ಉನ್ನಾವೋ ಅತ್ಯಾಚಾರ : ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ !

Update: 2019-08-01 06:12 GMT
ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು

ಬಾರಾಬಂಕಿ : ಪೊಲೀಸ್ ಸುರಕ್ಷಾ ಸಪ್ತಾಹದ ಅಂಗವಾಗಿ ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿನ ಪೊಲೀಸರು ಅಲ್ಲಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸುರಕ್ಷತೆಯ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ  ಆನಂದ್ ಭವನ್ ಶಾಲೆಯಲ್ಲಿ ಇಂತಹ ಒಂದು ಕಾರ್ಯಕ್ರಮ ನಡೆಸಿದ ಪೊಲೀಸ್ ಅಧಿಕಾರಿ ಅಲ್ಲಿನ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗಳಿಗೆ ಬೇಸ್ತು ಬಿದ್ದಿದ್ದಾರೆ.

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಅಪಘಾತ ಪ್ರಕರಣವನ್ನು ಉಲ್ಲೇಖಿಸಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗಳು ಪೊಲೀಸ್ ಅಧಿಕಾರಿಯನ್ನು ಕಕ್ಕಾಬಿಕ್ಕಿಯಾಗಿಸಿದೆ.

ಎಸ್ ಗೌತಮ್, ಹೆಚ್ಚುವರಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಷ್ಟೇ  ಅನ್ಯಾಯ ಹಾಗೂ ದೌರ್ಜನ್ಯದ ವಿರುದ್ಧ ವಿದ್ಯಾರ್ಥಿಗಳು ದನಿಯೆತ್ತಿ ಪ್ರತಿಭಟಿಸಬೇಕು ಎಂದು ಪಾಠ ಹೇಳಿದ್ದರು. ಆಗ ವಿದ್ಯಾರ್ಥಿನಿ ಮುನಿಬಾ ಕಿದ್ವಾಯಿ ಎದ್ದು ನಿಂತು ''ನಾವು ದನಿಯೆತ್ತಿ ಪ್ರತಿಭಟಿಸಬೇಕೆಂದು ನೀವು ಹೇಳಿದ್ದೀರಿ. ಬಿಜೆಪಿ ನಾಯಕರೊಬ್ಬರು ಹದಿಹರೆಯದ ಯುವತಿಯನ್ನು ಅತ್ಯಾಚಾರಗೈದಿದ್ದಾರೆಂದು ನಮಗೆ ಗೊತ್ತು,' ಎನ್ನುತ್ತಾ ಕಾರು ಅಪಘಾತದ ಘಟನೆ ಉಲ್ಲೇಖಿಸಿ ''ಇದು ಅಪಘಾತವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಟ್ರಕ್ ನಂಬರ್ ಪ್ಲೇಟಿಗೆ ಕಪ್ಪು ಬಣ್ಣ ಹಚ್ಚಲಾಗಿತ್ತು. ಸಾಮಾನ್ಯ ವ್ಯಕ್ತಿ ಶಾಮೀಲಾಗಿರುವಾಗ ಪ್ರತಿಭಟಿಸುವುದು ಬೇರೆ ಆದರೆ ಪ್ರಭಾವಿ ವ್ಯಕಿಯಾಗಿದ್ದಾಗ ? ಹಾಗಿರುವಾಗ ಪ್ರತಿಭಟಿಸಿದರೂ  ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಗೊತ್ತು, ಕ್ರಮ ಕೈಗೊಂಡರೂ ಅದರಿಂದ ಪ್ರಯೋಜನವಿರುವುದಿಲ್ಲ. ಆ ಹುಡುಗಿ ಗಂಭೀರ ಸ್ಥೀತಿಯಲ್ಲಿದ್ದಾಳೆ. ನಾವು ಪ್ರತಿಭಟಿಸಿದರೆ ನ್ಯಾಯ ದೊರಕುವುದೇ ? ನನ್ನ ಸುರಕ್ಷತೆಯನ್ನು ನೀವು ಹೇಗೆ ಖಾತರಿಗೊಳಿಸುತ್ತೀರಿ ? ನನಗೇನೂ ಆಗದು ಎಂಬುದಕ್ಕೆ ಏನು  ಗ್ಯಾರಂಟಿಯಿದೆ ?'' ಎಂದು ವಿದ್ಯಾರ್ಥಿನಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದಾಗ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಆಕೆಯನ್ನು ಹುರಿದುಂಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News