ಈ ಜಲ ಕ್ರಾಂತಿಯ ಯಶೋಗಾಥೆ ಓದಲೇಬೇಕು...

Update: 2019-08-03 05:34 GMT

ರಾಂಚಿ: ನಗರದ ಹೊರವಲಯದ ಆರಾ ಮತ್ತು ಕೇರಂ ಗ್ರಾಮಗಳು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್‌ನಲ್ಲಿ ಉಲ್ಲೇಖವಾಗುವ ಮೂಲಕ ದೇಶದ ಗಮನ ಸೆಳೆದಿದ್ದವು.

ಈ ಅವಳಿ ಗ್ರಾಮಗಳು ಪಕ್ಕದ ಬೆಟ್ಟದಿಂದ ಹರಿಯುವ ಮಳೆ ನೀರನ್ನು ಗ್ರಾಮಕ್ಕೆ ತಿರುಗಿಸಿ ಸಂರಕ್ಷಿಸಿ ಕುಡಿಯುವ ಹಾಗೂ ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿವೆ ಎಂದು ಮೋದಿ ಗುಣಗಾನ ಮಾಡಿದ್ದರು.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಹುಟ್ಟೂರು ರಲೇಗಾಂವ್ ಸಿದ್ಧಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿಂದ ಸ್ಫೂರ್ತಿ ಪಡೆದ ಉಭಯ ಗ್ರಾಮಸ್ಥರು ಇದೀಗ ಮುಂಗಾರು ಮಳೆ ವಿಳಂಬವಾದರೂ ಕಂಗೆಟ್ಟಿಲ್ಲ. ಗ್ರಾಮ ಅರಣ್ಯ ಸಂರಕ್ಷಣಾ ಸಮಿತಿಯ ಮುಖ್ಯಸ್ಥ ರಮೇಶ್ ಬೇಡಿಯಾ ಹೇಳುವಂತೆ, ಕಳೆದ ಫೆಬ್ರವರಿ ಬಳಿಕ ಮೂರು ತಿಂಗಳಲ್ಲಿ ಸುಮಾರು 650 ತಡೆ ಅಣೆಗಳನ್ನು ನಿರ್ಮಿಸಿ ದೊಂಬ ಮಹಾರ್‌ನಿಂದ ಹರಿಯುವ ನೀರನ್ನು ತಮ್ಮ ಗ್ರಾಮಗಳಿಗೆ ಹರಿಯುವಂತೆ ಮಾಡಿದ್ದಾರೆ.

"ಮೊದಲು ಸರ್ಕಾರದ ನರೇಗಾ ವಿಭಾಗವನ್ನು ಸಂಪರ್ಕಿಸಿ ಯೋಜನೆಗೆ ಅನುಮೋದನೆ ಪಡೆದೆವು. ನಮ್ಮ ಯೋಜನೆಯನ್ನು ಶ್ಲಾಘಿಸಿದರು; ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆ ಮುಗಿಯುವವರೆಗೂ ಕಾಯುವಂತೆ ಸೂಚಿಸಿದರು. ಆದರೆ ಬೆಟ್ಟ ಹಾಗೂ ಕಾಡಿನಲ್ಲಿ ಲಭ್ಯವಿದ್ದ ಬಂಡೆಗಲ್ಲುಗಳನ್ನು ಬಳಸಿ ನಾವು ಸಣ್ಣ ತಡೆ ಅಣೆಗಳನ್ನು ನಿರ್ಮಿಸಲು ಆರಂಭಿಸಿದೆವು. ಸುಮಾರು 150 ಮಂದಿ ಇದಕ್ಕಾಗಿ ಕೆಲಸ ಮಾಡಿದ್ದೇವೆ" ಎಂದು ವಿವರಿಸಿದರು.

ಗ್ರಾಮಸ್ಥರ ಈ ನಡೆ ಗ್ರಾಮದಲ್ಲಿ ವರ್ಷವಿಡೀ ಬೆಳೆ ಬೆಳೆಯಲು ಕೂಡಾ ನೆರವಾಗಿದೆ. "ಹಿಂದೆ ಮುಂಗಾರು ಹಂಗಾಮಿನಲ್ಲಿ ಮಾತ್ರ ಬೆಳೆ ಬೆಳೆಯುತ್ತಿದ್ದೆವು. ಈ ಬಾರಿ ಸಾಕಷ್ಟು ನೀರು ಸಿಕ್ಕಿದ ಹಿನ್ನೆಲೆಯಲ್ಲಿ, ತರಕಾರಿ ಕೂಡಾ ಬೆಳೆಯಲು ಸಾಧ್ಯವಾಯಿತು" ಎಂದು ಆರಾ ಗ್ರಾಮದ ಸೂರಜ್ ಕರ್ಮಾಲಿ ಹೇಳಿದ್ದಾರೆ.

ಶ್ರಮದಾನ, ಮದ್ಯಪಾನ ತ್ಯಜಿಸಿದ್ದು, ಕುಟುಂಬ ಯೋಜನೆ, ಅನಿಯಂತ್ರಿತ ಮೇಯಿಸುವಿಕೆ ತಡೆ, ಮರಗಳನ್ನು ಕಡಿಯದಿರುವುದು ಮತ್ತು ಬಯಲುಶೌಚ ತಡೆಯಿಂದಾಗಿ ಗ್ರಾಮ ಈಗ ಆದರ್ಶ ಗ್ರಾಮವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಎರಡು ಗ್ರಾಮಗಳು ಆಲ್ಕೋಹಾಲ್ ಮತ್ತು ತಂಬಾಕು ಮುಕ್ತ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News