ಅಫ್ಘಾನ್: 2019ರ ಮೊದಲಾರ್ಧದಲ್ಲಿ 3,812 ನಾಗರಿಕರ ಸಾವು

Update: 2019-07-30 16:45 GMT

ಕಾಬೂಲ್, ಜು. 30: ಅಫ್ಘಾನಿಸ್ತಾನದಲ್ಲಿ 2019ರ ಮೊದಲಾರ್ಧದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಠ 3,812 ನಾಗರಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ, ಸರಕಾರಿ ಮತ್ತು ನ್ಯಾಟೋ-ನೇತೃತ್ವದ ಪಡೆಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಮಂಗಳವಾರ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ನಾಗರಿಕರು ಯಾವುದೇ ಕ್ಷಣದಲ್ಲಿ ದಾಳಿಗೊಳಗಾಗುವ ನಿರಂತರ ಭಯದಲ್ಲೇ ಜೀವಿಸುತ್ತಿದ್ದಾರೆ. ಭಯೋತ್ಪಾದಕರ ಆತ್ಮಹತ್ಯಾ ಬಾಂಬ್ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಸರಕಾರಿ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಕಾಳಗದಲ್ಲಿ ನಾಗರಿಕರು ಸಿಕ್ಕಿಹಾಕಿಕೊಂಡು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ, ಅಫ್ಘಾನ್ ಸರಕಾರಿ ಮತ್ತು ನ್ಯಾಟೋ ಪಡೆಗಳು ನಡೆಸುವ ವಾಯು ದಾಳಿಗಳಲ್ಲೂ ಹಲವು ಸಂದರ್ಭಗಳಲ್ಲಿ ನಾಗರಿಕರು ಬಲಿಯಾಗುತ್ತಾರೆ.

ಭೂದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಬಲಿಯಾಗಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆ ಕಚೇರಿ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

 ಜನವರಿ 1 ಮತ್ತು ಜೂನ್ 30ರ ನಡುವೆ, ತಾಲಿಬಾನ್ ಮತ್ತು ಐಸಿಸ್ ಭಯೋತ್ಪಾದಕರು ನಡೆಸಿದ ದಾಳಿಗಳಲ್ಲಿ 531 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1,437 ಮಂದಿ ಗಾಯಗೊಂಡಿದ್ದಾರೆ. ಈ ಉಗ್ರ ಗುಂಪುಗಳು ಸರಕಾರಿ ಅಧಿಕಾರಿಗಳು, ಬುಡಕಟ್ಟು ಹಿರಿಯರು, ನೆರವು ಕಾರ್ಯಕರ್ತರು ಮತ್ತು ಧಾರ್ಮಿಕ ವಿದ್ವಾಂಸರು ಸೇರಿದಂತೆ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಮಾಡಿತ್ತು.

ಸರಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ 717 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ 680 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News