ಶಾಹೀನ್ ವಿದ್ಯಾಸಂಸ್ಥೆಗೆ 'ದಕ್ಷಿಣ ಭಾರತದ ಅತ್ಯುತ್ತಮ ನೀಟ್ ತರಬೇತಿ ಸಂಸ್ಥೆ' ಪ್ರಶಸ್ತಿ

Update: 2019-07-28 16:13 GMT

ಬೆಂಗಳೂರು: ಬ್ಲೈಂಡ್ ವಿಂಕ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಆಯೋಜಿಸುವ ಇಂಡಿಯಾ ಲೀಡರ್ಶಿಪ್ ಅವಾರ್ಡ್ -  2019ರಲ್ಲಿ 'ದಕ್ಷಿಣ ಭಾರತದ ಅತ್ಯುತ್ತಮ ನೀಟ್ ತರಬೇತಿ ಸಂಸ್ಥೆ' ಪ್ರಶಸ್ತಿಯನ್ನು ಬೀದರ್ ನ ಶಾಹೀನ್ ವಿದ್ಯಾಸಂಸ್ಥೆ ಗಳಿಸಿದೆ.

ರವಿವಾರ ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ  ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. 

2019ರಲ್ಲಿ ಸುಮಾರು  450ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಸೀಟುಗಳನ್ನು ನಿರೀಕ್ಷಿಸುತ್ತಿರುವ ಶಾಹೀನ್, ಕಳೆದ ವರ್ಷ 304 ಉಚಿತ ವೈದ್ಯಕೀಯ ಸೀಟುಗಳನ್ನು ಪಡೆದುಕೊಂಡಿತ್ತು. ಕಳೆದೈದು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಉಚಿತ ವೈದ್ಯಕೀಯ ಸೀಟುಗಳನ್ನು ಪಡೆದುಕೊಂಡಿರುವ ಶಾಹೀನ್, 2020ರಲ್ಲಿ ದೇಶದ ಶೇ.1ರಷ್ಟು ಉಚಿತ ವೈದ್ಯಕೀಯ ಸೀಟುಗಳನ್ನು ತನ್ನ ಪಾಲಾಗಿಸುವ ನಿರೀಕ್ಷೆಯಲ್ಲಿದೆ. ಶಾಹೀನ್ ವಿದ್ಯಾರ್ಥಿಗಳು ಈ ಬಾರಿ ಕರ್ನಾಟಕದ ಸುಮಾರು 10% ಹಾಗು ದೇಶದ 0.7 % ಸರಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಪಡೆಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ತಿಳಿಸಿದ್ದಾರೆ.

ಶಾಹೀನ್ ಸಂಸ್ಥೆಯ ವಿಶೇಷತೆ

ಇಲ್ಲಿ ಶಿಕ್ಷಣಗಳಿಸುವ ಶೇ. 65ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು  ಆರ್ಥಿಕವಾಗಿ ಹಿಂದುಳಿದ, ದಮನಿತ ವರ್ಗದವರಾಗಿದ್ದಾರೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಅವರನ್ನು ಉನ್ನತ ಅಂಕಗಳೊಂದಿಗೆ ದ್ವಿತೀಯ ಪಿ.ಯು.ಸಿ. ಮತ್ತು ನೀಟ್ ತೇರ್ಗಡೆ ಗೊಳಿಸುವುದು ಶಾಹೀನ್ ವೈಶಿಷ್ಟ್ಯತೆ.

ಇದರೊಂದಿಗೆ ಅರ್ಧದಲ್ಲೇ  ಶಾಲೆ ಮೊಟಕುಗೊಳಿಸಿದಂತಹ ಮಕ್ಕಳನ್ನು ಮತ್ತು ಮದ್ರಸದಲ್ಲಿ ಕಲಿತಂತಹ ವಿದ್ಯಾರ್ಥಿಗಳನ್ನು ಕರೆತಂದು ಅವರಿಗೆ ನುರಿತ ಶಿಕ್ಷಕರಿಂದ ತರಬೇತಿ ನೀಡಿ, ಅವರನ್ನು ಎಸೆಸೆಲ್ಸಿ, ಪಿ.ಯು.ಸಿ. ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವ ಕೆಲಸವನ್ನು ಶಾಹೀನ್ ಮಾಡುತ್ತಿದೆ. ಇಂತಹ ವಿದ್ಯಾರ್ಥಿಗಳ ಮೇಲೆ  ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ  ಕಲಿಸುತ್ತಾರೆ.

6 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರನ್ನು ನೇಮಿಸಲಾಗಿದೆ. ದಿನನಿತ್ಯ ಅವರ ಶೈಕ್ಷಣಿಕ ಬೆಳವಣಿಗೆಯನ್ನು ಪರೀಕ್ಷಿಸಿ, ಅವರ ಸಾಮರ್ಥ್ಯಕ್ಕೆ  ತಕ್ಕ ಶಿಕ್ಷಣವನ್ನು ನೀಡಲಾಗುತ್ತದೆ. ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕದಂತೆಯೇ ಶಾಹೀನ್ ಕೂಡ ಶೈಕ್ಷಣಿಕ ತೀವ್ರ ನಿಗಾ ಘಟಕವನ್ನು ಸ್ಥಾಪಿಸಿದೆ. ಪ್ರಸ್ತುತ ದೇಶದಾದ್ಯಂತ ಶಾಹೀನ್ 42 ಪದವಿ ಪೂರ್ವ ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News