ತ್ರಿವಳಿ ತಲಾಕ್ ಬಿಲ್ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2019-08-05 16:23 GMT

ಬೆಂಗಳೂರು, ಆ.5: ಮುಸ್ಲಿಮರಲ್ಲಿ ಜಾರಿಯಲ್ಲಿದ್ದ ತ್ರಿವಳಿ ತಲಾಕ್ ನಿಷೇಧಿಸಿ ಕೇಂದ್ರ ಸರಕಾರ ನೂತನ ಕಾನೂನು ಜಾರಿಗೊಳಿಸಿದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಆರೀಫ್ ಜಮೀಲ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಕಾಯ್ದೆಯು ಸಂವಿಧಾನದ ಪರಿಚ್ಛೇದ 13, 14, 15, 21 ಮತ್ತು 25ಕ್ಕೆ ವಿರುದ್ಧವಾಗಿದೆ ಎಂದು ಘೋಷಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ತ್ರಿವಳಿ ತಲಾಕ್ ಕಾನೂನು ಬಾಹಿರ ಎಂದು ಘೋಷಿಸಿದ ಮೇಲೆ ಕಾಯ್ದೆಯನ್ನು ರೂಪಿಸುವ ಅಗತ್ಯ ಇರಲಿಲ್ಲ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಾಯ್ದೆಯನ್ನೂ ರೂಪಿಸಲಾಗಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಮುಸ್ಲಿಂ ಮಹಿಳೆಯ ವೈವಾಹಿಕ ಜೀವನದ ಹಕ್ಕುಗಳ ಕಾಯ್ದೆಯು ಮದುವೆಯಾದ ಮುಸ್ಲಿಂ ಪುರುಷರ ದೌರ್ಜನ್ಯಕ್ಕೆ ದುರ್ಬಳಕೆಯಾಗುವ ಅಪಾಯವಿದ್ದು, ತ್ರಿವಳಿ ತಲಾಕ್ ಅನ್ನು ಘೋಷಿಸಿ 3 ವರ್ಷ ಸೆರೆವಾಸ ವಿಧಿಸುವಂತಹ ಬಿಗಿ ಕ್ರಮಗಳನ್ನು ಸಡಿಲಗೊಳಿಸಬೇಕು ಎಂಬುದು ಅರ್ಜಿದಾರರ ವಾದವಾಗಿದೆ. ಅರ್ಜಿದಾರರ ಪರವಾಗಿ ರಹಮತುಲ್ಲಾ ಕೊತ್ವಾಲ್ ಅವರು ವಾದಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News