ ಸರಳ ಬಹುಮತವನ್ನು ಹೊಂದಿದೆ. ಜೊತೆಗೆ ಪಕ್ಷೇತರ ಸದಸ್ಯ ನಾಗೇಶ್ ಬೆಂಬಲದಿಂದಾಗಿ ಸರಕಾರದ ಪರವಾಗಿ 106 ಮತಗಳು ಚಲಾವಣೆ ಯಾಗುವ ನಿರೀಕ್ಷೆಯಿದೆ.

ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದ್ದರೂ, ಸದನಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಎಸ್ಪಿ ಶಾಸಕ ಎನ್.ಮಹೇಶ್‌ರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿದೆ. ಬಿಜೆಪಿ ಸರಕಾರಕ್ಕೆ ಎನ್.ಮಹೇಶ್ ಕೂಡ ಬೆಂಬಲ ನೀಡಬಹುದು ಎನ್ನಲಾಗುತ್ತಿದೆ.

ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿರುವುದು ಪರೋಕ್ಷವಾಗಿ ಯಡಿಯೂರಪ್ಪಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಇದ್ದಂತಹ ತೊಡಕುಗಳು ನಿವಾರಣೆಯಾಗುವಂತೆ ಮಾಡಿದೆ. ಸದನದಲ್ಲಿ ಕಾಂಗ್ರೆಸ್ ಪಕ್ಷ 65 ಹಾಗೂ ಜೆಡಿಎಸ್ 34 ಸದಸ್ಯರನ್ನು ಹೊಂದಿದ್ದು, ಮೈತ್ರಿ ಪಕ್ಷಗಳ ಸಂಖ್ಯಾಬಲ 99ಕ್ಕೆ ಸೀಮಿತವಾಗಿದೆ.

ಜು.30ರೊಳಗೆ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಬೇಕಾದ ಅಗತ್ಯವಿದೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಧನ ವಿನಿಯೋಗ ಮಸೂದೆ ಮಂಡನೆ ಮಾಡಿ ಅದಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದುಕೊಳ್ಳಲು ಸರಕಾರ ನಿರ್ಧರಿಸಲಾಗಿದೆ.

ವಿಶ್ವಾಸಮತ ಯಾಚನೆ ಹಾಗೂ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರು ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ಸ್ಪೀಕರ್ ರಮೇಶ್ ಕುಮಾರ್ ಶಾಸಕರನ್ನು ಅನರ್ಹಗೊಳಿಸಿರುವ ವಿಚಾರದ ಕುರಿತು ಯಡಿಯೂರಪ್ಪ ನೇತೃತ್ವದಲ್ಲಿ ರವಿವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಹೊಸದಿಲ್ಲಿಗೆ ಬಿಎಸ್‌ವೈ: ಸದನದಲ್ಲಿ ಬಹುಮತ ಸಾಬೀತು ಪಡಿಸಿ, ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆದುಕೊಂಡ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೊಸದಿಲ್ಲಿಗೆ ತೆರಳಿ, ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಇನ್ನಿತರ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ?: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅತೃಪ್ತ 17 ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಬಹಿರಂಗ ಟೀಕೆಗಳನ್ನು ಮಾಡುತ್ತಿರುವ ಬಿಜೆಪಿ, ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹಾಗೂ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆದುಕೊಂಡ ಬಳಿಕ, ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸರ್ವಾನುಮತದಿಂದ, ಅವಿರೋಧವಾಗಿ ಕೆ.ಆರ್.ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಬಿಜೆಪಿಯವರು ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಮುನ್ನವೇ ಸ್ಪೀಕರ್ ಸದನದಲ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News