ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಬೇಡ: ಜೆಡಿಎಸ್ ಸದಸ್ಯರ ಒಮ್ಮತದ ಅಭಿಪ್ರಾಯ- ದೇವೇಗೌಡ

Update: 2019-07-31 16:50 GMT

ಬೆಂಗಳೂರು, ಜು.31: ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಬೇಡ. ನೀವು ರಾಜ್ಯಮಟ್ಟದಲ್ಲಿ ಒಂದಾಗಿ ಅಧಿಕಾರ ಅನುಭವಿಸಿದ್ದೀರಾ. ಆದರೆ, ಸ್ಥಳೀಯ ಮಟ್ಟದಲ್ಲಿ ಆ ಪರಿಸ್ಥಿತಿ ಇಲ್ಲವೆಂದು ಜೆಡಿಎಸ್ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಬುಧವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳ ಜೊತೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ದೇವೇಗೌಡ ಮಾತನಾಡಿದರು.

ಚುನಾವಣೆ ಮೂರು ತಿಂಗಳಿಗೆ ಬರುತ್ತೋ, ಆರು ತಿಂಗಳಿಗೆ ಬರುತ್ತೋ ಗೊತ್ತಿಲ್ಲ. ಆದರೆ ನಾವು ಮಾತ್ರ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ರಾಜ್ಯ ಪ್ರವಾಸ ಮಾಡಲು ಎಲ್ಲ ನಾಯಕರಿಗೆ ಸೂಚಿಸಿದ್ದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕಳೆದ ಹದಿನಾಲ್ಕು ತಿಂಗಳು ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಲು ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಆಗಸ್ಟ್ 7ರಂದು ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು. ಅಲ್ಲಿ ನೂತನ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡುತ್ತೇವೆ. ನಿಷ್ಕ್ರಿಯ ಗೊಂಡಿರುವ ಇತರ ಘಟಕಗಳನ್ನೂ ಪುನಶ್ಚೇತನ ಮಾಡುತ್ತೇವೆ. ಹಾಗೆಯೇ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಜೆಡಿಎಸ್ ಸಕ್ರಿಯಗೊಳ್ಳಲಿದೆ ಎಂದು ದೇವೇಗೌಡ ಹೇಳಿದರು.

ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿ, ಪಕ್ಷ ಬಿಟ್ಟು ಹೊರ ಹೋಗಿರುವ ಮೂವರು ಅನರ್ಹ ಶಾಸಕರಾದ ಅಡಗೂರು ಎಚ್.ವಿಶ್ವನಾಥ್(ಹುಣಸೂರು), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್) ಹಾಗೂ ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ)ರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಅವರು ಹೇಳಿದರು.

ನೂತನ ಸ್ಪೀಕರ್‌ಗೆ ಅಭಿನಂದನೆ: ಈ ಹಿಂದೆ ಬಿಜೆಪಿ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕೆಲಸ ಮಾಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆಯ ನೂತನ ಸ್ಪೀಕರ್ ಆಗಿ ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆಯಿದೆ. ಅವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News