ಐಎಂಎ ವಂಚನೆ ಪ್ರಕರಣ: ಮತ್ತೆ ವಿಚಾರಣೆಗೆ ಹಾಜರಾದ ಪೊಲೀಸ್ ಅಧಿಕಾರಿ

Update: 2019-08-03 14:43 GMT

ಬೆಂಗಳೂರು, ಆ.3: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸರಕಾರಕ್ಕೆ ಐಎಂಎ ಸಂಸ್ಥೆಯ ಪರವಾಗಿ ವರದಿ ಸಲ್ಲಿಸಿದ್ದ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನು ಎರಡನೆ ದಿನವೂ (ಶನಿವಾರ) ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದೆ.

ನಗರದ ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಸಂದರ್ಭದಲ್ಲಿ ಅಜಯ್ ಹಿಲೋರಿ ಅವರು ಐಎಂಎ ಸಮೂಹ ಸಂಸ್ಥೆಯ ಪರವಾಗಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಸಂಬಂಧ ಅಧಿಕಾರಿಗಳು ಶುಕ್ರವಾರ ಹಿಲೋರಿ ಅವರನ್ನು ತೀವ್ರ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಆದರೆ, ಇನ್ನಷ್ಟು ಮಾಹಿತಿ ಸಂಗ್ರಹಿಸಲು ಶನಿವಾರ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಎಂಎ ಹಣಕಾಸು ವ್ಯವಹಾರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಆರ್‌ಬಿಐ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆಗಿನ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಅವರು ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಆತನ ವಿರುದ್ಧ ರಾಜ್ಯ ಹಣಕಾಸು ಸಂಸ್ಥೆಗಳ ಠೇವಣಿದಾರರ ಸುರಕ್ಷತಾ ಕಾಯ್ದೆಯಡಿ ಕ್ರಮ ಜರುಗಿಸಲು ಅವಕಾಶವಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.

ಇದೇ ಪ್ರಕರಣದಲ್ಲಿ ಐಎಂಎ ಸಂಸ್ಥೆಯಿಂದ ಲಂಚ ಪಡೆದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ಉಪವಿಭಾಗಾಧಿಕಾರಿ ನಾಗರಾಜು ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಸಿಟ್ ಬಂಧಿಸಿತ್ತು. ಇದೀಗ ಅಜಯ್ ಹಿಲೋರಿ ಅವರನ್ನು ವಿಚಾರಣೆ ನಡೆಸಿ, ತನಿಖೆ ಚುರುಕುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News