ಸ್ಪೀಕರ್ ತೀರ್ಪು ನಿರೀಕ್ಷಿತ: ಅನರ್ಹ ಶಾಸಕ ಮುನಿರತ್ನ

Update: 2019-07-28 16:30 GMT

ಬೆಂಗಳೂರು, ಜು.28: ನೀವು ಎಲ್ಲಿಗೂ ಹೋಗಬೇಡಿ, ಇಲ್ಲದಿದ್ದರೆ ನಿಮ್ಮ ಕಥೆ ಮುಗಿಸುತ್ತೇವೆ. ನಿಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದಾಗಿ ನಮ್ಮ ಪಕ್ಷದ ನಾಯಕರು ನಮಗೆ ಮೊದಲೇ ತಿಳಿಸಿದ್ದರು. ಸ್ಪೀಕರ್ ನಮ್ಮನ್ನು ಅನರ್ಹ ಗೊಳಿಸಿರುವುದು ನಿರೀಕ್ಷಿತ ಎಂದು ಅನರ್ಹ ಶಾಸಕ ಮುನಿರತ್ನ ಹೇಳಿದ್ದಾರೆ.

ರವಿವಾರ 14 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿರುವ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ ಯಾರು? ನಾವು ಚಿಕ್ಕ ಮಕ್ಕಳಲ್ಲ, ತಿಳುವಳಿಕೆ ಇಲ್ಲದೇ ರಾಜೀನಾಮೆ ಕೊಟ್ಟು ಬಂದಿಲ್ಲ ಎಂದರು.

ಸಮ್ಮಿಶ್ರ ಸರಕಾರ ಎಂದರೆ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಸಂಪೂರ್ಣ ಸಹಕಾರ ನೀಡಬೇಕು. ಸರಕಾರ ರಚನೆಯಾದ ಮೂರು ತಿಂಗಳಲ್ಲೆ ಸರಕಾರವನ್ನು ಅಸ್ತಿರಗೊಳಿಸುವ ಪ್ರಯತ್ನಗಳು ಪ್ರಾರಂಭವಾಯಿತು. ಲೋಕಸಭೆಯ ಚುನಾವಣೆವರೆಗೆ ಸಮ್ಮನಿರಿ ಎಂದು ಹೇಳಿದವರು ಯಾರು? ಹೊಸದಿಲ್ಲಿಗೆ ಹೋಗಿ ಸರಕಾರದ ವಿರುದ್ಧ ದೂರುಗಳನ್ನು ಕೊಟ್ಟವರು ಯಾರು? ಎಂದು ಅವರು ಪ್ರಶ್ನಿಸಿದರು. ನೀವು ಸರಿಯಾಗಿ ಇದ್ದಿದ್ದರೆ ನಾವು ಯಾಕೆ ರಾಜೀನಾಮೆ ನೀಡಬೇಕಿತ್ತು. ನೀವು ಸರಿಯಾಗಿ ಜೆಡಿಎಸ್‌ನವರಿಗೂ ಕೆಲಸ ಮಾಡಲು ಬಿಟ್ಟಿಲ್ಲ. ಅಪ್ಪ ಮಕ್ಕಳದ್ದು ಹೆಚ್ಚಾಯಿತು ಎಂದು ಹೇಳಿದ್ದು ಯಾರು? ಸಮ್ಮಿಶ್ರ ಸರಕಾರ ರಚನೆ ಮಾಡುವ ಸಂದರ್ಭದಲ್ಲಿ ಉಭಯ ಪಕ್ಷಗಳು ಯಾವ ರೀತಿ ನಡೆದುಕೊಳ್ಳಬೇಕು ಎಂದು ಯಾಕೆ ಚರ್ಚೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.

ಸರಕಾರದಲ್ಲಿರುವ ಸಮಸ್ಯೆಗಳ ಬಗ್ಗೆ ತಿಂಗಳಿಗೊಮ್ಮೆ ಸಭೆ ಮಾಡಿಲ್ಲ. ಬೇಷರತ್ ಬೆಂಬಲ ನೀಡಿದ ಬಳಿಕ ಸುಮ್ಮನಿರಬೇಕಿತ್ತು. ಎಲ್ಲರನ್ನೂ ಎತ್ತಿ ಕಟ್ಟಿದ್ದು ಯಾರು? 14 ತಿಂಗಳು ಈ ಸರಕಾರವನ್ನು ತೆಗೆಯಬೇಕು ಎಂದು ಹೇಳುತ್ತಿದ್ದವರು ಯಾರು? ಎಲ್ಲವನ್ನೂ ಮುಂದಿನ ದಿನಗಳಲ್ಲಿ ನಾವು ಬೆಂಗಳೂರಿಗೆ ಬಂದು ಹೇಳುತ್ತೇವೆ ಎಂದು ಮುನಿರತ್ನ ಹೇಳಿದರು.

ಈ ದೇಶದಲ್ಲಿ ಕಾನೂನು ಬಲಿಷ್ಠವಾಗಿದೆ. ಕಾನೂನಿನ ಹೋರಾಟ ಇದ್ದೇ ಇರುತ್ತೆ. ಜೆಡಿಎಸ್‌ನವರಿಗೆ ಸಮಾಧಾನ ಮಾಡಲು ನಮಗೆ ಆಹ್ವಾನ ಕೊಡುತ್ತಿದ್ದರು. ಸಮ್ಮಿಶ್ರ ಸರಕಾರ ನಿಮ್ಮ ಜೊತೆ ಇದೆ ಹೇಳಿಕೆ ಕೊಡುತ್ತಿದ್ದದ್ದು ಸುಳ್ಳು ಹಾಗೂ ನಾಟಕ. ನಮ್ಮನ್ನು ಅತೃಪ್ತರು ಎನ್ನುತ್ತಿದ್ದಾರೆ. ಈಗ 75 ಜನ ಅತೃಪ್ತರು ಅಲ್ಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ನಾಟಕ ಅಷ್ಟೇ ಎಂದು ಅವರು ಹೇಳಿದರು.

ಕಾಂಗ್ರೆಸ್‌ನಿಂದ ಯಾರಾದರೂ ಮುಖ್ಯಮಂತ್ರಿಯಾದರೆ ಜೆಡಿಎಸ್‌ನವರು ಕಾಟ ಕೊಡುತ್ತಾರೆ. ಮೈತ್ರಿ ಸರಕಾರದಲ್ಲಿ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸವಿಲ್ಲ. ನಂಬಿಕೆ ಇಲ್ಲದೆ ಒಂದೇ ಮನೆಯಲ್ಲಿ ಜೀವನ ನಡೆಸಿದಂತಾಗಿದೆ. ನಾವು ಬಿಜೆಪಿಯವರ ಜೊತೆ ಮಾತನಾಡುತ್ತಿಲ್ಲ. ಈ ಸರಕಾರವನ್ನು ತೆಗೆಯಲು ಪ್ರಚೋದನೆ ನೀಡಿದವರು ಯಾರು ಎಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಮುನಿರತ್ನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News