ಅಂಗವಿಕಲರಿಗೆ ಸಿಹಿ ಸುದ್ದಿ: ಬಸ್ ಗಳಲ್ಲಿ ಕಡ್ಡಾಯವಾಗಲಿದೆ ಈ ಸೌಲಭ್ಯ...

Update: 2019-07-30 11:18 GMT

ಹೊಸದಿಲ್ಲಿ: ಹದಿಮೂರಕ್ಕಿಂತ ಹೆಚ್ಚು ಆಸನಗಳನ್ನು ಹೊಂದಿರುವ ಬಸ್ಸುಗಳು ವ್ಹೀಲ್‌ಚೇರ್‌ಗಾಗಿ ರ್ಯಾಂಪ್‌ಗಳನ್ನು ಹೊಂದಿರಬೇಕು ಮತ್ತು ಅವುಗಳನ್ನು ಲಾಕ್ ಮಾಡುವ ವ್ಯವಸ್ಥೆ ಸೇರಿದಂತೆ ಅಂಗವಿಕಲ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವುದು ಕಡ್ಡಾಯ ಪಡಿಸುವ ಕರಡು ನಿಯಮಾವಳಿಯನ್ನು ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದೆ.

ಬಸ್ಸುಗಳು ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯಲು ಈ ಸೌಲಭ್ಯಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎನ್ನುವ ಕರಡು ನಿಯಮಾವಳಿಯನ್ನು ಸಾರಿಗೆ ಸಚಿವಾಲಯ ಇದೇ ಮೊದಲ ಬಾರಿಗೆ ಹೊರಡಿಸಿದೆ.

ಇಂಥ ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ಬಸ್ಸುಗಳನ್ನು ಓಡಿಸುವುದು ಕಾನೂನು ಬಾಹಿರವಾಗಿರುತ್ತದೆ. ಬಸ್ಸು ಹಾಗೂ ಇತರ ವಾಣಿಜ್ಯ ವಾಹನಗಳು ತಮ್ಮ ಫಿಟ್ನೆಸ್ ಪ್ರಮಾಣಪತ್ರಗಳನ್ನು ವಾರ್ಷಿಕವಾಗಿ ನವೀಕರಿಸಿಕೊಳ್ಳಬೇಕಾಗುತ್ತದೆ.

ಕರಡು ಅಧಿಸೂಚನೆಯ ಪ್ರಕಾರ, ಬಸ್ಸುಗಳು ಆದ್ಯತೆ ಆಸನಗಳು, ಸಂಕೇತಗಳು, ವಾಕರ್‌ಗಳು, ಹ್ಯಾಂಡ್‌ರೇಲ್, ಊರುಗೋಲು ಮತ್ತಿತರ ಸೌಲಭ್ಯಗಳನ್ನು ಹೊಂದಿರುವುದು ಕಡ್ಡಾಯ.

"ನಗರಗಳಲ್ಲಿ ಓಡಾಡುವ ಕೆಳಮಟ್ಟದ ನೆಲ ಹೊಂದಿರುವ ಬಸ್ಸುಗಳು ವ್ಹೀಲ್‌ಚೇರ್ ಒಯ್ಯಲು ಅನುಕೂಲವಾಗುವಂತೆ ರ್ಯಾಂಪ್ ಹೊಂದಿವೆ. ಆದರೆ ಈ ಬಸ್ಸುಗಳಲ್ಲಿ ಲಾಕಿಂಗ್ ವ್ಯವಸ್ಥೆಗಳಿಲ್ಲ. ವ್ಹೀಲ್‌ಚೇರ್‌ಗೆ ಸೂಕ್ತ ಜಾಗ ನಿಗದಿಪಡಿಸುವ ಹಾಗೂ ಅವುಗಳನ್ನು ಲಾಕ್ ಮಾಡುವ ವ್ಯವಸ್ಥೆ ಇಲ್ಲದಿದ್ದರೆ ಅದು ಅಂಗವಿಕಲರಿಗೆ ಅನುಕೂಲವಾಗುವುದಿಲ್ಲ" ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News