‘ಟಿಪ್ಪು ಜಯಂತಿ ರದ್ದು’ ಸದನದಲ್ಲಿ ಪ್ರತಿಧ್ವನಿ: ಕಲಾಪ ಅನಿದಿರ್ಷ್ಟಾವಧಿಗೆ ಮುಂದೂಡಿಕೆ

Update: 2019-07-31 16:16 GMT

ಬೆಂಗಳೂರು, ಜು. 31: ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶಿರುವ ರಾಜ್ಯ ಸರಕಾರದ ಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗಮನಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೋರಿದ್ದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.

ಬುಧವಾರ ವಿಧಾನಸಭೆಯಲ್ಲಿ ನೂತನ ಸ್ಪೀಕರ್ ಆಯ್ಕೆ ಬಳಿಕ ಎದ್ದುನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶಿಸಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯಲು ಅವಕಾಶ ನೀಡಬೇಕೆಂದು ಸ್ಪೀಕರ್ ಅವರನ್ನು ಕೋರಿದರು.

ಈ ಹಂತದಲ್ಲಿ ಸ್ಪೀಕರ್ ಕಾಗೇರಿ ಅವರು ಚುನಾವಣಾ ಪ್ರಸ್ತಾವ ಮಂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆದರು. ಕಾಂಗ್ರೆಸ್ ಸದಸ್ಯರ ಗದ್ದಲದ ಮಧ್ಯೆ ಯಡಿಯೂರಪ್ಪ, ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸೇರಿದಂತೆ 10 ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸುವ ಪ್ರಸ್ತಾವವನ್ನು ಮಂಡಿಸಿದರು.

ಬಳಿಕ ಕಾರ್ಯದರ್ಶಿ ವರದಿ ಮಂಡನೆ, ವರದಿಗಳು ಮತ್ತು ಅರ್ಜಿಗಳನ್ನೊಪ್ಪಿಸುವ ಕಲಾಪ ನಡೆಯಿತು. ಅನಂತರ ಪುನಃ ಎದ್ದು ನಿಂತ ಸಿದ್ದರಾಮಯ್ಯ, ಏರಿದ ಧ್ವನಿಯಲ್ಲಿ ಟಿಪ್ಪು ಜಯಂತಿ ರದ್ದು ಎಂದು ಹೇಳುತ್ತಿದ್ದಂತೆ ಉದ್ಯಮಿ ಸಿದ್ಧಾರ್ಥ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ ತಮ್ಮ ಸ್ಥಾನದಿಂದ ನಿರ್ಗಮಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ವಿಪಕ್ಷ ನಾಯಕ ಎದ್ದು ನಿಂತಿದ್ದೇನೆ. ಅವರನ್ನು ನೀವು(ಸ್ಪೀಕರ್) ಕೂರಿಸಬೇಕಿತ್ತು. ಮುಖ್ಯಮಂತ್ರಿ ಒಬ್ಬರು ಬಿಟ್ಟರೆ ಸಚಿವರು ಯಾರೂ ಇಲ್ಲ. ಅವರೆ ಇಲ್ಲವೆಂದರೆ ನಾವು ಯಾರನ್ನೂ ಪ್ರಶ್ನಿಸಬೇಕು. ಬಿಜೆಪಿ ಶಾಸಕರನ್ನು ಕೇಳಲು ಬರುವುದಿಲ್ಲ’ ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿ ಸ್ಪೀಕರ್ ಕಾಗೇರಿ, ‘ನೀವು ವಿಷಯ ಪ್ರಸ್ತಾಪಿಸುವ ಮೊದಲು ನನಗೆ ನೋಟಿಸ್ ನೀಡಬೇಕು. ಆದರೆ, ನೀವು ನನಗೆ ಯಾವುದೇ ನೋಟಿಸ್ ನೀಡಿಲ್ಲ. ಇದೀಗ ಏಕಾಏಕಿ ವಿಷಯ ಪ್ರಸ್ತಾಪಿಸಲು ಆಗುವುದಿಲ್ಲ ಎಂದು ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು.

ಎಲ್ಲ ವಿಚಾರಕ್ಕೂ ನೋಟಿಸ್ ನೀಡಿಯೇ ಪ್ರಸ್ತಾಪಿಸಬೇಕು ಎಂದೇನೂ ಇಲ್ಲ. ಒಂದೇ ಒಂದು ದಿನ ಅಧಿವೇಶನ ಕರೆದಿದ್ದು, ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಕ್ಕೂ ಮೊದಲೇ ಮುಖ್ಯಮಂತ್ರಿಯವರೆ ನಿರ್ಗಮಿಸದರೆ ಹೇಗೆ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ಸದಸ್ಯರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಸೇರಿ ಇನ್ನಿತರ ಸದಸ್ಯರು, ಈ ಸರಕಾರ ಸದನಕ್ಕೆ ಗೌರವ ನೀಡುವುದಿಲ್ಲ. ವಿಪಕ್ಷ ನಾಯಕರಿಗೂ ಗೌರವ ನೀಡುವುದಿಲ್ಲ. ಸಚಿವರ್ಯಾರು ಇಲ್ಲ. ಇದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಗದ್ದಲ-ಕೋಲಾಹಲಕ್ಕೂ ಕಾರಣವಾಯಿತು. ಈ ಮಧ್ಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಅನಿದಿರ್ಷ್ಟಾವಧಿಗೆ ಮುಂದೂಡಿದರು. ಕೂಡಲೇ ರಾಷ್ಟ್ರಗೀತೆ ಮೊಳಗಿದ ಹಿನ್ನೆಲೆಯಲ್ಲಿ ಎಲ್ಲರೂ ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಿದರು.

‘ಈ ಸ್ಪೀಕರ್ ಸ್ಥಾನಕ್ಕೆ ಎಂತಹವರನ್ನು ಕೂರಿಸುತ್ತಾರೆಂದರೆ ಮಂತ್ರಿ ಮಾಡಲು ಆಗದ, ನಿವೃತ್ತಿ ಹಂತದಲ್ಲಿರುವವರನ್ನು ಒದ್ದು ಮೇಲಕ್ಕೆ ಕಳುಹಿಸಿ ನೀನು ಈಗ ಮೇಲೆ ಇದ್ದೀಯಪ್ಪ ಎಂಬಂತಿದೆ’

-ಕೆ.ಆರ್.ರಮೇಶ್‌ ಕುಮಾರ್, ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News