ಮಲೆನಾಡು-ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-08-03 14:36 GMT

ಬೆಂಗಳೂರು,ಆ.3: ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಆಗಸ್ಟ್ ತಿಂಗಳಿಗೆ ಕಾಲಿರಿಸಿದ್ದರೂ ಈವರೆಗೆ ವಾಡಿಕೆಯಂತೆ ಮಳೆಯಾಗಿಲ್ಲ. ಆದುದರಿಂದ, ಮಲೆನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಈಗಾಗಲೇ ಮೋಡ ಬಿತ್ತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆ.6ರಿಂದ ಮೂರು ದಿನ ಹೊಸದಿಲ್ಲಿಯಲ್ಲಿದ್ದು, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ನಿತಿನ್ ಗಡ್ಕರಿ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಇನ್ನಿತರರನ್ನು ಭೇಟಿಯಾಗಲಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಆ.6ರಂದು ನಮ್ಮ ರಾಜ್ಯದ ಸಂಸದರು ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರ ಸಭೆ ಕರೆಯಲಾಗಿದೆ. ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಮಂಜೂರಾಗಿರುವ ಯೋಜನೆಗಳ ಅನುಷ್ಠಾನ, ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನ ಸೇರಿದಂತೆ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ಪಡೆಯುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಪಕ್ಷ ಸಂಘಟನೆ: ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರು 50 ಸಾವಿರ ಸದಸ್ಯತ್ವವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿ 100 ಸದಸ್ಯರನ್ನು ನೋಂದಣಿ ಮಾಡಬೇಕು ಎಂದು ಯಡಿಯೂರಪ್ಪ ಹೇಳಿದರು.

ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು, ಮಹಾನಗರ ಪಾಲಿಕೆ, ನಗರ ಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಈ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪಕ್ಷದ ಸಂಘಟನೆ ಬಲಿಷ್ಠವಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ನಾವು 25 ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸೇರಿದಂತೆ ಒಟ್ಟು 26 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಸಾಧ್ಯವಾಯಿತು. ಬಿಬಿಎಂಪಿಯಲ್ಲೂ ಕಳೆದುಕೊಂಡಿರುವ ಅಧಿಕಾರವನ್ನು ಸಂಘಟನೆ ಮೂಲಕ ಹಿಡಿಯಬೇಕಿದೆ ಎಂದು ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್, ಡಾ.ಸಿ.ಎನ್.ಅಶ್ವಥ್‌ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಂದು ಕ್ಷಣವನ್ನೂ ವ್ಯರ್ಥ ಮಾಡಲ್ಲ

ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಜನಸಾಮಾನ್ಯರ ಕಲ್ಯಾಣಕ್ಕೆ ಶ್ರಮಿಸುತ್ತೇನೆ. ರೈತನ ಮಗನಾಗಿ ಈಗಾಗಲೇ ನೇಕಾರರ 100 ಕೋಟಿ ರೂ.ಸಾಲ ಮನ್ನಾ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರಕಾರದಿಂದಲೂ ನಾಲ್ಕು ಸಾವಿರ ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News