ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

Update: 2019-08-05 16:04 GMT

ಬೆಂಗಳೂರು, ಆ.5: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುತ್ತಿದ್ದ ಸಂವಿಧಾನದ 370 ಮತ್ತು 35ಎ ಪರಿಚ್ಛೇದವನ್ನು ಕೇಂದ್ರ ಸರಕಾರ ರದ್ದುಪಡಿಸಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಇಂದಿಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿಯು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ. ಅಕ್ರಮವಾಗಿ ರಾಜ್ಯಸಭೆಯನ್ನು ವಿಸರ್ಜಿಸಿದ್ದ ಬಿಜೆಪಿಯು ಇದೀಗ ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್ತಿನಲ್ಲಿ 370 ನೆ ವಿಧಿಯನ್ನು ರದ್ದು ಪಡಿಸಿದ ಸಂದರ್ಭದಲ್ಲಿ ಪ್ರತಿಪಕ್ಷಗಳು ನಡೆದುಕೊಂಡ ರೀತಿಯು ಖಂಡನಾರ್ಹ. ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶದಲ್ಲಿ ಮೀಸಲಾತಿ ನೀಡಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಇನ್ನು ಎಐಡಿಎಂಕೆ ತನ್ನ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುತ್ತದೆ. ಕಾಶ್ಮೀರದ ಬಗ್ಗೆ ಚಕಾರ ಎತ್ತಿಲ್ಲ. ಇದು ಅತ್ಯಂತ ಅಘಾತಕಾರಿ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಮೀನಾಕ್ಷಿ ಸುಂದರಂ, ಅಕ್ರಮ ಮಾರ್ಗಗಳು ಹಾಗೂ ಕ್ರೂರ ಬಲ ಪ್ರದರ್ಶನದ ಮೂಲಕ ಜಮ್ಮು-ಕಾಶ್ಮೀರದ ಜನರಿಗೆ ದೇಶದ ಜನರೊಂದಿಗೆ ಸಂಪರ್ಕವಿಲ್ಲದಂತೆ ಮಾಡಲಾಗಿದೆ. ಒಂದು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇವಲ ಎರಡು ಗಂಟೆಗಳಲ್ಲಿ ಚರ್ಚೆ ಮಾಡಿ ಅನುಮೋದಿಸುವಂತೆ ಸಂಸತ್ ಸದಸ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆಪಾದಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ 370 ನೆ ವಿಧಿಯು ಸಂವಿಧಾನದ ಶಾಶ್ವತ ವಿಧಿಯಾಗಿದ್ದು, ಇದು ತಾತ್ಕಾಲಿಕವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ವಿಧಿಯು 1948ರಲ್ಲಿ ಕಾಶ್ಮೀರದ ರಾಜ, ಕೇಂದ್ರ ಸರಕಾರದ ಜತೆಗೆ ಮಾಡಿಕೊಂಡ ಒಪ್ಪಂದದಲ್ಲಿ ವಿಧಿಸಲಾಗಿದ್ದ ಷರತ್ತುಗಳಿಗೆ ಮಾನ್ಯತೆ ನೀಡುವದ್ದಾಗಿದೆ. ಇದನ್ನು ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಅಲ್ಲಿನ ವಿಧಾನಸಭೆಯ ಅಭಿಪ್ರಾಯ ಪಡೆಯಬೇಕು. ಅದನ್ನು ಮಾಡದೇ ಏಕಾಏಕಿ ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಬಿಜೆಪಿಯು ಜಮ್ಮು ಮತ್ತು ಕಾಶ್ಮೀರವನ್ನು ಒಂದು ಆಕ್ರಮಿತ ಪ್ರದೇಶದಂತೆ ಕಾಣುತ್ತಿದೆ. ಸಂವಿಧಾನವನ್ನು ತುಳಿದು ಅವರು ಜಮ್ಮು, ಕಾಶ್ಮೀರ ಹಾಗೂ ಲಡಾಕ್‌ಅನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದಾರೆ. ಇದು ರಾಷ್ಟ್ರೀಯ ಐಕ್ಯತೆಗೆ ಹಾಗೂ ಭಾರತವು ರಾಜ್ಯಗಳ ಒಂದು ಒಕ್ಕೂಟ ಎಂಬ ಪರಿಕಲ್ಪನೆಯ ಮೇಲೆ ಮಾಡುತ್ತಿರುವ ದಾಳಿಯಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷವು ಕೈಗೊಂಡಿರುವ ನಿರ್ಣಯ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದೆ. ಇದು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕೆ ಸೀಮಿತವಾದದ್ದಲ್ಲ. ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಸಂವಿಧಾನದ ಮೇಲೆ ಮಾಡಿರುವ ದಾಳಿಯಾಗಿದೆ. ಇದು ಮುಂದಿನ ಸರ್ವಾಧಿಕಾರಿಶಾಹಿ ದಾಳಿಯ ಮುನ್ನೆಚ್ಚರಿಕೆಯಾಗಿದೆ. ಹೀಗಾಗಿ, ಎಲ್ಲರೂ ಜಮ್ಮು ಮತ್ತು ಕಾಶ್ಮೀರದ ಪರವಾಗಿ ಹಾಗೂ ಸಂವಿಧಾನ ಮತ್ತು ಒಕ್ಕೂಟ ತತ್ವದ ಮೇಲಿನ ದಾಳಿಯ ವಿರುದ್ಧವಾಗಿ ನಿಲ್ಲಬೇಕಿದೆ ಎಂದರು.

ಸಂವಿಧಾನದ 370 ಮತ್ತು 35(ಎ) ವಿಧಿಯನ್ನು ರದ್ದು ಮಾಡಬಾರದು. ಜಮ್ಮು ಮತ್ತು ಕಾಶ್ಮೀರದ ಮೇಲೆ ಹೇರಿರುವ ಮಿಲಿಟರಿ ದಿಗ್ಬಂಧನವನ್ನು ಹಿಂತೆಗೆಯಬೇಕು ಹಾಗೂ ಎಲ್ಲ ಸಂವಹನ ಸಂಪರ್ಕಗಳನ್ನು ಪುನರ್ ಸ್ಥಾಪಿಸಬೇಕು. ಜಮ್ಮು ಮತ್ತು ಕಾಶ್ಮೀರದ ಭವಿಷ್ಯದ ಕುರಿತು ಸಂಸತ್ತಿನಲ್ಲಿ ಹಾಗೂ ಆ ರಾಜ್ಯದ ಜನತೆಯ ಜೊತೆಗೆ ಮುಕ್ತ ಚರ್ಚೆ, ಸಂವಾದ ನಡೆಸಬೇಕು. ಎಲ್ಲ ರಾಜಕೀಯ ಪಕ್ಷಗಳೂ ಸಂವಿಧಾನ ತಿದ್ದುಪಡಿ ಮಸೂದೆಗಳ ಬಗ್ಗೆ ಚರ್ಚೆ ಮಾಡಲು ಒಂದು ವಿಧಿ ವಿಧಾನ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಕೆ.ಎಸ್.ಲಕ್ಷ್ಮಿ, ಯುವಜನ ಸಂಘಟನೆಯ ಮುಖಂಡ ಬಸವರಾಜ ಪೂಜಾರ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಸಂಘಟನೆ ಹಾಗೂ ಕೂಲಿ ಕಾರ್ಮಿಕ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News