2ನೇ ಟ್ವೆಂಟಿ-20: ಭಾರತಕ್ಕೆ 22 ರನ್‌ಗಳ ಜಯ

Update: 2019-08-04 18:46 GMT

ಫ್ಲೋರಿಡಾ, ಆ.4: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಟ್ವೆಂಟಿ-20 ಪಂದ್ಯಕ್ಕೆ ಮಳೆ ಅಡ್ಡಿಪಡಿದ್ದು, ಭಾರತ ಡಕ್‌ವರ್ಥ್ ಲೂಯಿಸ್ (ಡಿ.ಎಲ್) ನಿಯಮದಂತೆ 22ರನ್‌ಗಳ ಜಯದ ನಗೆ ಬೀರಿದೆ ಗೆಲುವಿಗೆ 168 ರನ್‌ಗಳ ಸವಾಲನ್ನು ಪಡೆದಿರುವ ವೆಸ್ಟ್‌ಇಂಡೀಸ್ 15.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತ್ತು. ಬಳಿಕ ಆಟ ನಡೆಯಲಿಲ್ಲ.

 ಜಯ ಗಳಿಸಲು ವಿಂಡೀಸ್ 27 ಎಸೆತಗಳಲ್ಲಿ 70 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದಾಗ ಮಳೆ ಕಾಣಿಸಿಕೊಂಡಿತ್ತು.

  ಭಾರತ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅರ್ಧಶತಕ(67) ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿದೆ. ರೊವ್‌ಮ್ಯಾನ್ ಪೂವೆಲ್ (54) ಅರ್ಧಶತಕ ದಾಖಲಿಸಿದ್ದಾರೆ. ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 7.5 ಓವರ್‌ಗಳಲ್ಲಿ 67 ರನ್ ಗಳ ಜೊತೆಯಾಟ ನೀಡಿದರು. ಶಿಖರ್ ಧವನ್ 23 ರನ್ ಗಳಿಸಿ ಕೀಮೊ ಪಾಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ ಅವರು ಒಶಾನೆ ಥಾಮಸ್ ಎಸೆತದಲ್ಲಿ ಹೆಟ್ಮೆಯರ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮುನ್ನ ರೋಹಿತ್ 51 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 67 ರನ್ ಗಳಿಸಿದರು ರೋಹಿತ್ 107ನೇ ಸಿಕ್ಸರ್ ದಾಖಲಿಸುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ (105 ಸಿಕ್ಸರ್) ದಾಖಲೆ ಮುರಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ 28 ರನ್ ಗಳಿಸಿ ಕಾಟ್ರೆಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ರಿಷಭ್ ಪಂತ್ 4 ರನ್, ಮನೀಷ್ ಪಾಂಡೆ 6ರನ್, ಕೃನಾಲ್ ಪಾಂಡ್ಯ ಔಟಾಗದೆ 20ರನ್ ಮತ್ತು ರವೀಂದ್ರ ಜಡೇಜ ಔಟಾಗದೆ 9 ರನ್ ಗಳಿಸಿದರು.

.

ರೋಹಿತ್ ಸಿಕ್ಸರ್‌ನಲ್ಲಿ ದಾಖಲೆ

ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿದ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ. 96ನೇ ಟ್ವೆಂಟಿ-20 ಪಂದ್ಯವನ್ನಾಡುತ್ತಿರುವ 32 ಹರೆಯದ ರೋಹಿತ್ ಶರ್ಮಾ ಅವರು ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಸುನೀಲ್ ನರೇನ್ ಎಸೆತದಲ್ಲಿ ಸಿಕ್ಸರ್ ಎತ್ತುವ ಮೂಲಕ ಗೇಲ್ ದಾಖಲೆಯನ್ನು ಮುರಿದಿದ್ದಾರೆ. ಗೇಲ್ 58 ಪಂದ್ಯಗಳಲ್ಲಿ 105 ಸಿಕ್ಸರ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಗಳಿಸಿರುವ ಸಿಕ್ಸರ್‌ಗಳ ಸಂಖ್ಯೆಯನ್ನು 107ಕ್ಕೆ ಏರಿಸಿದ್ದಾರೆ.

ನ್ಯೂಝಿಲ್ಯಾಂಡ್‌ನ ಮಾರ್ಟಿನ್ ಗಪ್ಟಿಲ್ 76 ಟ್ವೆಂಟಿ-20 ಪಂದ್ಯಗಳಲ್ಲಿ 103 ಸಿಕ್ಸರ್ ಬಾರಿ ಗರಿಷ್ಠ ಸಿಕ್ಸರ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ 3ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News