ಈ ಕಾನೂನು ತಿದ್ದುಪಡಿಗಳು ಯಾವುದರ ತಯಾರಿ?

Update: 2019-07-29 18:33 GMT

ಮಾಹಿತಿ ಹಕ್ಕು ಆಯೋಗಕ್ಕಿದ್ದ ಸ್ವಾಯತ್ತೆ ಹಾಗೂ ಅಧಿಕಾರಗಳನ್ನು ಮೊಟಕು ಮಾಡಿ ಮುಖ್ಯ ಮಾಹಿತಿ ಹಕ್ಕು ಕಮಿಷನರ್ ಕೇಂದ್ರ ಸರಕಾರದ ನೌಕರರನ್ನಾಗಿ ಮಾಡಲಾಗಿದೆ. ಈ ತಿದ್ದುಪಡಿಗಳಿಗೆ ಒಂದೆರಡು ಪಕ್ಷಗಳು ಬಿಟ್ಟರೆ ಬಹುತೇಕ ರಾಜಕೀಯ ಪಕ್ಷಗಳು ಬೆಂಬಲಿಸಿರುವುದು ಆಶ್ಚರ್ಯವೇನಲ್ಲ. ಆರಂಭದಲ್ಲಿ ವಿರೋಧಿಸಿದ ರಾಜಕೀಯ ನೇತಾರರೂ ಕೂಡ ನಂತರ ಅವುಗಳನ್ನು ಬೆಂಬಲಿಸಿದರು. ಸದನದಲ್ಲಿ ವಿರೋಧಿಸಬೇಕಾದವರು ಸಭಾತ್ಯಾಗದ ನಾಟಕವಾಡಿ ಎಲ್ಲಾ ತಿದ್ದುಪಡಿಗಳು ಅತ್ಯಲ್ಪವಿರೋಧದೊಂದಿಗೆ ಅನುಮೋದನೆಗೊಳ್ಳುವಂತೆ ಮಾಡಿದರು. ಯಾಕೆಂದರೆ ಅವರ್ಯಾರಿಗೂ ಸಾರ್ವಜನಿಕ ಮಾಹಿತಿಗಳನ್ನು ಮುಕ್ತವಾಗಿ ಸಾರ್ವಜನಿಕರಿಗೆ ತೆರೆದಿಡುವುದು ಆತಂಕದ ವಿಚಾರವೇ ಆಗಿತ್ತು.


ಮೋದಿ-2 ಸರಕಾರ ಆರಂಭವಾದಾಗಿನಿಂದ ಹಿಂದಿದ್ದ ಹಲವು ಕಾನೂನುಗಳ ತಿದ್ದುಪಡಿಗಳನ್ನು ಬಹಳ ವೇಗದಿಂದಲೇ ಮಾಡತೊಡಗಿದೆ. ಬ್ರಿಟಿಷ್ ಕಾಲದ ಅರಣ್ಯ ಕಾಯ್ದೆ ತಿದ್ದುಪಡಿ ಮಾಡಿ ಆದಿವಾಸಿ ಬುಡಕಟ್ಟುಗಳನ್ನು ಇನ್ನಿತರ ಜನಸಾಮಾನ್ಯರನ್ನು ಅವರ ಮೂಲ ಸ್ಥಳಗಳಿಂದಲೇ ಒಕ್ಕಲೆಬ್ಬಿಸಿ ಭಾರೀ ಕಾರ್ಪೊರೇಟುಗಳಿಗೆ ಹಸ್ತಾಂತರಿಸಲು ಅನುಕೂಲವಾಗುವಂತೆ ಮಾಡಲು ಹೊರಟಿರುವ ಬೆನ್ನ ಹಿಂದೆಯೇ ಹಳೆಯ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡಲು ತೊಡಗಿದೆ. ಕಾರ್ಮಿಕ ಕಾಯ್ದೆ, ಕಂಪೆನಿ ಕಾಯ್ದೆ, ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ (ಎನ್‌ಐಎ), ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ (ಯುಎಪಿಎ), ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಹೀಗೆ ಪಟ್ಟಿ ಸಾಗುತ್ತದೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾವಣೆ ಮಾಡಿ ಮತ್ತಷ್ಟು ಕೇಂದ್ರತ್ವ ಹಾಗೂ ಹಿಂದಿ ಭಾಷಾ ಹೇರಿಕೆ ಮಾಡುವ ಹುನ್ನಾರ ನಡೆಸಿದೆ. ಈ ಎಲ್ಲದರ ಬಗ್ಗೆ ದೇಶಾದ್ಯಂತ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಹಲವಾರು ಸಾಮಾಜಿಕ ಕಾರ್ಯಕರ್ತರ ನಿರಂತರ ಹೋರಾಟ ಜೊತೆಗೆ ಅಂತರ್‌ರಾಷ್ಟ್ರೀಯ ಮಾನದಂಡಗಳ ಒತ್ತಡಗಳ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿತ್ತು. ಪ್ರಜೆಗಳಿಗೆ ಸರಿಯಾದ ಮಾಹಿತಿಗಳ ಲಭ್ಯತೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ಮೂಲಭೂತ ಅಗತ್ಯಗಳಲ್ಲಿ ಒಂದು.

ಅದಕ್ಕೆ ಒಂದು ಮಟ್ಟದಲ್ಲಿ ಅವಕಾಶ ಕೊಟ್ಟಿದ್ದ ಕಾನೂನನ್ನು ಕೂಡ ಈಗ ಬಹಳ ಬಲಹೀನಗೊಳಿಸಿ ತಿದ್ದುಪಡಿಗಳನ್ನು ಮಾಡಲಾಗಿದೆ. ಅದು ಕಾನೂನಾಗಿ ಆಗಿದ್ದು ಕೂಡ ಭಾರತವೊಂದು ಪ್ರಜಾಪ್ರಭುತ್ವ ದೇಶವೆಂದು ಹೇಳಿಕೊಂಡು ಸುಮಾರು ಆರು ದಶಕಗಳ ನಂತರ. ಅದು ಭಾರತದ ಪ್ರಜಾಪ್ರಭುತ್ವದ ವಿಪರ್ಯಾಸವೆಂದು ಹೇಳಬಹುದು. ಈಗ ಅದನ್ನೂ ಕೂಡ ಇದ್ದೂ ಇಲ್ಲದ ಕಾನೂನನ್ನಾಗಿ ಮಾಡಲಾಗಿದೆ. ಪ್ರಸ್ತುತ ತಿದ್ದುಪಡಿಯ ಪ್ರಕಾರ ಯಾವುದೇ ಮಾಹಿತಿಗಳನ್ನು ನೀಡಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸುವುದು ಕೇಂದ್ರ ಸರಕಾರವಾಗುತ್ತದೆ. ಮಾಹಿತಿ ಹಕ್ಕು ಆಯೋಗಕ್ಕಿದ್ದ ಸ್ವಾಯತ್ತೆ ಹಾಗೂ ಅಧಿಕಾರಗಳನ್ನು ಮೊಟಕು ಮಾಡಿ ಮುಖ್ಯ ಮಾಹಿತಿ ಹಕ್ಕು ಕಮಿಷನರ್ ಕೇಂದ್ರ ಸರಕಾರದ ನೌಕರರನ್ನಾಗಿ ಮಾಡಲಾಗಿದೆ. ಈ ತಿದ್ದುಪಡಿಗಳಿಗೆ ಒಂದೆರಡು ಪಕ್ಷಗಳು ಬಿಟ್ಟರೆ ಬಹುತೇಕ ರಾಜಕೀಯ ಪಕ್ಷಗಳು ಬೆಂಬಲಿಸಿರುವುದು ಆಶ್ಚರ್ಯವೇನಲ್ಲ. ಆರಂಭದಲ್ಲಿ ವಿರೋಧಿಸಿದ ರಾಜಕೀಯ ನೇತಾರರೂ ಕೂಡ ನಂತರ ಅವುಗಳನ್ನು ಬೆಂಬಲಿಸಿದರು. ಸದನದಲ್ಲಿ ವಿರೋಧಿಸಬೇಕಾದವರು ಸಭಾತ್ಯಾಗದ ನಾಟಕವಾಡಿ ಎಲ್ಲಾ ತಿದ್ದುಪಡಿಗಳು ಅತ್ಯಲ್ಪವಿರೋಧದೊಂದಿಗೆ ಅನುಮೋದನೆಗೊಳ್ಳುವಂತೆ ಮಾಡಿದರು. ಯಾಕೆಂದರೆ ಅವರ್ಯಾರಿಗೂ ಸಾರ್ವಜನಿಕ ಮಾಹಿತಿಗಳನ್ನು ಮುಕ್ತವಾಗಿ ಸಾರ್ವಜನಿಕರಿಗೆ ತೆರೆದಿಡುವುದು ಆತಂಕದ ವಿಚಾರವೇ ಆಗಿತ್ತು. ಕೇವಲ ಹದಿನಾಲ್ಕು ವರುಷಗಳಲ್ಲೇ ಮಾಹಿತಿ ಹಕ್ಕು ಕಾಯ್ದೆ ಇಲ್ಲದ ರೀತಿಯಲ್ಲಿ ಮಾಡಿಡಲಾಗಿದೆ.

ಮೋದಿ ಸರಕಾರದ ಈ ನಡೆಗಳನ್ನು ಈ ಹಿಂದೆ ಮುಖ್ಯ ಮಾಹಿತಿ ಹಕ್ಕು ಕಮಿಷನರ್‌ಗಳಾಗಿದ್ದ ವಜಾಹತ್ ಹಬೀಬುಲ್ಲಾ, ದೀಪಕ್ ಸಂಧು ಹಾಗೂ ಈ ಹಿಂದಿನ ಮಾಹಿತಿ ಹಕ್ಕು ಕಮಿಷನರ್‌ಗಳಾಗಿದ್ದ ಶೈಲೇಶ್ ಗಾಂಧಿ, ಎಂ. ಎಂ. ಅನ್ಸಾರಿ, ಯಶೋವರ್ಧನ್ ಆಝಾದ್ ಹಾಗೂ ಅನ್ನಪೂರ್ಣ ದೀಕ್ಷಿತ್ ಟೀಕಿಸಿ ಇದು ಮಾಹಿತಿ ಹಕ್ಕು ಆಯೋಗದ ಸ್ವಾಯತ್ತೆ ಹಾಗೂ ಜನರ ಮಾಹಿತಿ ಪಡೆಯುವ ಮೂಲಭೂತ ಹಕ್ಕುಗಳ ಮೇಲೆ ನಡೆಯುತ್ತಿರುವ ನೇರ ದಾಳಿ ಎಂದಿದ್ದಾರೆ. ಮತ್ತೊಬ್ಬ ಮಾಜಿ ಕೇಂದ್ರ ಮಾಹಿತಿ ಹಕ್ಕು ಕಮಿಷನರ್ ಶ್ರೀಧರ್ ಆಚಾರ್ಯಲು ಮಾಹಿತಿ ಹಕ್ಕು ತಿದ್ದುಪಡಿ ಮಸೂದೆ 2019 ಅನ್ನು ಜನರ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರಕಾರ ನಡೆಸಿದ ದಾಳಿ ಎಂದಿದ್ದಾರೆ. ಭಾರತದ ಸರ್ವೋಚ್ಚ ನ್ಯಾಯಾಲಯ ಮಾಹಿತಿಗಳನ್ನು ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕೆಂದು ಪದೇ ಪದೇ ಹೇಳಿರುವುದನ್ನು ಉಲ್ಲೇಖಿಸಿ ಅವರು ಪ್ರತಿಕ್ರಿಯಿಸಿದ್ದಾರೆ.

ಇವುಗಳಲ್ಲಿ ಈಗ ಲೋಕಸಭೆ ಅಂಗೀಕರಿಸಿದ ಎನ್‌ಐಎ ಹಾಗೂ ಯುಎಪಿಎಗೆ ಮಾಡಿರುವ ತಿದ್ದುಪಡಿಗಳು ಬಹಳ ಅಪಾಯಕಾರಿಯಾಗಿವೆ. ಭಾರತದ ಮುಸ್ಲಿಂ ಅಲ್ಪಸಂಖ್ಯಾತರು, ದಲಿತ ಸಂಘಟನೆಗಳು, ಮಾನವ ಹಕ್ಕು ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು, ಪತ್ರಿಕಾ ಪ್ರತಿನಿಧಿಗಳು, ಮಾಧ್ಯಮಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ವಿದ್ಯಾರ್ಥಿ ಯುವಜನ ಸಂಘಟನೆಗಳು, ವಿರೋಧ ಪಕ್ಷಗಳು ಸೇರಿದಂತೆ ಜನಸಾಮಾನ್ಯರನ್ನು ಇದು ಭವಿಷ್ಯದಲ್ಲಿ ನೇರವಾಗಿ ಗುರಿಮಾಡುತ್ತದೆ. ಅಲ್ಲದೇ ಈ ತಿದ್ದುಪಡಿಗಳ ಕುರಿತು ಓದಿ ಚರ್ಚೆ ನಡೆಸಲು ಅಗತ್ಯವಿದ್ದಷ್ಟು ಸಮಯ ಒದಗಿಸಿ ಮತ್ತು ವ್ಯವಸ್ಥೆಗಳನ್ನು ಕೇಂದ್ರ ಸರಕಾರ ಮಾಡದೆ ತರಾತುರಿಯಲ್ಲಿ ತಿದ್ದುಪಡಿಗಳನ್ನು ಮುಂದಿಡುವಂತೆ ಮಾಡಿ ತನಗಿರುವ ಬಹುಮತದ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಅನುಮೋದನೆ ಮಾಡಿಸಿಕೊಂಡಿತು. ಇದಕ್ಕೆ ಸಮಾಜವಾದಿ ಪಾರ್ಟಿಯಂತಹ ಪಕ್ಷಗಳ ಬೆಂಬಲವನ್ನು ಮೋದಿ ಸರಕಾರ ಪಡೆಯಿತು.

ಯುಎಪಿಎ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಈಗಾಗಲೇ ಅನುಮೋದಿಸಿದೆ. ರಾಜ್ಯ ಸಭೆಯ ಅನುಮೋದನೆ ಕೂಡ ಆಗುವ ಸಾಧ್ಯತೆ ಇದೆ. ಅದರ ಪ್ರಕಾರ ಕೇಂದ್ರ ಸರಕಾರ ಯಾವುದೇ ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಆರೋಪ ಹೊರಿಸಿ ವರ್ಷಾನುಗಟ್ಟಲೆ ವಿಚಾರಣೆಯೇ ಇಲ್ಲದೇ ಬಂಧಿಸಿಡಬಹುದು. ಇದುವರೆಗೆ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿ ಪ್ರಕರಣ ಹೂಡುವ, ಅದರ ಸದಸ್ಯರೆಂದು ಬಂಧಿಸುವ ಅಧಿಕಾರ ಯುಎಪಿಎ ಪ್ರಕಾರ ಕೇಂದ್ರ ಸರಕಾರಕ್ಕೆ ಇತ್ತು. ಆದರೆ ಅಂತಿಮ ತೀರ್ಮಾನ ಏನಿದ್ದರೂ ನ್ಯಾಯಾಲಯದ್ದಾಗಿತ್ತು. ನ್ಯಾಯಾಲಯದಲ್ಲಿ ಅದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಸರಕಾರದ್ದಾಗಿತ್ತು.

ಹಾಗಿದ್ದಾಗಲೂ ಅದನ್ನು ಬಳಸಿ ಅದರ ಹಲವು ಕರಾಳ ಕಲಮುಗಳನ್ನು ಹಾಕಿ ಸಾವಿರಾರು ಆದಿವಾಸಿ ಬುಡಕಟ್ಟು ಜನರನ್ನು, ಹೋರಾಟಗಾರರನ್ನು, ಪ್ರಜಾತಂತ್ರವಾದಿಗಳನ್ನು ಬಂಧಿಸಿ ಸೆರಮನೆಯಲ್ಲಿಡಲಾಗಿದೆ. ಈಗಿನ ತಿದ್ದುಪಡಿಯ ಅಪಾಯವೇನೆಂದರೆ ನ್ಯಾಯಾಲಯವನ್ನು ಹೊರಗಿಟ್ಟು ಕೇಂದ್ರ ಸರಕಾರವೇ ಅಂತಹ ತೀರ್ಮಾನಕ್ಕೆ ಬರುವ, ಅದರಂತೆ ಕ್ರಮ ಜರುಗಿಸುವ ಒಂದು ರೀತಿಯ ಪ್ರಶ್ನಾತೀತ ಶಾಸನಬದ್ಧ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಈಗಿನ ತಿದ್ದುಪಡಿಗಳು ನೀಡುತ್ತದೆ. ಈ ತಿದ್ದುಪಡಿಯ 35 (3) (ಜ) ಪ್ರಕಾರ ಕೇಂದ್ರ ಸರಕಾರಕ್ಕೆ ಅನಿರ್ಬಂಧಿತ ಅಧಿಕಾರವನ್ನು ನೀಡುತ್ತದೆ. ಇದನ್ನು ಬಳಸಿ ಕೇಂದ್ರ ಸರಕಾರ ದೇಶದ ಯಾವುದೇ ಭಾಗದಲ್ಲಿ ನೇರವಾಗಿ ರಾಜ್ಯ ಸರಕಾರಗಳ ಅಂಗೀಕಾರ ಪಡೆಯದೆ ಕಾರ್ಯಾಚರಿಸಿ ಯಾವುದೇ ಸಂಘಟನೆ ಇಲ್ಲವೇ ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ತೀರ್ಮಾನಿಸಿ ಬಂಧಿಸಬಹುದು. ವಿಚಾರಣೆಯೇ ಇಲ್ಲದೆ, ಜಾಮೀನು ನೀಡದೆ ಕನಿಷ್ಠ ಆರು ತಿಂಗಳ ಕಾಲದಿಂದ ಹಲವು ವರ್ಷಗಳವರೆಗೆ ಬಂಧನದಲ್ಲಿಡಬಹುದು. ಜೊತೆಗೆ ಅವರ ಆಸ್ತಿಪಾಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರಗಳನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ. ಸಂಬಂಧಿತರೇ ಕೇಂದ್ರ ಸರಕಾರಕ್ಕೆ ತಾವುಗಳು ನಿರ್ದೋಷಿಗಳೆಂದು ಸಾಬೀತುಪಡಿಸಬೇಕಾಗುತ್ತದೆ.

ಮೊದಲಿದ್ದಂತೆ ಸರಕಾರ ಬಂಧಿತರ ಮೇಲಿರುವ ಆರೋಪಗಳನ್ನು ನ್ಯಾಯಾಲಯಕ್ಕೆ ಸಾಬೀತು ಪಡಿಸುವ ಹೊಣೆಗಾರಿಕೆಯಿಂದ ಹೊರಗುಳಿಯುತ್ತದೆ. ಅಲ್ಲದೆ ನ್ಯಾಯಾಲಯವನ್ನು ಹೊರಗಿಟ್ಟು ಸರಕಾರವೇ ಇವೆಲ್ಲವನ್ನೂ ತೀರ್ಮಾನಿಸುವ ಅಧಿಕಾರ ಹೊಂದುತ್ತದೆ. ಅಂದರೆ ನ್ಯಾಯಾಂಗದ ಅಧಿಕಾರವನ್ನು ಮೊಟಕು ಮಾಡಿ ಪ್ರಭುತ್ವದ ಫ್ಯಾಶಿಸ್ಟ್ ಅಧಿಕಾರಗಳನ್ನು ಏಕಪಕ್ಷೀಯವಾಗಿ ಹೇರುವ ಒಂದು ಪ್ರಯತ್ನವೇ ಈ ತಿದ್ದುಪಡಿಗಳಾಗಿವೆ ಎನ್ನಬಹುದು. ಇದಕ್ಕೆ ಪೂರಕವಾಗಿ ದೇಶದ ಯಾವುದೇ ಭಾಗದಲ್ಲಿ ಆಯಾ ರಾಜ್ಯ ಸರಕಾರಗಳ ಅನುಮತಿಯಿಲ್ಲದೆ ಕಾರ್ಯಾಚರಿಸುವ, ಬಂಧಿಸುವ, ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಗೆ ಮಾಡಿದ ತಿದ್ದುಪಡಿಗಳು ನೀಡುತ್ತವೆ. ಅಂದರೆ ಕೇಂದ್ರ ಸರಕಾರ ಎನ್‌ಐಎ ಮೂಲಕ ರಾಜ್ಯ ಸರಕಾರಗಳನ್ನು ಬದಿಗೊತ್ತಿ ಏಕಪಕ್ಷೀಯವಾಗಿ ಕೇಂದ್ರಾಧಿಪತ್ಯವನ್ನು ಚಲಾಯಿಸುತ್ತದೆ ಎಂದೇ ಈ ತಿದ್ದುಪಡಿಗಳ ಒಳಾರ್ಥ.
ಹಾಗಾಗಿ ಈ ತಿದ್ದುಪಡಿಗಳು ಜನಸಾಮಾನ್ಯರ ಮೇಲೆ, ಒಕ್ಕೂಟ ವ್ಯವಸ್ಥೆಯ ಮೇಲೆ, ಈಗಿರುವ ರಾಜ್ಯಗಳ ಅಧಿಕಾರಗಳ ಮೇಲೆ ಭಾರೀ ಅಪಾಯಕಾರಿ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಉಂಟುಮಾಡುತ್ತವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಗೃಹಮಂತ್ರಿ ಅಮಿತ್ ಶಾ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಗಳನ್ನು ಮಂಡಿಸುತ್ತಾ ಯಾರೇ ವ್ಯಕ್ತಿಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವ, ಅದಕ್ಕೆ ಹಣಕಾಸು ಒದಗಿಸುವ, ಸಿದ್ಧಾಂತಗಳನ್ನು ಬೆಂಬಲಿಸುವ, ಅಂತಹ ಸಿದ್ಧಾಂತಗಳನ್ನು ಯುವಜನಾಂಗದ ಮಧ್ಯೆ ಹರಡುವವರನ್ನು ಭಯೋತ್ಪಾದಕರೆಂದು ಪರಿಗಣಿಸಬಹುದು. ಭಯೋತ್ಪಾದನೆಯೆಂದರೆ ಕೇವಲ ಬಂದೂಕಿನ ಬಳಕೆ ವಿಚಾರ ಮಾತ್ರವಲ್ಲ, ಭಯೋತ್ಪಾದನೆಯೆಂದರೆ ದ್ವೇಷ ಹರಡುವುದು ಬಂಡಾಯ ವೈಚಾರಿಕತೆಯ ಹರಡುವಿಕೆ ಕೂಡ ಭಯೋತ್ಪಾದನೆಯೇ ಆಗುತ್ತದೆ. ಸಾಮಾಜಿಕ ಚಟುವಟಿಕೆ ನೆಪದಲ್ಲಿ ಸೈದ್ಧಾಂತಿಕ ಚಳವಳಿಯೆಂದು ಹೇಳಿಕೊಳ್ಳುವ ವಿಶೇಷವಾಗಿ ಮಾವೋವಾದಿಗಳು ನಗರ ನಕ್ಸಲರ ಚಟುವಟಿಕೆಗಳನ್ನು ಸರಕಾರ ಸಹಿಸುವುದಿಲ್ಲ ಎಂದಿದ್ದಾರೆ.

ಈಗಾಗಲೇ ಪ್ರಾಧ್ಯಾಪಕರು, ವಕೀಲರು, ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಸಾವಿರಾರು ಜನರನ್ನು ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದವರು, ನಕ್ಸಲರು, ನಗರ ನಕ್ಸಲರು ಎಂದೆಲ್ಲಾ ಕಾರಣಗಳನ್ನು ನೀಡಿ ದೇಶದ ವಿವಿಧ ಕಾರಾಗೃಹಗಳಲ್ಲಿ ಕರಾಳ ಯುಎಪಿಎಯ ಹಲವು ಕಲಮುಗಳಡಿ ಬಂಧಿಸಿಟ್ಟಿರುವುದನ್ನು ನಾವಿಲ್ಲಿ ಗಮನಕ್ಕೆ ತೆಗೆದುಕೊಳ್ಳಬಹುದು. ಕಳೆದ ವರ್ಷ ಭೀಮ ಕೋರೆಗಾಂವ್ ಘಟನೆಯ ನೆಪದಿಂದ, ಪ್ರಧಾನಿ ಮೋದಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾರೆಂಬ ನೆಪ ಮಾಡಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಗಳಿಗೆ ಸೇರಿರುವ ಹಲವು ಸಮಾಜಮುಖಿ ಬುದ್ಧಿಜೀವಿಗಳು, ಚಿಂತಕರು, ಕವಿಗಳು, ಪತ್ರಕರ್ತರು, ವಕೀಲರನ್ನು ಯುಎಪಿಎಯ ಹಲವು ಕಲಮುಗಳಡಿ ಬಂಧಿಸಿದ್ದರು. ಅವರಿಗೆ ಜಾಮೀನು ಸಿಗದಂತೆ ಮಾಡಿ, ಆರೋಪ ಪಟ್ಟಿಗಳನ್ನು ಕೂಡ ಬೇಕೆಂದೇ ವಿಳಂಬ ಮಾಡಿ, ವರ್ಷ ಕಳೆದರೂ ಇನ್ನೂ ಸೆರೆಮನೆಯಿಂದ ಹೊರಬರದಂತೆ ಮಾಡಿಟ್ಟಿರುವುದನ್ನೂ ನಾವಿಲ್ಲಿ ಗಮನಿಸಬಹುದು. ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖಾ ಸೇರಿದಂತೆ ಹಲವರ ಮೇಲೆ ಇದೇ ಕಲಮುಗಳಡಿ ದೂರು ದಾಖಲಿಸಿ ಬಂಧಿಸಲು ಪ್ರಯತ್ನಿಸಲಾಗಿದ್ದರೂ ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ತಾತ್ಕಾಲಿಕ ತಡೆಯಾಗಿದೆ.

ನ್ಯಾಯಾಲಯದ ಅಧೀನದಡಿಯಲ್ಲ್ಲಿಯೇ ಯುಎಪಿಎ ಕಾನೂನು ಇಟ್ಟುಕೊಂಡು ಪ್ರಭುತ್ವ ಇಷ್ಟು ಕರಾಳವಾಗಿ ವರ್ತಿಸುತ್ತಿರುವಾಗ ಇನ್ನು ನ್ಯಾಯಾಲಯದ ಪರಿದಿಯಿಂದ ಈ ಕಾನೂನನ್ನು ಹೊರಗಿಟ್ಟು ಕೇಂದ್ರ ಸರಕಾರವೇ ತೀರ್ಪು ನೀಡಿ ಶಿಕ್ಷೆ ನೀಡುವಂತಾದರೆ ಅದರ ಕರಾಳತೆ ಹೇಗಿರಲು ಸಾಧ್ಯ ಎನ್ನುವುದನ್ನು ಊಹಿಸಿಕೊಳ್ಳಬಹುದು. ಮೊನ್ನೆ ಗುಂಪು ಹತ್ಯೆ ನಡೆಸುವ, ಜೈ ಶ್ರೀರಾಮ್ ಉಚ್ಚಾರವನ್ನು ಹೇರಿ ಥಳಿಸುವ ಘಟನೆಗಳ ಕುರಿತಂತೆ ಪ್ರಧಾನಿ ಮೋದಿಗೆ ಸಾಮೂಹಿಕ ಪತ್ರ ಬರೆದ ಹಲವು ಲೇಖಕರು, ಸಾಹಿತಿಗಳು, ಸಿನೆಮಾ ರಂಗದ ಗಣ್ಯರು ಸೇರಿದಂತೆ ನೂರಾರು ಜನರ ಮೇಲೆ ರಾಜದ್ರೋಹ, ಮತೀಯ ಧ್ವೇಷ ಹರಡುವುದು ಸೇರಿದಂತೆ ಹಲವು ಪ್ರಕರಣಗಳಡಿ ದೂರನ್ನು ದಾಖಲು ಮಾಡಿಕೊಳ್ಳಲಾಗಿರುವುದನ್ನೂ ನಾವಿಲ್ಲಿ ಗಮನಿಸಬೇಕು. ಜೊತೆಗೆ ಇಂದಿರಾ ಜೈಸಿಂಗ್‌ರಂತಹ ಸರ್ವೋಚ್ಚ ನ್ಯಾಯಾಲಯದ ಹೆಸರಾಂತ ವಕೀಲರು ನಡೆಸುತ್ತಿರುವ ಸಂಸ್ಥೆಗಳ ಮೇಲೆ ಕುಂಟು ನೆಪಗಳಡಿ ಮಾಡಿರುವ ದಾಳಿಗಳನ್ನು ಕೂಡ ಗಮನಿಸಬಹುದು. ಹಿಂದಿನಿಂದ ಕೋಮುವಾದಿ ದಾಳಿಗಳನ್ನು ವಿರೋಧಿಸಿ ನಿಂತಿದ್ದಕ್ಕಾಗಿ ತೀಸ್ತಾ ಸೆಟಲ್ವಾಡ್‌ರ ಮೇಲೆ ದಾಖಲಾಗಿರುವ ಪ್ರಕರಣಗಳು, ಮಾಡುತ್ತಿರುವ ದಾಳಿಗಳನ್ನು ನಾವು ನೋಡಬಹುದು. ಅಂದರೆ ಒಂದು ಅಪ್ಪಟ ಪ್ರಜಾತಾಂತ್ರಿಕ ನಡೆಗಳಿಗೂ ಕೂಡ ರಾಜದ್ರೋಹದಂತಹ ಪ್ರಕರಣಗಳು ದಾಖಲಾಗುವ ಸಂದರ್ಭವಾಗಿದೆ ಇದು. ಹಾಗಿರುವಾಗ ಇಂತಹ ಪ್ರಭುತ್ವಕ್ಕೆ ಅಪರಿಮಿತ ಅಧಿಕಾರಗಳನ್ನು ನೀಡುವ ಇಂತಹ ಕಾನೂನು ತಿದ್ದುಪಡಿಗಳು ಭವಿಷ್ಯದಲ್ಲಿ ಉಂಟುಮಾಡಬಹುದಾದ ಗಂಭೀರ ಪರಿಣಾಮಗಳನ್ನು ನಾವು ಅಂದಾಜು ಮಾಡಬಹುದು.

ಟಾಡಾ, ಪೋಟಾದಂತಹ ಕರಾಳ ಕಾನೂನುಗಳು ರದ್ದುಗೊಳಿಸಬೇಕಾಗಿ ಬಂದಿದ್ದರೂ ಅದರ ಮುಂದುವರಿಕೆಯಾಗಿ ಯುಎಪಿಎ 1967 ಅನ್ನು ತಿದ್ದುಪಡಿಗಳೊಂದಿಗೆ ಕರಾಳಗೊಳಿಸಿ ಉದಾರವಾದಿ ಕಾನೂನು ಎಂದು ಬಿಂಬಿಸಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರಗಳು ಜಾರಿಗೊಳಿಸಿದ್ದವು. ಈಗ ಮೋದಿ ಸರಕಾರ ಯುಎಪಿಎ ಎಂಬ ದಮನಕಾರಿ ಕಾನೂನು ಅಸ್ತ್ರವನ್ನು ತಾನೇ ನೇರವಾಗಿ ಪ್ರಯೋಗಿಸಲು ಸಜ್ಜು ಮಾಡಿಕೊಳ್ಳುತ್ತಿದೆ. ಅದೇ ವೇಳೆ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ದರ್ಗಾ ದಾಳಿಗಳಂತಹವುಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಗಳಡಿ ಬಂಧಿಸಲ್ಪಟ್ಟ ಪ್ರಜ್ಞಾಸಿಂಗ್, ಪುರೋಹಿತ್‌ರಂತಹವರ ಮೇಲೆ, ಗೋಮಾಂಸ, ಜೈ ಶ್ರೀರಾಮ್ ಹೆಸರಿನಲ್ಲಿ ನಡೆಸುವ ಗುಂಪು ಹತ್ಯಾಕಾರರ ಮೇಲೆ, ಹಲ್ಲೆಕಾರರ ಮೇಲೆ, ಮುಸ್ಲಿಮ್, ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದ್ವೇಷ ಹರಡುವವರ ಮೇಲೆ, ದಲಿತರ ಕಗ್ಗೊಲೆ ಮಾಡುವವರ ಮೇಲೆ, ದಲಿತರ ಬಹಿಷ್ಕಾರ ಹಾಕುವವರ ಮೇಲೆ ಇಂತಹ ಕಾನೂನು ತಿದ್ದುಪಡಿಗಳು ವರ್ತಿಸುವುದಿಲ್ಲ ಎನ್ನುವುದು ಹಿಂದಿನ ಟಾಡಾ, ಪೋಟಾ, ಯುಎಪಿಎ ಜಾರಿಯಾದ ನಂತರದ ಚರಿತ್ರೆಯಿಂದಲೇ ನಾವು ಅರ್ಥಮಾಡಿಕೊಳ್ಳಬಹುದು. ಈಗ ಮಾಡುತ್ತಿರುವ ಕಾನೂನು ತಿದ್ದುಪಡಿಗಳು ಬಿಡಿ ಬಿಡಿ ಪ್ರಕರಣಗಳಾಗಿ ನೋಡದೇ ಒಟ್ಟಾರೆಯಾಗಿ ನೋಡಿ ಬ್ರಾಹ್ಮಣಶಾಹಿ- ಕಾರ್ಪೊರೇಟ್ ಫ್ಯಾಶಿಸ್ಟ್ ವ್ಯವಸ್ಥೆಯೊಂದನ್ನು ಹೇರುವ ವ್ಯವಸ್ಥಿತ ನಡೆಗಳೆಂದು ಗ್ರಹಿಸಬೇಕು.

ಸರಕಾರದ ಇಂತಹ ಅಪಾಯಕಾರಿ ಕರಾಳ ನಡೆಗಳನ್ನು ವಿರೋಧ ಪಕ್ಷಗಳ ಭಂಡ ನಿಷ್ಕ್ರಿಯತೆಗಳನ್ನು ವಿರೋಧಿಸಿ ಜನಸಾಮಾನ್ಯರು, ಜನಪರಸಂಘಟನೆಗಳು ಒಗ್ಗೂಡಿ ನಿಂತು ಇಂತಹ ಭಾರೀ ಅಪಾಯಕಾರಿ ಪ್ರಜಾಪ್ರಭುತ್ವ ವಿರೋಧಿ ತಿದ್ದುಪಡಿ-ಕಾನೂನುಗಳು ಜಾರಿಯಾಗದಂತೆ ತಡೆಯುವುದು ಅತ್ಯಗತ್ಯವಾಗಿದೆ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News