ಕಾರಾಗೃಹದಲ್ಲಿ ವಿರೋಧಿ ಬಣಗಳ ನಡುವೆ ಸಂಘರ್ಷ: 57 ಕೈದಿಗಳ ಸಾವು

Update: 2019-07-30 08:32 GMT

ಸಾವೊ ಪೌಲೊ, ಜು.30: ಬ್ರೆಝಿಲ್ ದೇಶದ ಪಾರ ಎಬ ರಾಜ್ಯದ ಅಲ್ತಮೀರ ಕಾರಾಗೃಹದಲ್ಲಿ ಪರಸ್ಪರ ವಿರೋಧಿ ಕೈದಿ ಬಣಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 57 ಮಂದಿ ಸಾವಿಗೀಡಾಗಿದ್ದಾರೆ. ಮೃತರ ಪೈಕಿ ಸುಮಾರು 17 ಜನರ ತಲೆಗಳನ್ನು ಕಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾರಾಗೃಹದ ಒಂದು ಬ್ಲಾಕ್ ನಲ್ಲಿದ್ದ ಗ್ಯಾಂಗ್ ಸದಸ್ಯರು ಇನ್ನೊಂದು ಬ್ಲಾಕ್ ಆಕ್ರಮಿಸಿದ ನಂತರ ಈ ಸಂಘರ್ಷ ನಡೆದಿದೆ.  ಸಂಘರ್ಷನಿರತರು ಜೈಲಿನ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದರಿಂದ ಹಲವರು ಉಸಿರುಗಟ್ಟಿ ಸಾವಿಗೀಡಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಕಾರಾಗೃಹ ಅಧಿಕಾರಿಗಳಿಗೆ ಕೈದಿಗಳು ದಿಗ್ಬಂಧನ ವಿಧಿಸಿದ್ದರೂ ನಂತರ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಸೋಮವಾರ ಸ್ಥಳೀಯ ಕಾಲಮಾನ 7 ಗಂಟೆಗೆ ಈ ಹಿಂಸಾಚಾರ ಭುಗಿಲೆದ್ದಿತ್ತಲ್ಲದೆ, ಪರಿಸ್ಥಿತಿ  ಅಪರಾಹ್ನದ ನಂತರವಷ್ಟೇ ಹತೋಟಿಗೆ ಬಂದಿತ್ತು. ಕೊಮಾಂಡೊ ಕ್ಲಾಸೆ ಎ (ಸಿಸಿಎ) ಗ್ಯಾಂಗ್ ಸದಸ್ಯರು ವಿರೋಧಿ ಬಣ ಕೊಮಾಂಡೊ ವೆರ್ಮೆಲ್ಹೊ (ರೆಡ್ ಕಮಾಂಡ್) ಕೈದಿಗಳಿದ್ದ ಸೆಲ್ ಗೆ ದಾಳಿ ನಡೆಸಿದ್ದೇ ಈ ಭೀಕರ ಕಾಳಗಕ್ಕೆ ಕಾರಣವಾಗಿತ್ತು.

ಈ ನಿರ್ದಿಷ್ಟ ಕಾರಾಗೃಹದಲ್ಲಿ 200 ಕೈದಿಗಳಿಗೆ ಸ್ಥಳಾವಕಾಶವಿದ್ದರೂ ಅಲ್ಲಿ 309 ಕೈದಿಗಳನ್ನಿರಿಸಲಾಗಿದೆ. ಈ ಕಾಳಗಕ್ಕೆ ಕಾರಣರಾದವರನ್ನು ಗರಿಷ್ಠ ಭದ್ರತೆಯಿರುವ ಇತರ ಕಾರಾಗೃಹಗಳಿಗೆ ಸ್ಥಳಾಂತರಿಸಬೇಕೆಂದಬ ಆಗ್ರಹ ಈಗ ಕೇಳಿ ಬಂದಿದೆ.

ಬ್ರೆಝಿಲ್ ದೇಶದ ಜೈಲುಗಳಲ್ಲಿ ಸುಮಾರು 7 ಲಕ್ಷ ಕೈದಿಗಳಿರುವುದರಿಂದ ಅಲ್ಲಿ ಕಲಹಗಳು ಹಾಗೂ ಸಂಘರ್ಷಗಳು ಸಾಮಾನ್ಯವಾಗಿವೆ. ಮೇ ತಿಂಗಳಲ್ಲಿ ಉತ್ತರದ ಅಮೆಝೊನಾಸ್ ರಾಜ್ಯದ ಕಾರಾಗೃಹಗಳ ಮೇಲೆ ನಡೆದ ದಾಳಿಗಳಲ್ಲಿ 55 ಕೈದಿಗಳು ಸಾವನ್ನಪ್ಪಿದ್ದರು. 2017ರಲ್ಲಿ ಇದೇ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರದಲ್ಲಿ 150 ಕೈದಿಗಳು ಬಲಿಯಾಗಿದ್ದರು.  ಬ್ರೆಜಿಲ್ ದೇಶದ ಡ್ರಗ್ಸ್ ಮಾಫಿಯಾ ಬೆಂಬಲಿತ ಪರಸ್ಪರ ವಿರೋಧಿ ಗ್ಯಾಂಗುಗಳು ಈ ಸಂಘರ್ಷಕ್ಕೆ ಕಾರಣ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News