ಯುವ ಜನತೆ ರಾಜಕೀಯ ಪ್ರವೇಶಿಸಲಿ: ವಿಚಾರವಾದಿ ಮಂಗ್ಳೂರ ವಿಜಯ

Update: 2019-08-04 15:23 GMT

ಬೆಂಗಳೂರು, ಆ.4: ಸಾಮಾಜಿಕ ಬದಲಾವಣೆ ಹಾಗೂ ಸುಧಾರಣೆಗೆ ರಾಜಕೀಯ ಉತ್ತಮ ವೇದಿಕೆಯಾಗಿದ್ದು, ಯುವ ಜನತೆ ರಾಜಕೀಯ ಪ್ರವೇಶಿಸುವ ಬಗ್ಗೆ ಚಿಂತನೆ ನಡೆಸಬಹುದಾಗಿದೆ ಎಂದು ವಿಚಾರವಾದಿ ಮಂಗ್ಳೂರ ವಿಜಯ ಹೇಳಿದರು.

ರವಿವಾರ ನಗರದ ಎಸ್‌ಆರ್‌ಕೆ ಗಾರ್ಡನ್ ಸಮೀಪದ ಸಲಾಂ ಸೆಂಟರ್‌ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ(ಬೆಂ.ಜಿ) ಆಯೋಜಿಸಿದ್ದ, ರಾಜಕೀಯ ಕುರಿತು ಪದವೀಧರರಿಗೆ ಕಾರ್ಯಾಗಾರ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪರಾಧೀಕರಣ ಹಾಗೂ ಜಾತಿ ವ್ಯವಸ್ಥೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಹಲವು ಸಮೀಕ್ಷೆದಗಳು ದೃಢಪಡಿಸಿವೆ.ಆದರೆ, ಅಪರಾಧಿಗಳು ಶಾಸನ ಸಭೆ ಪ್ರವೇಶಿಸುವುದನ್ನು ತಡೆಯುವುದು ಮತ್ತು ಜಾತಿ ಮೇಲಾಟವನ್ನು ನಿಯಂತ್ರಿಸುವ ಅಧಿಕಾರ ಮತದಾರರ ಕೈಯಲ್ಲೇ ಇದೆ. ತಮ್ಮ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಂಡರೆ ಇವುಗಳನ್ನು ನಿಯಂತ್ರಿಸಬಹುದಾಗಿ ಎಂದರು.

ಶೋಷಿತರು ರಾಜಕೀಯ ಸ್ಥಾನಮಾನ ಪಡೆಯಲು ಮುಂದಾಗಬೇಕು. ಅಷ್ಟೇ ಅಲ್ಲದೆ, ರಾಜಕೀಯ ಮತ್ತು ಆಡಳಿತದ ಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ನಾವು, ಪ್ರಬಲವಾಗಿ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ, ಯುವಕರಿಗೆ ಹೆಚ್ಚಿನ ರಾಜಕೀಯ ವಿಷಯಗಳ ಸಂಬಂಧ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾಗ-3ರ 19ನೆಯ ಅನುಚ್ಛೇದದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಲಾಗಿದೆ. ಸಮಸ್ತ ನಾಗರಿಕರೂ ಈ ಸ್ವಾತಂತ್ರ್ಯಕ್ಕೆ ಬಾಧ್ಯರು ಎಂದು ಸಂವಿಧಾನ ಹೇಳುತ್ತಿದೆ. ಅಷ್ಟೇ ಅಲ್ಲದೆ, ಈ ಹಕ್ಕಿನ ಮೇಲೆ ಬಾಧ್ಯತೆಯ ನಿಯಂತ್ರಣವನ್ನೂ ವಿಧಿಸಿದೆ. ಹಕ್ಕು ಮತ್ತು ಬಾಧ್ಯತೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮೇಲ್ನೋಟಕ್ಕೆ ವಿರುದ್ಧವೆಂಬಂತೆ ಕಂಡರೂ ಪರಸ್ಪರ ಬಿಟ್ಟಿರಬಾರದ ಸಂಬಂಧಗಳು ಎಂದು ಅವರು ವಿಶ್ಲೇಷಿಸಿದರು.

ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕ ಎನ್.ವಿ.ನರಸಿಂಹಯ್ಯ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ರಾಜ್ಯ ರಾಜಕೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಇಂಥ ಬೆಳವಣಿಗೆಗಳಿಂದ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ರಾಜ್ಯ ರಾಜಕೀಯ ಕ್ಷೇತ್ರಕ್ಕೆ ಮಂಕು ಕವಿಯುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ, ಕಳಚಿ ಬೀಳುತ್ತಿರುವ ರಾಜ್ಯ ರಾಜಕೀಯ ಮೌಲ್ಯಗಳನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ಯಬೇಕು. ಅಂದಾಗ ಮಾತ್ರ ಕರ್ನಾಟಕ ರಾಜಕೀಯದ ಗತ ವೈಭವ ಮರುಕಳಿಸಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ತಾಜುದ್ದೀನ್ ಸಾಬ, ಬೆಂಗಳೂರು ಜಿಲ್ಲಾಧ್ಯಕ್ಷ ಶಹೀದ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಲಿಕ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News