ಕೋಮುವಾದಿ ಬಿಜೆಪಿಯನ್ನು ಎದುರಿಸಲು ಸಿದ್ಧರಾಗಿ: ಮಾಜಿ ಸಿಎಂ ಸಿದ್ದರಾಮಯ್ಯ ಕರೆ

Update: 2019-07-31 15:09 GMT

ಬೆಂಗಳೂರು, ಜು. 31: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕೇಸರೀಕರಣವಾದರೆ ಮತ್ತಷ್ಟು ಸಂಕಷ್ಟ ಎದುರಾಗಲಿದ್ದು ಕೋಮುವಾದಿ ಬಿಜೆಪಿ ಎದುರಿಸಲು ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರಿಗೆ ಪಕ್ಷದ ಸದಸ್ಯತ್ವ ನೀಡಿದ ಬಳಿಕ ಮಾತನಾಡಿದ ಅವರು, ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಮೋದಿ, ಶಾ ಹೊರಟಿದ್ದು, ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ಕೈಹಾಕಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಬಿಜೆಪಿ ಹೊರಟಿದೆ. ಇಂತಹ ಸಂದರ್ಭದಲ್ಲಿ ಎಲ್ಲರನ್ನು ಎದುರು ಹಾಕಿಕೊಂಡು ರಮೇಶ್‌ಕುಮಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅತೃಪ್ತರನ್ನು ಅನರ್ಹಗೊಳಿಸುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿದಿದ್ದಾರೆಂದು ಶ್ಲಾಘಿಷಿಸಿದರು.

ರಮೇಶ್‌ಕುಮಾರ್ ಅವರು ಹೊಸದಾಗಿ ಪಕ್ಷ ಸೇರುತ್ತಿಲ್ಲ. ಅವರು ಪಕ್ಷದಲ್ಲಿಯೆ ಹಲವು ವರ್ಷದಿಂದ ಇದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಅವರು ಶಾಸಕರಾಗಿ ಆಯ್ಕೆಯಾಗಿದ್ದು, ಹೈಕಮಾಂಡ್ ಸೂಚನೆಯಂತೆ ಸ್ಪೀಕರ್ ಆಗಿದ್ದರು ಎಂದು ಅವರು ಹೇಳಿದರು.

ಅವರು ಎಂದೂ ಯಾವುದೇ ಸ್ಥಾನದ ಆಸೆಪಟ್ಟವರಲ್ಲ. ನನ್ನ ಬಲವಂತದಿಂದಲೇ ಸಚಿವ ಸ್ಥಾನ ಪಡೆದಿದ್ದರು. ತಮ್ಮ 44 ವಯಸ್ಸಿಗೆ ಸ್ಪೀಕರ್ ಆಗಿದ್ದರು. ಮೊನ್ನೆ ಅವರು ನೀಡಿದ ತೀರ್ಪು ಅತ್ಯಂತ ಐತಿಹಾಸಿಕ, ದೇಶಕ್ಕೆ ಮಾದರಿ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ ಶಾಸಕರಿಗೆ ತಕ್ಕ ಪಾಠ ಕಲಿಸಿದಂತೆ ಆಗಿದೆ. ಬಿಜೆಪಿ ಮಹಾರಾಷ್ಟ್ರ, ಗುಜರಾತ್, ಗೋವಾ, ಉತ್ತರ ಪ್ರದೇಶ ಸೇರಿದಂತೆ ಎಲ್ಲ ಕಡೆಗಳಲ್ಲಿ ಹಣ, ಅಧಿಕಾರದ ಆಸೆ ತೋರಿಸಿ ಶಾಸಕರನ್ನು ಸೆಳೆಯುತ್ತಿದೆ. ಇದಕ್ಕೆ ಬಗ್ಗದಿದ್ದರೆ ಐಟಿ-ಈಡಿ ಬೆದರಿಕೆಯ ಹಿಟ್ಲರ್ ತಂತ್ರ ಅನುಸರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪಕ್ಷ ಬಲಗೊಳಿಸಬೇಕು: ಪಕ್ಷಾಂತರ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದು, ಇದೀಗ ಅದನ್ನು ಜನರಿಗೆ ಬಿಟ್ಟಿದ್ದೇನೆ. ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಈಗ ನಾವು ಪಕ್ಷಕ್ಕೆ ಕೊಡುವುದೇನು ಎಂಬುದು ಮುಖ್ಯ ಎಂದು ರಮೇಶ್‌ ಕುಮಾರ್ ಹೇಳಿದರು.

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನಾವು ಮರೆತಿದ್ದು, ಕಾರ್ಯಕರ್ತರ ನೈತಿಕತೆ ಕುಸಿದಿದೆ. ಪಕ್ಷಕ್ಕೆ ಭದ್ರ ಬುನಾದಿ ಕಾರ್ಯಕರ್ತರು. ಹೀಗಾಗಿ ಪಕ್ಷವನ್ನು ರಾಜ್ಯ ಹಾಗೂ ದೇಶದಲ್ಲಿ ಬಲಗೊಳಿಸಬೇಕಿದೆ. ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದವರು ಸೋನಿಯಾ ಗಾಂಧಿ. ಆದರೆ, ನಾವು ವೈಯಕ್ತಿಕ ಕಾರಣಕ್ಕೆ ಕಿತ್ತಾಡುತ್ತಿದ್ದೇವೆ ಎಂದು ಹೇಳಿದರು.

ದೇಶ ವಿಭಜನೆ ಮಾಡಿದವರು ಆರಸ್ಸೆಸ್ ನವರು. ಸ್ವಾತಂತ್ರಕ್ಕೂ ಮೊದಲೇ ಅವರು ವಿಭಜನೆ ಮಾಡಿದ್ದರು. ಇಂದು ಅವರು ದೇಶಪ್ರೇಮಿಗಳು. ಆದರೆ, ನಾವು ಮೂರ್ಖರು(ಬೇಕೂಫ್). ಸಿಪಾಯಿ ದಂಗೆ ವೇಳೆ ಈ ಆರೆಸ್ಸೆಸ್ ನವರು ಎಲ್ಲಿದ್ದರು ಎಂದು ರಮೇಶ್‌ ಕುಮಾರ್ ಖಾರವಾಗಿ ಪ್ರಶ್ನಿಸಿದರು.

17 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಬೂತ್‌ಮಟ್ಟದಲ್ಲಿ ಕಣಕ್ಕಿಳಿಯಬೇಕು. ನಾವು ಕೆಲಸ ಮಾಡುವುದು ಬೇರೆಯವರಿಗೆ ಕಾಣಬಾರದು ಎಂದ ಅವರು, ಆಡಂಬರದ ಬದುಕನ್ನು ಮೊದಲು ಬಿಡಬೇಕು. ಫ್ಲೆಕ್ಸ್, ಬ್ಯಾನರ್‌ಗಳಿಂದ ಪಕ್ಷ ಉಳಿಯುವುದಿಲ್ಲ. ಮತಗಳು ಬಂದರೆ ಮಾತ್ರ ಪಕ್ಷ ಉಳಿಯಲಿದೆ ಎಂದು ಹೇಳಿದರು.

‘ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವು ನಾಲ್ಕು ಗೋಡೆಗಳ ಮಧ್ಯೆಯೇ ಮುಗಿಯಬೇಕು. ನಾವು ಬೀದಿಯಲ್ಲಿ ಚಿತ್ರಾನ್ನ ತಿಂದು ಬಂದವರು. ಆದರೆ, ಇಂದು ಪಕ್ಷಕ್ಕೆ ಫೈವ್ ಸ್ಟಾರ್ ಕಲ್ಚರ್ ಬಂದಿದೆ. ಹೆಸರಿಗೆ ಫೈವ್ ಸ್ಟಾರ್ ಅಷ್ಟೆ ಒಳಗೆ ಹಳಸಿದ್ದೆ ಸಿಗೋದು. ಹೀಗಾಗಿ ಫೈವ್ ಸ್ಟಾರ್ ಕಲ್ಚರ್ ಬೇಡ. ಬೀದಿಯಲ್ಲಿ ನಿಂತು ಎಲ್ಲರೂ ದುಡಿಯಬೇಕು’

-ರಮೇಶ್‌ ಕುಮಾರ್, ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News