ದಾರಿ ಯಾವುದಯ್ಯ ‘ಕಲ್ಯಾಣ’ಕ್ಕೆ?

Update: 2019-08-02 18:52 GMT

ಇದು ರಾಜ್ಯಮಟ್ಟದಲ್ಲಿ ಒಂದು ಅಭಿಯಾನವಾಗಿದ್ದರೂ ಆಯಾ ಸ್ಥಳಗಳಲ್ಲಿ ‘ಇವೆಂಟ್’ ಅಷ್ಟೇ ಆಗಿರುತ್ತದೆ. ಆ ಸೀಮಿತ ಅವಧಿಯಲ್ಲಿ ನಿಶ್ಚಿತ ಅಭಿಪ್ರಾಯಗಳನ್ನು ಇಟ್ಟುಕೊಂಡು ಬರುವ ಯಾರನ್ನೂ ಯಾರೂ ಬದಲಿಸಲು ಸಾಧ್ಯವಾಗುವುದಿಲ್ಲ. ಪರಿವರ್ತನೆಯೆಂಬುದು ಸ್ಥಾನಿಕವಾಗಿ ಹಲವು ಆಯಾಮಗಳಲ್ಲಿ ನಿರಂತರವಾಗಿ ಸಾಧಿಸಬೇಕಿರುವ ಪ್ರಕ್ರಿಯೆ. ಆದ್ದರಿಂದಲೇ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಜನತೆಯ ಮಿತ್ರರು ಯಾರು ಮತ್ತು ಶತ್ರುಗಳು ಯಾರು ಎಂಬುದನ್ನೂ ಸಹ ಅತ್ಯಂತ ಸ್ಪಷ್ಟವಾಗಿ ಅಭಿಯಾನದ ಪ್ರತಿಯೊಂದು ಸಂಕೇತಗಳು ಧ್ವನಿಸಬೇಕಾದ ಅಗತ್ಯವಿರುತ್ತದೆ.

ಒಂದು ಯುದ್ಧದಲ್ಲಿ ತಮ್ಮ ಶತ್ರುಗಳ್ಯಾರು ಮತ್ತು ತಮ್ಮ ಮಿತ್ರರು ಯಾರು ಎಂಬ ಸ್ಪಷ್ಟತೆ ಯಾರಿಗೆ ಇರುತ್ತದೋ ಅವರು ಗೆಲ್ಲುತ್ತಾರೆ ಎಂಬುದು ಚೀನಾದ ಹಳೆಯ ಗಾದೆ ಮಾತು. ಆ ಸ್ಪಷ್ಟತೆಯಿಲ್ಲದೆ ಮುಖವಾಡ ಧರಿಸಿದ ಶತ್ರುಗಳನ್ನೇ ಮಿತ್ರರಂತೆ ಭಾವಿಸಿ ಸರ್ವನಾಶವಾದ ಬೋಳೆ ಬೋಳೆ ಹೋರಾಟಗಾರರ ಪರಂಪರೆಯೂ ಇದೆ. ಹಾಗೆಯೇ ಅಲ್ಪಸ್ವಲ್ಪಭಿನ್ನಾಭಿಪ್ರಾಯ ಇದ್ದ ಮಾತ್ರಕ್ಕೆ ದೀರ್ಘಕಾಲೀನ ಮಿತ್ರರಾಗಬಹುದಾದವರನ್ನು ಶತ್ರುಗಳ ಸಾಲಿಗೆ ಸೇರಿಸಿ ತಾವೂ ಏಕಾಂಗಿಗಳಾಗಿ, ಹೋರಾಟಗಳನ್ನೂ ಸಂಕುಚಿತಗೊಳಿಸಿ ಸೋಲನ್ನುಂಡ ಪರಂಪರೆಯೂ ಇದೆ.

 ಇಂದು ಮತ್ತೆ ಇತಿಹಾಸ ಮರುಕಳಿಸುತ್ತಿದೆ. ನೂರು ವರ್ಷಗಳ ನಿರಂತರ ಹಾಗೂ ಬಹು ಆಯಾಮಗಳ ಯೋಜಿತ ಹುನ್ನಾರಗಳ ಭಾಗವಾಗಿ ಇಂದು ಫ್ಯಾಶಿಸ್ಟ್ ಶಕ್ತಿಗಳು ದೇಶವನ್ನು, ಸಮಾಜವನ್ನು, ಜನರ ಮೆದುಳು ಮತ್ತು ಹೃದಯಗಳನ್ನೂ ಹಾಗೂ ಇದೀಗ ಪ್ರಭುತ್ವವನ್ನು ಕಬಳಿಸಿ ಕುಳಿತಿದ್ದಾರೆ. ಇದು ಭಾರತದ ಪ್ರಗತಿಪರ ಶಕ್ತಿಗಳೆಲ್ಲದರ ಸಾಮೂಹಿಕ ಸೋಲು. ಶತ್ರುವನ್ನು ಸರಿಯಾಗಿ ಗುರುತಿಸದ ಸೋಲು. ಮಿತ್ರರಾಗಬಹುದಾದವರು ವಿಘಟಿತವಾಗಿದ್ದರಿಂದ ಎರಗಿದ ಸೋಲು.

ಅದರಲ್ಲೂ 2019ರ ಚುನಾವಣಾ ಫಲಿತಾಂಶಗಳು ಪ್ರಗತಿಪರ ಶಕ್ತಿಗಳು ಜನರಿಂದ ಇನ್ನೂ ಎಷ್ಟು ದೂರವಿವೆ ಮತ್ತು ಫ್ಯಾಶಿಸ್ಟ್ ಚಿಂತನೆಗಳು ಹೇಗೆ ಜನಮಾನಸವನ್ನು ಮೋಡಿ ಮಾಡಿವೆ ಎಂಬುದನ್ನು ಸಾಬೀತು ಪಡಿಸಿದೆ. ಎಲ್ಲಿಯತನಕ ಸಮಾಜದ ಈ ಫ್ಯಾಶೀಕರಣವನ್ನು ತಡೆಗಟ್ಟಿ ಜನಮಾನಸದಲ್ಲಿ ನ್ಯಾಯಪ್ರಜ್ಞೆಯನ್ನು ಮತ್ತೆ ಜೀವಂತಗೊಳಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯತನಕ ಭಾರತದಲ್ಲಿ ಫ್ಯಾಶಿಸ್ಟರನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಅನುಮಾನಕ್ಕೆಡೆಯಿಲ್ಲದಂತೆ ರುಜುವಾತು ಮಾಡಿದೆ.

 ಇಂದು ಫ್ಯಾಶಿಸ್ಟ್ ಶಕ್ತಿಗಳು ಈ ದೇಶವು ಗಳಿಸಿಕೊಂಡ ಸಾಂವಿಧಾನಿಕ ಪ್ರಜಾತಂತ್ರವನ್ನು ನಾಶಗೊಳಿಸಿ ಸರ್ವಾಧಿಕಾರಿ ರಾಜ್ಯಾಧಿಕಾರ, ಮನುವಾದಿ ಸಾಮಾಜಿಕ/ಧಾರ್ಮಿಕ ಅಧಿಕಾರ ಮತ್ತು ನರಭಕ್ಷಕ ಕಾರ್ಪೊರೇಟ್ ಆರ್ಥಿಕಾಧಿಕಾರಗಳ ಜಂಟಿ ಆಧಿಪತ್ಯದ ಮೂಲಕ ಈ ದೇಶದ ಜನರ ಮೇಲೆ ಯುದ್ಧ ಸಾರಿದೆ.

ಇದು ಧಾರ್ಮಿಕಾಧಿಕಾರ ಮತ್ತು ರಾಜ್ಯಾಧಿಕಾರ ಗಳು ಒಂದೇ ಕೇಂದ್ರದಲ್ಲಿದ್ದ ರಾಜಸತ್ತೆಯ ಕಾಲಕ್ಕಿಂತ ವಿಭಿನ್ನವಾದ ಸಂದರ್ಭ.

 ಹೀಗಾಗಿಯೇ ಈ ಯುದ್ಧ ಆ ಮೂರೂ ರಂಗಗಳಲ್ಲೂ ಬೇರೆಬೇರೆಯಾಗಿಯೂ ಮತ್ತು ಜೊತೆಜೊತೆಯಾಗಿಯೂ ನಡೆಯಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅತಿ ಹೆಚ್ಚು ದಮನ, ಶೋಷಣೆ ಮತ್ತು ತಾರತಮ್ಯಗಳಿಗೆ ಗುರಿಯಾಗುತ್ತಿರುವ ದಲಿತರು, ಶ್ರಮಜೀವಿಗಳು, ಮಹಿಳೆಯರು, ಅಲ್ಪಸಂಖ್ಯಾತರು, ಆದಿವಾಸಿಗಳ ನೇತೃತ್ವವಿದ್ದರೆ ಮಾತ್ರ ಈ ಯುದ್ಧದಲ್ಲಿ ಗೆಲ್ಲುತ್ತೇವೆ.

ಆದರೆ ಅದು ಇಂದಿನ ಮಟ್ಟಿಗೆ ಒಂದು ಆಶಯ. ಆ ಕಡೆಗೆ ನಡೆಯಬೇಕೆಂದರೂ ಮೊದಲು ಸಮಾಜದಲ್ಲಿ ನ್ಯಾಯಪ್ರಜ್ಞೆಯನ್ನು ಬಡಿದೆಬ್ಬಿಸುವುದು ಮತ್ತು ಅನ್ಯಾಯದ ಆಯಾಮಗಳನ್ನು ಬಿಚ್ಚಿ ತೋರಿಸುವುದು ಅತ್ಯಂತ ಅಗತ್ಯ.

ಆದ್ದರಿಂದಲೇ ದೇಶಾದ್ಯಂತ ನಡೆಯುತ್ತಿರುವ ದಲಿತ, ಆದಿವಾಸಿ, ಕಾರ್ಮಿಕ, ಶ್ರಮಜೀವಿ, ಮಹಿಳಾ ಹೋರಾಟಗಳಿಗೂ ಮತ್ತು ವೈದಿಕಶಾಹಿಯನ್ನು ಆಧ್ಯಾತ್ಮದ ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪ್ರಶ್ನಿಸುತ್ತಿರುವ ಹೋರಾಟಗಳಿಗೂ ನಡುವೆ ಒಂದು ಅವಿನಾಭಾವ ಸಂಬಂಧ ಮೂಡುವ ಅಗತ್ಯವಿದೆ.

 ಅದಕ್ಕಾಗಿ ದೇಶಮಟ್ಟದಲ್ಲಿ ಹಾಗೂ ನಮ್ಮ ರಾಜ್ಯದಲ್ಲೂ ಹಲವು ಪ್ರಯತ್ನಗಳು ನಡೆಯುತ್ತಿವೆ. ಕಾರ್ಮಿಕರ ಜಂಟಿ ಹೋರಾಟ, ರೈತಾಪಿ ಹೋರಾಟ, ದಲಿತ ಸಂಘರ್ಷ, ಅಲ್ಪಸಂಖ್ಯಾತರ ಮತ್ತು ಮಹಿಳೆಯರ ಘನತೆಯ ಹೋರಾಟಗಳೆಲ್ಲಾ ಅದರ ಭಾಗವೇ. ಅದೇ ರೀತಿ ವರ್ಷಕ್ಕೊಮ್ಮೆ ನಡೆಯುವ ‘ಜನನುಡಿ’, ‘ಮೇ ಸಾಹಿತ್ಯ ಮೇಳ’, ‘ನಾವು-ನಮ್ಮಲ್ಲಿ’ ಇತ್ಯಾದಿ ವೈಚಾರಿಕ ಮೇಳಗಳು ಸಹ ಅದೇ ಉದ್ದೇಶಕ್ಕೆ ಪೂರಕವಾಗಿವೆ. ಕೋಮು ಸೌಹಾರ್ದ ವೇದಿಕೆಯಂಥ ಒಕ್ಕೂಟಗಳು ನಿರಂತರವಾಗಿ ನಡೆಸಿಕೊಂಡು ಬಂದಿರುವ ಹೋರಾಟ, ಸಮ್ಮೇಳನ, ಸಂಘರ್ಷಗಳು ಸಹ ಅದೇ ಆಶಯದ ಭಿನ್ನಭಿನ್ನ ಅಭಿವ್ಯಕ್ತಿಗಳು. ಎಲ್ಲಾ ಪ್ರಯತ್ನಗಳ ಮುಂದುವರಿಕೆಯಾಗಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಾಡಿನ ಎಲ್ಲಾ ಪ್ರಗತಿಪರರನ್ನು ಒಳಗೊಳ್ಳುವ ಆಶಯವನ್ನುಳ್ಳ ‘ಮತ್ತೆ ಕಲ್ಯಾಣ’ ಅಭಿಯಾನ ನಿನ್ನೆಯಿಂದ ಪ್ರಾರಂಭವಾಗಿದೆ. ರಾಜ್ಯಾದ್ಯಂತ ಮತ್ತೊಮ್ಮೆ ಈ ನಾಡಿನ ಶರಣ ಪರಂಪರೆಯನ್ನು ನೆನಪಿಸುವ ಮತ್ತು ಕೇಳುಗರಲ್ಲಿ ನ್ಯಾಯಪ್ರಜ್ಞೆಯನ್ನು ಉದ್ದೀಪಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗೆ ನೋಡಿದರೆ, ಅನ್ಯಾಯ ಮತ್ತು ತಾರತಮ್ಯಗಳಿಗೆ ಧಾರ್ಮಿಕ ಆಯಾಮವನ್ನು ಕೊಟ್ಟು ಒಪ್ಪಿಸುವ ವೈದಿಕಶಾಹಿಯ ಮನುವಾದಿ ಸಾಂಸ್ಥಿಕ ಪ್ರಚಾರಗಳು ದಿನದ 24 ಗಂಟೆ ಹಾಗೂ 365 ದಿನಗಳೂ ಚಾಲ್ತಿಯಲ್ಲಿರುವಾಗ ಮತ್ತೆ ಕಲ್ಯಾಣದಲ್ಲಿ ಒಂದು ದಿನದ ಮಟ್ಟಿಗೆ ಮಾಡುವ ಶರಣರ ನೆನಪುಗಳು ತನ್ನಂತೆ ತಾನೇ ದೊಡ್ಡ ಪರಿಣಾಮವನ್ನೇನೂ ಬೀರುವುದಿಲ್ಲ. ಮುಂದೆ ಅದು ಯಾವ ರೂಪ ತೆಗೆದುಕೊಳ್ಳಬೇಕು ಎನ್ನುವುದು ಅಭಿಯಾನಕ್ಕೆ ದೊರಕುವ ಪ್ರತಿಕ್ರಿಯೆಗಳು ನಿರ್ದೇಶಿಸಬಹುದು. ವಾಸ್ತವವಾಗಿ ತಾವು ಮಾಡುವ ದ್ವೇಷದ ಮತ್ತು ಸುಳ್ಳಿನ ಪ್ರಚಾರಗಳಿಂದ ಜನರಲ್ಲಿ ಮೂಡುವ ದ್ವೇಷದ ಭಾವನೆಗಳನ್ನು ಭೌತಿಕ ಸಂಘಟನೆಯಾಗಿ ಪರಿವರ್ತಿಸುವುದರಲ್ಲೇ ಫ್ಯಾಶಿಸ್ಟರ ಗೆಲುವಿನ ಗುಟ್ಟಿದೆ. ಅದಕ್ಕೆ ಪ್ರತಿಯಾಗಿ ಜನರಲ್ಲಿರುವ ಸಹಜ ನ್ಯಾಯಪ್ರಜ್ಞೆಯನ್ನು ಭೌತಿಕ ಸಂಘಟನೆಯಾಗಿ ಮಾರ್ಪಡಿಸಲಾಗದ ವೈಫಲ್ಯದಲ್ಲೇ ಪ್ರಗತಿಪರ ಶಕ್ತಿಗಳ ವೈಫಲ್ಯದ ಗುಟ್ಟೂ ಇದೆ. ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ಈ ಯುದ್ಧದಲ್ಲಿ ಗೆಲ್ಲಬೇಕೆಂದರೆ ಜನರಲ್ಲಿರುವ ಸಹಜ ನ್ಯಾಯಪ್ರಜ್ಞೆಯನ್ನು ಸಂಘಟಿತ ಶಕ್ತಿ ಮಾಡುವತ್ತಲೇ ತಮ್ಮ ಹೆಚ್ಚಿನ ಗಮನವನ್ನು ನೀಡಬೇಕಿದೆ. ಅದೇನೇ ಇರಲಿ. ‘ಮತ್ತೆ ಕಲ್ಯಾಣ’ ಅಭಿಯಾನವು ಆ ಸಂಘಟನಾತ್ಮಕ ಕರ್ತವ್ಯಗಳಿಗೆ ಪರ್ಯಾಯವೇನಲ್ಲ. ಮುಂದೆ ಈ ಅಭಿಯಾನದ ಹಿಂದಿನ ಶಕ್ತಿಗಳು ತಳಮಟ್ಟದಲ್ಲಿ ಜನಸಂಘಟನೆ ಕಟ್ಟಲು ಪೂರಕವಾಗಿ ತಮ್ಮ ಶಕ್ತಿಗಳನ್ನು ವಿನಿಯೋಗಿಸುವುದು ಅತ್ಯಂತ ಸ್ವಾಗತಾರ್ಹ ನಡೆಯಾಗಬಹುದು. ಅದೇನೇ ಇರಲಿ. ಸದ್ಯಕ್ಕಂತೂ ಈ ಅಭಿಯಾನವು ವೈದಿಕಶಾಹಿಯ ಶೋಷಕ ಮತ್ತು ‘ಅಧರ್ಮೀಯ’ ಪರಂಪರೆಗೆ ವಿರುದ್ಧವಾಗಿ 12ನೇ ಶತಮಾನದಲ್ಲಿ ನಮ್ಮ ನಾಡಿನಲ್ಲಿ ಸಂಭವಿಸಿದ ಕಾಯಕ ಜೀವಿ ಶರಣರ ನ್ಯಾಯಪರ ಜೀವನ ಮೌಲ್ಯ, ಬದುಕು ಮತ್ತು ಹೋರಾಟಗಳ ಪರಂಪರೆಯನ್ನು ನೆನಪಿಸುತ್ತದೆ. ಹೀಗಾಗಿ ಜನಮಾನಸವನ್ನು ನ್ಯಾಯಪ್ರಜ್ಞೆಯೆಡೆಗೆ ಕೊಂಡೊಯ್ಯುವ ಒಂದು ಸಾಂಕೇತಿಕ ಕಾರ್ಯಕ್ರಮವಿದು. ಆದ್ದರಿಂದಲೇ ಈ ಅಭಿಯಾನಕ್ಕಾಗಿ ಸಂಘಟನೆಗಳಿಗಿಂತ ಭಿನ್ನವಾದ ಭಿತ್ತಿ ಮತ್ತು ರಚನೆಗಳನ್ನು ಮಾಡಿಕೊಳ್ಳಲಾಗಿದೆ. ಪಂಡಿತಾರಾಧ್ಯರಂಥ ಪ್ರಗತಿಪರ ಸ್ವಾಮಿಗಳು ಇದರ ನೇತೃತ್ವವಹಿಸಿರುವುದರಿಂದ ಈವರೆಗೆ ಜನಪರ ಹೋರಾಟಗಳ ಭಾಗವಾಗದ ಆದರೆ ನಿಜವಾದ ಧಾರ್ಮಿಕ ಆಶಯಗಳನ್ನು ಹೊಂದಿರುವ ಬಹುಸಂಖ್ಯಾತ ಜನರೂ ಇದರಲ್ಲಿ ಭಾಗವಹಿಸಬಹುದೆಂಬ ಆಶಯಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ನನ್ನ ಗ್ರಹಿಕೆ.

ಹೀಗಾಗಿ ಈ ಅಭಿಯಾನದ ಪ್ರಧಾನ ಆಶಯ ಮತ್ತು ಅಭಿವ್ಯಕ್ತಿಗಳೆರಡೂ ಸಾಂಕೇತಿಕ. ಸಂಕೇತವೇ ಈ ಅಭಿಯಾನದ ಶಕ್ತಿ ಮತ್ತು ಮಿತಿ.

 ಹೀಗಾಗಿ ಅದು ಬಳಸುವ ಸಂಕೇತಗಳು ನೇರ ಮತ್ತು ನಿಸ್ಸಂದಿಗ್ಧವಾಗಿದ್ದಷ್ಟೂ ಅದರ ಪರಿಣಾಮ ಹೆಚ್ಚುತ್ತದೆ. ಇಲ್ಲಿ ಸಂಕೇತಗಳು ಎಂದರೆ ಈ ಅಭಿಯಾನ ಬಳಸುವ ಭಾಷೆ, ಘೋಷಣೆ, ಲಾಂಛನ, ಭಾಷಣ ಮತ್ತು ವೇದಿಕೆ. ಇವೆಲ್ಲಕ್ಕೂ ಈ ಅಭಿಯಾನದಲ್ಲಿ ಸಾಂಕೇತಿಕ ಮಹತ್ವವೇ ಇದೆ. ಅದರಲ್ಲಿ ಗೋಜಲು ಉಂಟಾದಷ್ಟೂ ಜನರಿಗೆ ತಲುಪಬೇಕಾದ ಸಂದೇಶವೂ ಗೋಜಲಾಗುತ್ತದೆ.

ಮೇಲಾಗಿ ಇದು ರಾಜ್ಯಮಟ್ಟದಲ್ಲಿ ಒಂದು ಅಭಿಯಾನವಾಗಿದ್ದರೂ ಆಯಾ ಸ್ಥಳಗಳಲ್ಲಿ ‘ಇವೆಂಟ್’ ಅಷ್ಟೇ ಆಗಿರುತ್ತದೆ. ಆ ಸೀಮಿತ ಅವಧಿಯಲ್ಲಿ ನಿಶ್ಚಿತ ಅಭಿಪ್ರಾಯಗಳನ್ನು ಇಟ್ಟುಕೊಂಡು ಬರುವ ಯಾರನ್ನೂ ಯಾರೂ ಬದಲಿಸಲು ಸಾಧ್ಯವಾಗುವುದಿಲ್ಲ. ಪರಿವರ್ತನೆಯೆಂಬುದು ಸ್ಥಾನಿಕವಾಗಿ ಹಲವು ಆಯಾಮಗಳಲ್ಲಿ ನಿರಂತರವಾಗಿ ಸಾಧಿಸಬೇಕಿರುವ ಪ್ರಕ್ರಿಯೆ. ಆದ್ದರಿಂದಲೇ ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಜನತೆಯ ಮಿತ್ರರು ಯಾರು ಮತ್ತು ಶತ್ರುಗಳು ಯಾರು ಎಂಬುದನ್ನೂ ಸಹ ಅತ್ಯಂತ ಸ್ಪಷ್ಟವಾಗಿ ಅಭಿಯಾನದ ಪ್ರತಿಯೊಂದು ಸಂಕೇತಗಳು ಧ್ವನಿಸಬೇಕಾದ ಅಗತ್ಯವಿರುತ್ತದೆ. ಮುಖವಾಡಗಳನ್ನು ಕಳಚುವುದನ್ನೇ ಉದ್ದೇಶವನ್ನಾಗಿ ಇಟ್ಟುಕೊಳ್ಳದಿದ್ದರೂ ಮುಖವಾಡಗಳಿಗೆ ಮನ್ನಣೆ ಕೊಡದಷ್ಟು ಎಚ್ಚರಿಕೆಯನ್ನು ವಹಿಸಲೇ ಬೇಕಾಗುತ್ತದೆ.

ಆದರೆ ಮಂಗಳೂರು ಮತ್ತು ಉಡುಪಿಯ ಮತ್ತೆ ಕಲ್ಯಾಣ ಕಾರ್ಯಕ್ರಮದ ಆಯೋಜನೆಯಲ್ಲಿ ಈ ಸ್ಪಷ್ಟತೆ ತಪ್ಪಿದೆ.

ಅಲ್ಲಿನ ಕಾರ್ಯಕ್ರಮಕ್ಕೆ ವಚನ ಚಳವಳಿಯ ಮತ್ತು ಸೌಹಾರ್ದ ಪರಂಪರೆಯ ಮೌಲ್ಯಗಳಿಗೆ ವಿರುದ್ಧವಾದ ವೈದಿಕಶಾಹಿ ಮೌಲ್ಯಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲಿಗರನ್ನು ‘ಮತ್ತೆ ಕಲ್ಯಾಣ’ದ ವೇದಿಕೆಗೆ ಆಹ್ವಾನಿಸಿರುವುದು ಒಳಗೆ ಮತ್ತು ಹೊರಗೆ ಸಕಾರಣವಾದ ವಿರೋಧವನ್ನು ಹುಟ್ಟುಹಾಕಿದೆ. ಮತ್ತೊಂದೆಡೆ ಹಲವಾರು ಬಾರಿ ಪ್ರಗತಿಪರರು ಎದುರಿಸಿದ ಪ್ರಾಮಾಣಿಕ ಗೊಂದಲವನ್ನೇ ಕರಾವಳಿಯ ಸಂಘಟಕರಲ್ಲಿ ಕೆಲವರು ಎದುರಿಸುತ್ತಿರಬಹುದು.

ಆ ಗೊಂದಲದ ತಾತ್ಪರ್ಯವಿಷ್ಟು: ನಮ್ಮ ಪ್ರಗತಿಪರ ಮಾತುಗಳನ್ನು ಕೇವಲ ನಮ್ಮನಮ್ಮಳಗೆ ಆಡಿಕೊಂಡರೆ ಏನು ಪ್ರಯೋಜನ? ‘ಅವರ ಅಖಾಡಕ್ಕೆ ಹೋಗಿ ಅವರಿಗೆ ತಿಳಿಹೇಳಿ ಬರಬೇಕಲ್ಲವೇ? ಈ ಸಂದರ್ಭದಲ್ಲಿ ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ನಡೆ ಮಾರ್ಗದರ್ಶಿಯಾದೀತು ಎಂದು ನನಗನಿಸುತ್ತದೆ.

ಇಂತಹದ್ದೇ ಒಂದು ಇಬ್ಬಂದಿತನವು ಕಳೆದ ವರ್ಷ ದೊರೆಸ್ವಾಮಿಯವರಿಗೂ ಎದುರಾಗಿತ್ತು. ಆದರೆ ಅವರು ಹಿಂದುತ್ವ ಶಕ್ತಿಗಳು ಬೆಳೆಯಲು ಪೂರಕವಾದ ಪಾತ್ರ ವಹಿಸುತ್ತಿರುವವರು ವೈಯಕ್ತಿಕ ಮಟ್ಟದಲ್ಲಿ ಎಷ್ಟೇ ಸಜ್ಜನರಾದರೂ ಆ ಪಾಪದಲ್ಲಿ ಪಾಲುದಾರರು ಎಂಬ ನಿಲುವನ್ನು ತಾಳಿದರು. ಮತ್ತು ಯಾವ ಕಾರಣಕ್ಕೂ ಪ್ರತ್ಯಕ್ಷವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ ತಮ್ಮ ಭಾಗವಹಿಸುವಿಕೆಯು ವೈದಿಕಶಾಹಿ ಮೌಲ್ಯಗಳಿಗೆ ಮಾನ್ಯತೆ ತಂದುಕೊಡಬಾರದೆಂಬ ದೃಢ ಮತ್ತು ಸ್ಪಷ್ಟ ನಿರ್ಧಾರ ತೆಗೆದುಕೊಂಡು ಸನ್ಮಾನವನ್ನು ನಿರಾಕರಿಸಿದರು.

ಆ ಸಂದರ್ಭಕ್ಕೂ ಮತ್ತು ‘ಮತ್ತೆ ಕಲ್ಯಾಣ’ ಅಭಿಯಾನಕ್ಕೂ ತಾಂತ್ರಿಕ ವ್ಯತ್ಯಾಸವಿದೆ. ಆದರೆ ಯಾವ ನೆಲೆಯಲ್ಲಿ ಈ ನಾಡಿನ ಹಿರಿಯಜ್ಜ ಸನ್ಮಾನವನ್ನು ನಿರಾಕರಿಸಿದರೋ ಆ ತಾತ್ವಿಕ ನೆಲೆಯು ಮತ್ತೆ ಕಲ್ಯಾಣದಲ್ಲಿ ಬಳಸುವ ಸಂಕೇತಗಳಿಗೂ ಅನ್ವಯಿಸುತ್ತದೆ ಎಂದು ನನಗನಿಸುತ್ತದೆ. ಫ್ಯಾಶಿಸ್ಟ್ ಕ್ರೌರ್ಯದಲ್ಲಿ ನೇರವಾಗಿ ಭಾಗವಹಿಸಿದ ಅಪರಾಧಿಗಳಷ್ಟೇ ಪಾಪದ ಹೊರೆಯನ್ನು ಅದರ ಬೆಳವಣಿಗೆಗೆ ಪೂರಕವಾಗಿ ತಮ್ಮ ನೈತಿಕತೆಯನ್ನು ಧಾರೆಯೆರೆಯುವ ವೈಟ್ ಕಾಲರ್ ಫ್ಯಾಶಿಸ್ಟರ ಮೇಲೂ ಇರುತ್ತದೆ. ಹೀಗಾಗಿ ಅವರು ನೇರವಾಗಿ ಕೋಮು ಗಲಭೆಗಳಲ್ಲಿ ಭಾಗವಹಿಸದೇ ಇರುವುದಾಗಲೀ, ವೈಯಕ್ತಿಕ ನಡೆ-ನುಡಿಗಳಾಗಲೀ ಅವರ ಅಂತಸ್ಸಾಕ್ಷಿಗಂಟಿರುವ ರಕ್ತದ ಕಲೆಗಳನ್ನು ಮರೆಮಾಚಕೂಡದು. ಅದೇ ಸಮಯದಲ್ಲಿ (“Throwing baby along with the bathwater”)  ಎಂಬ ಗಾದೆ ಮಾತಿನ ವಿವೇಕವನ್ನೂ ಮರೆಯಬಾರದು. ಅಂದರೆ ಅಭಿಯಾನದಲ್ಲಿ ಆಗಿರಬಹುದಾದ ಈ ತಪ್ಪನ್ನು ಖಂಡಿಸುತ್ತಲೇ ‘ಮತ್ತೆ ಕಲ್ಯಾಣ’ದ ಆಶಯಗಳು ಇನ್ನು ಮುಂದಾದರೂ ಸರಿಯಾಗಿ ಸಾಗುವಂತೆ ಸಕಾರಾತ್ಮಕ ವಿಮರ್ಶೆಯೊಂದಿಗೆ ತಿದ್ದುಪಡಿಗಳು ಸಾಧ್ಯವಾಗಬೇಕೇ ವಿನಾ ಈ ತಪ್ಪಿನಿಂದಾಗಿ ಇಡೀ ಅಭಿಯಾನವನ್ನೇ ವಿರೋಧಿಸಬಾರದು. ಅಷ್ಟೇ ಮುಖ್ಯವಾದದ್ದು ತಳಮಟ್ಟದಲ್ಲಿ ಬಲವಾದ ಶ್ರಮಜೀವಿಗಳ ಸಂಘಟನೆ ಕಟ್ಟದೆ ಮತ್ತೆ ಕಲ್ಯಾಣ ಸಾಧ್ಯವಿಲ್ಲವೆಂಬ ಎಚ್ಚರ ಮತ್ತು ತಯಾರಿ.

ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News