ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ವಿರುದ್ಧ ಕಾನೂನು ಹೋರಾಟ- ಬೆಂಗಳೂರಿನಲ್ಲಿ ಶೆಹ್ಲಾ ರಶೀದ್

Update: 2019-08-05 12:43 GMT

ಬೆಂಗಳೂರು, ಆ.5: ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರಕಾರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಹೋರಾಟ ನಡೆಸಲಾಗುವುದು ಎಂದು ಜೆಎನ್‌ಯು ವಿದ್ಯಾರ್ಥಿ ನಾಯಕಿ, ಹೋರಾಟಗಾರ್ತಿ ಶೆಹ್ಲಾ ರಶೀದ್ ಹೇಳಿದರು.

ಸೋಮವಾರ ನಗರದ ಕಾಕ್ಸ್ ಟೌನ್‌ನ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ, ಸಂವಿಧಾನ ರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ವಿಶೇಷ ಅಧಿಕಾರ ನೀಡುವ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಿರುವುದು ಖಂಡನೀಯ. ಅಲ್ಲದೆ, ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರವು ಸಂವಿಧಾನಕ್ಕೆ ಪದೇ ಪದೇ ವಂಚನೆ ಮಾಡುತ್ತಿದೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ದೇಶದ ಬಹುಭಾಷೆ, ಬಹುಸಂಸ್ಕೃತಿ ಹಾಗೂ ಬಹು ನಾಗರಿಕತೆಯನ್ನು ಸಂಪೂರ್ಣವಾಗಿ ಸರ್ವನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

ದೇಶವನ್ನು ಸರ್ವನಾಶ ಮಾಡಲು ಹೊರಟಿರುವ ಶಕ್ತಿಗಳ ಕೈಗೆ ರಾಷ್ಟ್ರದ ರಾಜಕೀಯ ಅಧಿಕಾರ ಸಿಕ್ಕಿದೆ ಎಂದು ವಿಷಾದಿಸಿದ ಅವರು, ಯಾವುದೇ ಧರ್ಮವು ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಆದರೂ, ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಕೆಟ್ಟ ಪ್ರಯತ್ನ ದೇಶದೆಲ್ಲೆಡೆ ನಡೆಯುತ್ತಿದೆ ಎಂದು ಹೇಳಿದರು. 2022ರ ವೇಳೆಗೆ ನವಭಾರತ ನಿರ್ಮಾಣ ಮಾಡುತ್ತೇವೆ ಎನ್ನುತ್ತಿರುವವರು ಧರ್ಮದ ಹೆಸರಿನಲ್ಲಿ ಈ ದೇಶವನ್ನು ರಣರಂಗ ಮಾಡಲು ಹೊರಟಿದ್ದಾರೆ. ಒಂದು ರೀತಿಯಲ್ಲಿ ದೇಶವು ವಿಚಾರಗಳ ರಣರಂಗವಾಗುತ್ತಿದೆ ಎಂದು ಶೆಹ್ಲಾ ರಶೀದ್ ಬೇಸರ ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News