ಸರಕಾರಿ ಏಜನ್ಸಿಗಳು, ಬ್ಯಾಂಕುಗಳು ಯಾರನ್ನು ಬೇಕಾದರೂ ಹತಾಶೆಗೆ ನೂಕಬಹುದು

Update: 2019-07-31 08:46 GMT

ಹೊಸದಿಲ್ಲಿ, ಜು.31: ‘ಕೆಫೆ ಕಾಫಿ ಡೇ’ ಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರಿದ್ದ ಪರಿಸ್ಥಿತಿಗೂ ತಾನೀಗ ಇರುವ ಪರಿಸ್ಥಿತಿಗೂ ಹೋಲಿಸಿ ಉದ್ಯಮಿ ವಿಜಯ್ ಮಲ್ಯ ಬುಧವಾರ ಟ್ವೀಟ್ ಮಾಡಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳಿಂದ ಸಿದ್ಧಾರ್ಥ ಕಿರುಕುಳಕ್ಕೊಳಗಾಗಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಮಲ್ಯ ಟ್ವೀಟ್ ಮಾಡಿದ್ದಾರೆ.

“ನಾನು ವಿ ಜಿ ಸಿದ್ಧಾರ್ಥ ಜತೆ ಪರೋಕ್ಷ ಸಂಬಂಧ ಹೊಂದಿದ್ದೇನೆ. ಅವರೊಬ್ಬ ಅತ್ಯುತ್ತಮ ವ್ಯಕ್ತಿ ಹಾಗೂ ಪ್ರತಿಭಾನ್ವಿತ ಉದ್ಯಮಿಯಾಗಿದ್ದರು. ಅವರು ಬರೆದಿರುವ ಪತ್ರದಲ್ಲಿನ ವಿಷಯಗಳನ್ನು ಓದಿ ಆಘಾತವಾಗಿದೆ. ಸರಕಾರಿ ಏಜನ್ಸಿಗಳು ಹಾಗೂ ಬ್ಯಾಂಕುಗಳು ಯಾರನ್ನು ಬೇಕಾದರೂ ಹತಾಶೆಗೆ ನೂಕಬಹುದು. ಸಂಪೂರ್ಣ ಹಣ ಮರುಪಾವತಿ ಮಾಡುವುದಾಗಿ ತಿಳಿಸಿದರೂ ಅವರು ನನಗೇನು ಮಾಡುತ್ತಿದ್ದಾರೆ ನೋಡಿ. ಕೆಟ್ಟ ಮತ್ತು ಹಠಮಾರಿ ಧೋರಣೆ'' ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

“ಪಾಶ್ಚಿಮಾತ್ಯ ದೇಶಗಳಲ್ಲಿ ಸರಕಾರ ಹಾಗೂ ಬ್ಯಾಂಕುಗಳು ಸಾಲಗಾರರಿಗೆ  ಸಾಲ ಮರುಪಾವತಿಸಲು ಸಹಾಯ ಮಾಡುತ್ತವೆ. ಆದರೆ ನನ್ನ ಪ್ರಕರಣದಲ್ಲಿ ಸಾಲ ಮರುಪಾವತಿಗೆ ನಾನು ಮಾಡುತ್ತಿರುವ ಪ್ರತಿಯೊಂದು ಯತ್ನಕ್ಕೆ ಅವರು ಅಡ್ಡಿ ಪಡಿಸುತ್ತಿದ್ದಾರೆ'' ಎಂದು ಇನ್ನೊಂದು ಟ್ವೀಟ್ ನಲ್ಲಿ ಮಲ್ಯ ಬರೆದಿದ್ದಾರೆ.

ಸದ್ಯ ಇಂಗ್ಲೆಂಡಿನಲ್ಲಿರುವ ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News