ಆರೆಸ್ಸೆಸ್ ಹಿನ್ನೆಲೆಯಿಂದ ಹೊರ ಬಂದು ಸಂವಿಧಾನಕ್ಕೆ ನಿಷ್ಠರಾಗಿ: ನೂತನ ಸ್ಪೀಕರ್ ಗೆ ರಮೇಶ್ ಕುಮಾರ್ ಸಲಹೆ

Update: 2019-07-31 13:48 GMT

ಬೆಂಗಳೂರು, ಜು. 31: ‘ನಿಮ್ಮ ನಿಷ್ಠೆ ಸಮಾನತೆ ಪ್ರತಿಪಾದಿಸುವ ಸಂವಿಧಾನಕ್ಕೋ ಅಥವಾ ಶ್ರೇಣೀಕೃತ ವರ್ಣಾಶ್ರಮ ಪದ್ಧತಿಯನ್ನು ಅನುಸರಿಸುವ ಮನುಧರ್ಮಕ್ಕೋ’ ಎಂಬ ಪ್ರಶ್ನೆ ವಿಧಾನಸಭೆಯ ಕಲಾಪದಲ್ಲಿ ಕೆಲಕಾಲ ಗಂಭೀರ ಸ್ವರೂಪದ ಕಾವೇರಿದ ಚರ್ಚೆಗೆ ಕಾರಣವಾಯಿತು.

ಬುಧವಾರ ವಿಧಾನಸಭೆಯಲ್ಲಿ ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದಿಸಿ ಮಾತನಾಡಿದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ನಿಮ್ಮ ವೈಚಾರಿಕ ಹಿನ್ನೆಲೆ ಆರೆಸ್ಸೆಸ್ ಮೂಲದ್ದು. ಮನುವಾದ-ಸಮಾನವಾದಕ್ಕೂ ಮಧ್ಯೆ ಬಹುದಿನಗಳಿಂದ ಈ ದೇಶದಲ್ಲಿ ಘರ್ಷಣೆ ಇದೆ ಎಂದರು.

ಸ್ಪೀಕರ್ ಆಗಿರುವವರು ಸಂವಿಧಾನ ನಿಷ್ಠರಾಗಿ ಕಾರ್ಯ ನಿರ್ವಹಿಸಬೇಕು. ಧ್ವನಿ ಇಲ್ಲದವರಿಗೆ, ನ್ಯಾಯ ವಂಚಿತರಿಗೆ ಧ್ವನಿಯಾಗಬೇಕು. ಸಂಸದೀಯ ವೇದಿಕೆಗಳಲ್ಲಿ ಪ್ರಜೆಗಳ ವಿಚಾರ ಚರ್ಚೆಯಾಗುವುದಿಲ್ಲವೆಂಬ ಮನೋಭಾವ ಹೋಗಲಾಡಿಸಬೇಕು. ಜನರ ವಿಶ್ವಾಸ ನಶಿಸಲು ಅವಕಾಶ ಸಲ್ಲ ಎಂದು ಅವರು ಆಕ್ಷೇಪಿಸಿದರು.

ನೀವು ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರು. ಇದೀಗ ನೀವು ಅದರಿಂದ ಹೊರ ಬಂದು ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿ ಇರಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಾದ ಮತ್ತು ಮನುವಾದ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ನಿಮ್ಮ ಮೇಲೆ ತಕ್ಕಡಿ ಇದೆ ಎಂದು ರಮೇಶ್‌ ಕುಮಾರ್ ಎಚ್ಚರಿಸಿದರು.

ಭಗತ್‌ಸಿಂಗ್ ಅವರನ್ನು ನೇಣಿಗೆ ಹಾಕಿದಾಗ ಅವರ ಕಾಲಿಗೆ ಮರಳು ಮೂಟೆ ಕಟ್ಟಲಾಗಿತ್ತು. ಆ ಮರಳ ಮೂಟೆ ಕೆಳಗೆ ಪ್ರಜಾಪ್ರಭುತ್ವ ರೂಪಿಸಲಾಗಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರಕ್ತದ ಕಲೆಯನ್ನು ತಿಲಕವಾಗಿ ಇಡಲಾಗಿದೆ. ಇತಿಹಾಸ ಮರೆತವರು ದೇಶಕಟ್ಟಲು ಸಾಧ್ಯವಿಲ್ಲ. ಸಂವಿಧಾನ ಅನುಷ್ಠಾನಗೊಂಡ ಮೇಲೆ ಅಸಮಾನತೆ ಹೋಗಬೇಕು. ಆದರೆ, ದೇಶದಲ್ಲಿ ಅಸಮಾನತೆ ವಿಜೃಂಭಿಸುತ್ತಿದೆ ಎಂದು ಅವರ ಬೇಸರ ವ್ಯಕ್ತಪಡಿಸಿದರು. ಶ್ರೇಣೀಕೃತ ಪ್ರತಿಪಾದಿಸುವ ಮನುವಾದದಲ್ಲಿ ಚಾತುರ್ವರ್ಣದ ಪ್ರಸ್ತಾಪವಿದೆ. ಆದರೆ, ಪಂಚಮನನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅಖಂಡ ಭಾರತ ತತ್ವ ಪ್ರತಿಪಾದಿಸುವ ಆರೆಸ್ಸೆಸ್ ಸಂಸ್ಥಾಪಕರು ಇದ್ದದ್ದು ನಾಗಪುರದಲ್ಲೇ. ಸಮಾನತೆ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಅವರೂ ಅದೇ ನಾಗಪುರದಲ್ಲೆ ಬೌದ್ಧದಮ್ಮಕ್ಕೆ ಸೇರ್ಪಡೆಯಾದರು ಎಂದು ಸ್ಮರಿಸಿದರು.

ಅಂಬೇಡ್ಕರ್ ಅವರು ಸಮಾನತೆ ಆಧಾರದ ಮೇಲೆ ಅಖಂಡ ಭಾರತ ಇರಬೇಕು ಎಂದು ಪ್ರತಿಪಾದಿಸಿದರು. ಆದರೆ, ಅವರನ್ನು ನಾವು ಸೀಮಿತಗೊಳಿಸಿದ್ದೇವೆ ಎಂದ ಅವರು, ನಮ್ಮ ಹಿನ್ನೆಲೆ ಏನೇ ಇದ್ದರೂ ನಮ್ಮ ನಿಷ್ಠೆ ಸಮಾನತೆ ಪ್ರತಿಪಾದಿಸುವ ಸಂವಿಧಾನಕ್ಕೆ ಇರಬೇಕು ಎಂದು ಸಲಹೆ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ‘ಹಿಂದುತ್ವ’ದ ವಿಚಾರ ಒಂದು ಧರ್ಮ-ಜಾತಿಗೆ ಸೀಮಿತವಲ್ಲ. ಇದೊಂದು ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಹಿಂದುತ್ವ ಸಂಕುಚಿತವಲ್ಲ. ಹೀಗಾಗಿ ನಾವು ಸ್ವಯಂ ಸೇವಕರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ’ ಎಂದರು.

‘ಮನುಧರ್ಮ, ಹಿಂದುತ್ವ ಎಂದು ಪ್ರತ್ಯೇಕಿಸಿ ಸಮಾಜದಿಂದ ಆರೆಸ್ಸೆಸ್ ಅನ್ನು ಬೇರ್ಪಡಿಸುವ ಕೆಲಸ ಸಲ್ಲ. ಯಾವುದೇ ಸಂದರ್ಭದಲ್ಲಿಯೂ ನಮ್ಮ ವಿಚಾರಧಾರೆ ಬಿಡುವ ಪ್ರಶ್ನೆಯೇ ಇಲ್ಲ. ನಾವು ಎಲ್ಲೇ ಇದ್ದರೆ ಸ್ವಯಂ ಸೇವಕರು ಎಂದು ಉಭಯ ನಾಯಕರು ಪ್ರತಿಪಾದಿಸಿದರು.

ನಮ್ಮ ನಿಷ್ಠೆ ಭಾರತೀಯತೆಗೆ: ಬಿಎಸ್ಪಿ ಸದಸ್ಯ ಎನ್.ಮಹೇಶ್ ಮಾತನಾಡಿ, ನಮ್ಮ ದೇಶದ ಶ್ರೇಣೀಕೃತ ಸಮಾಜದಲ್ಲಿ ಬುದ್ಧಿಜೀವಿ ಮತ್ತು ಭಾವಜೀವಿ ಎರಡು ವರ್ಗವಿದೆ. ಆದರೆ, ನೂತನ ಸ್ಪೀಕರ್ ಕಾಗೇರಿ ಅವರು ಬುದ್ಧಿವಂತ ಭಾವಜೀವಿ ಎಂದು ಬಣ್ಣಿಸಿದರು.

ಅವರ ಸೈದ್ಧಾಂತಿಕ ಹಿನ್ನೆಲೆ ಹಿಂದುತ್ವ ಮತ್ತು ಮನುವಾದ ಏನೇ ಇದ್ದರೂ ನಮ್ಮ ದೇಶದ ಆತ್ಮ ಇರುವುದು ಭಾರತೀಯತೆಯಲ್ಲಿ. ಹೀಗಾಗಿ ನಾವೆಲ್ಲ ಭಾರತೀಯತೆಗೆ ನಿಷ್ಠೆ ಹೊಂದಿರಬೇಕು. ಇದು ನಮ್ಮ ನಂಬಿಕೆಗಳಿಗೂ ಮೀರಿದ್ದು ಎಂದು ಮಹೇಶ್ ಹೇಳಿದರು.

ಹಿಂದುತ್ವ ರಾಷ್ಟ್ರೀಯತೆಯ ಸಂಕೇತ. ಅದೊಂದು ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಮ್ಮ ಹಿನ್ನೆಲೆ ಕಾರಣಕ್ಕೆ ನಮ್ಮ ವಿಚಾರಕ್ಕೆ ನಮ್ಮ ಬದ್ಧತೆ ಇದ್ದೇ ಇರುತ್ತದೆ. ಆದರೆ, ಇದೀಗ ಸಂವಿಧಾನವೇ ನಮ್ಮ ಭಗವದ್ಗೀತೆಯಾಗಿದೆ

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News