ಅಖಂಡ ಕರ್ನಾಟಕದ ಕಲ್ಪನೆಯಲ್ಲಿ ಒಂದಾಗಿ ಅಭಿವೃದ್ಧಿಯತ್ತ ಕೆಲಸ ಮಾಡೋಣ: ಮೇಯರ್ ಗಂಗಾಂಬಿಕೆ

Update: 2019-08-04 14:53 GMT

ಬೆಂಗಳೂರು, ಆ.4: ಉತ್ತರ ಕರ್ನಾಟಕ ಭಾಷೆ ಮತ್ತು ಸಂಸ್ಕೃತಿ ಬಹಳ ಸಮೃದ್ಧವಾಗಿದೆ. ಅಲ್ಲಿನ ಜನರು ಬೆಂಗಳೂರಿಗೆ ಬಂದು ನೆಲೆಸಿದರೂ ತಮ್ಮ ಆಚಾರ, ವಿಚಾರ ಮರೆತಿಲ್ಲ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ. 

ರವಿವಾರ ಮಲ್ಲತ್ತಹಳ್ಳಿಯ ವಿದ್ಯಾಶ್ರೀ ಅನೀಲ ಹಾರಕೂಡೆ ಅಂಗಳದಲ್ಲಿ ಉತ್ತರ ಕರ್ನಾಟಕ ಸಂಘಟನಾ ಸಮಿತಿ ಆಯೋಜಿಸಿದ್ದ ಶ್ರಾವಣ ಪಂಚಮಿ ಜಾನಪದ ಭುಲಾಯಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಬ್ಬಗಳನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ನಡೆಸುತ್ತಿದ್ದಾರೆ. ರೊಟ್ಟಿ, ಬದನೆಕಾಯಿ ಪಲ್ಲೆ ಸೇರಿದಂತೆ ಈ ಭಾಗದಲ್ಲಿನ ಊಟದ ರುಚಿ ಎಲ್ಲರಿಗೂ ತಿಳಿಸುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸೇರಿ ಅಖಂಡ ಕರ್ನಾಟಕದ ಕಲ್ಪನೆಯಲ್ಲಿ ಎಲ್ಲರೂ ಒಂದಾಗಿ ಅಭಿವೃದ್ಧಿಯತ್ತ ಕೆಲಸ ಮಾಡೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಗೊ.ರು. ಚನ್ನಬಸಪ್ಪ ಮಾತನಾಡಿ, ಭುಲಾಯಿ ಹಾಡುಗಳು ಒಂದೊಂದು ಅರ್ಥಗರ್ಭಿತ ಕಥೆಗಳನ್ನು ತಿಳಿಸುತ್ತವೆ. ಮಹಿಳೆಯರು ಅಡುಗೆ ಮನೆಯಲ್ಲಿಯೇ ಬಹಳ ಸಮಯ ಕಳೆಯುತ್ತಿದ್ದು, ಶ್ರಾವಣ ಪಂಚಮಿ ಹಬ್ಬದಲ್ಲಿ ಭುಲಾಯಿ ಹಾಡುಗಳನ್ನು ಹಾಡುತ್ತಾ, ಸಂಭ್ರಮಾಚರಿಸುತ್ತಾರೆ. ಈ ಹಾಡುಗಳಲ್ಲಿ ಅತ್ತೆ, ಸೊಸೆ ಹೇಗಿರಬೇಕು. ತವರುಮನೆ ಮತ್ತು ಗಂಡನ ಮನೆಯ ಒಡನಾಟ, ತಂಗಿ - ಅಣ್ಣನ ಸಂಬಂಧದ ಬಗ್ಗೆ ತಿಳಿಯಬಹುದು ಎಂದರು.

ಭುಲಾಯಿ ಹಾಡಿನ ಒಂದೊಂದು ಪದ ವಿಶಿಷ್ಟವಾಗಿದ್ದು, ಜನರ ನಡುವಿನ ಸಂಬಂಧ ತಿಳಿಸುತ್ತವೆ. ಈ ಪದಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು. ಜನಪದ ಸಾಹಿತ್ಯದಲ್ಲಿ ಪ್ರಯೋಗಗಳು ಆಗುತ್ತಿವೆ ಎಂದರು.

ರಂಗಕರ್ಮಿ ನಾಗರಾಜಮೂರ್ತಿ ಮಾತನಾಡಿ, ಜಾನಪದಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಶ್ರಾವಣ ಪಂಚಮಿ ಯಾವ ರೀತಿ ಆಚರಣೆ ಮಾಡಬೇಕು ಎಂಬುದನ್ನು ಉತ್ತರ ಕರ್ನಾಟಕ ಜನರಿಂದ ತಿಳಿಯಬಹುದು. ಯಾವುದೇ ಮಾಢ್ಯಾಚರಣೆ ಇಲ್ಲದೇ ಹಾಡುತ್ತಾ, ಕುಣಿಯುತ್ತಾ, ಎಲ್ಲರೂ ಒಗ್ಗೂಡಿ ಆಚರಣೆ ಮಾಡುತ್ತಾರೆ ಎಂದರು.

ಹಿರಿಯ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್ ಆಣೆಕಟ್ಟು ಕಟ್ಟಿದ್ದನ್ನು ಇಂದಿಗೂ ಜನರು ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಉತ್ತರ ಕರ್ನಾಟಕದ ನಾರಾಯಣಪುರ ಸೇರಿದಂತೆ ಬಹುತೇಕ ಅಣೆಕಟ್ಟುಗಳನ್ನು ಬಾಳೇಕುಂದ್ರಿ ಅವರು ನಿರ್ಮಾಣ ಮಾಡಿದ್ದು, ಈ ಬಗ್ಗೆ ಪ್ರಚಾರವಾಗಿಲ್ಲ. ಉತ್ತರ ಕರ್ನಾಟಕದವರು ಸಂಘಟನೆಯಲ್ಲಿ ಮುಂದೆ ಬರಬೇಕಿದೆ ಎಂದರು.

ಕಾರ್ಯಕ್ರಮಲ್ಲಿ ಹಿರಿಯ ಪತ್ರಕರ್ತ ಶಂಕರ ಪಾಗೋಜಿ, ರಾಧಾ ಹಿರೇಗೌಡರ್, ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಎಸ್.ಆರ್. ಹೊನ್ನಲಿಂಗಯ್ಯ, ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ವಚನಜ್ಯೋತಿ ಬಳಗದ ಎಸ್.ಪಿನಾಕಪಾಣಿ ಸೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News