ಸಮಾಜದಲ್ಲಿನ ದುಷ್ಟ ಶಕ್ತಿಗಳನ್ನು ಪೊಲೀಸರು ಮಟ್ಟ ಹಾಕಬೇಕು: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-07-31 16:48 GMT

ಬೆಂಗಳೂರು, ಜು.31: ಸಮಾಜದಲ್ಲಿನ ದುಷ್ಟ ಶಕ್ತಿಗಳನ್ನು ಪೊಲೀಸರು ಮಟ್ಟ ಹಾಕಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ಬುಧವಾರ ನಗರದ ರಾಜಭವನದಲ್ಲಿ ಆಯೋಜಿಸಿದ್ದ, ಪೊಲೀಸ್ ಪದಕ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆ ಇತರ ರಾಜ್ಯಗಳ ಮಾದರಿ ಇಲಾಖೆಯಾಗಿ ಹೊರ ಹೊಮ್ಮಬೇಕು. ಮಾಹಿತಿ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಬಳಸಿ ಜನಸ್ನೇಹಿಯಾಗಿ ಇಲಾಖೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಲಭಿಸುತ್ತದೆ. ಪೊಲೀಸರು ಸದಾ ಜನರ ರಕ್ಷಣೆಯಲ್ಲಿ ತೊಡಗಬೇಕು. ಸಮಾಜದಲ್ಲಿ ಜನರು ಪೊಲೀಸರನ್ನು ಶ್ಲಾಘಿಸಿದರೆ ಅದೇ ನಿಜವಾದ ಪ್ರಶಸ್ತಿ ಇದ್ದಂತೆ ಎಂದರು.

ಜನ ಸಾಮಾನ್ಯರಿಗೆ ಪೊಲೀಸರ ಮೇಲೆ ನಂಬಿಕೆ ಬರುವ ಹಾಗೆ ನಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿರುವ ಮೇಲಾಧಿಕಾರಿಗಳು ಸರಿಯಾಗಿದ್ದರೆ ಸಾಲದು. ಎಲ್ಲರೂ ಕಾನೂನು ಸುವ್ಯವಸ್ಥೆಗಾಗಿ ಒಳ್ಳೆಯ ಸೇವೆ ಸಲ್ಲಿಸಬೇಕು. ಹಾಗಾದರೆ ಮಾತ್ರ ಇನ್ನೂ ಹೆಚ್ಚಿನ ಪದಕಗಳು ರಾಜ್ಯಕ್ಕೆ ಬರಲು ಸಾಧ್ಯ ಎಂದು ನುಡಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News