ಆ.6: ಪಕ್ಷ ಸಂಘಟನೆಗೆ ರಾಷ್ಟ್ರೀಯಾಧ್ಯಕ್ಷ ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ

Update: 2019-08-05 16:07 GMT

ಬೆಂಗಳೂರು, ಆ. 5: ಮುಂಬರಲಿರುವ ನಗರ ಸ್ಥಳೀಯ ಸಂಸ್ಥೆ ಹಾಗೂ ಉಪ ಚುನಾವಣೆಗೆ ಸಿದ್ದತೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸೇರಿದಂತೆ ಪಕ್ಷ ಸಂಘಟನೆಗೆ ಒತ್ತು ನೀಡಲು ನಾಳೆ (ಆ.6) ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳನ್ನು ಏರ್ಪಡಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಯಕರ್ತರ ಸಭೆ ನಡೆಯಲಿದೆ. ಮೈತ್ರಿ ಸರಕಾರ ಪತನದ ನಂತರ ರಾಜಕೀಯದಲ್ಲಿ ಆಗಿರುವ ಬೆಳವಣಿಗೆಗಳು, ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ, ಅಲ್ಪಸಂಖ್ಯಾತ ಮುಖಂಡರ ಸಭೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ನಡೆಸಿದ್ದು, ಆ.7ಕ್ಕೆ ನಗರದ ಅರಮನೆ ಮೈದಾನದಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ.

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ಪದಾಧಿಕಾರಿಗಳು, ಹಿರಿಯ ಮುಖಂಡರು, ಶಾಸಕರು ಹಾಗೂ ಸಂಸದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

‘ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿರುವುದು ದೊಡ್ಡ ಆಘಾತವನ್ನು ಉಂಟು ಮಾಡಿದೆ. ಇದಕ್ಕೆ ರಾಜಕೀಯ ಬೆಳವಣಿಗೆ, ತೆಗೆದುಕೊಂಡ ತಿರುವುಗಳು, ಕೆಲವರಿಂದ ಪಕ್ಷಕ್ಕೆ ದ್ರೋಹವಾದ ಕಾರಣ ಹಾಗೂ ಕಾರ್ಯಕರ್ತರ ಕಡೆಗಣನೆ ಹಿನ್ನೆಡೆಗೆ ಕಾರಣವಾಗಿದೆ.

ಪಕ್ಷಕ್ಕೆ ಇದು ಸಂಕಷ್ಟದ ಕಾಲ. ಅದನ್ನು ಕಟ್ಟಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಸರಕಾರದಲ್ಲಿ ಜಾರಿಗೊಳಿಸಿದ ರೈತರ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆಯಂತಹ ಪ್ರಮುಖ ಕಾರ್ಯಕ್ರಮಗಳು ಮಸಕಾಗುವಷ್ಟರಮಟ್ಟಿಗೆ ಅಸಹ್ಯ ರಾಜಕೀಯ ನಡೆಯುತ್ತಿದ್ದು, ಇವೆಲ್ಲವನ್ನೂ ನಾವು ಎದುರಿಸಿ ಪಕ್ಷ ಸಂಘಟನೆ ಮಾಡಬೇಕಿದೆ’ ಎಂದು ದೇವೇಗೌಡ ಕಾರ್ಯಕರ್ತರಿಗೆ ಬಹಿರಂಗಪತ್ರ ಬರೆದಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News