ಮಕ್ಕಳಿಗೆ ಅರ್ಥವಾಗುವ ಸಾಹಿತ್ಯ ರಚನೆ ಅಗತ್ಯ: ಕವಿ ಸಿದ್ದಲಿಂಗಯ್ಯ

Update: 2019-08-05 16:37 GMT

ಬೆಂಗಳೂರು, ಆ.5: ಮಕ್ಕಳಿಗೆ ಅರ್ಥವಾಗುವ, ಹತ್ತಿರವಾಗುವಂತಹ ಸಾಹಿತ್ಯ ರಚನೆ ಅಗತ್ಯವಿದೆ ಎಂದು ದಲಿತ ಕವಿ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಜೈನ್ ವಿಶ್ವವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ಶಬ್ದನಾ ಭಾಷಾಂತರ ಕೇಂದ್ರ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪ್ರಥಮ ಬುಕ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಮಕ್ಕಳ ಜನಪ್ರಿಯ ಪುಸ್ತಕಗಳ ಮರುಓದು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಯೋಗ, ಅಧ್ಯಾತ್ಮದ ವಿಷಯಗಳನ್ನು ಓದಿಸುವುದರಿಂದ ಅದು ಅವರಿಗೆ ಅರ್ಥವಾಗುವುದಿಲ್ಲ. ಅದರ ಬದಲಿಗೆ ಅವರಿಗೆ ಇಷ್ಟವಾಗುವ, ಆಸಕ್ತಿ ಹುಟ್ಟಿಸುವ ಸಾಹಿತ್ಯದ ರಚನೆ ಅಗತ್ಯವಿದೆ. ಹೀಗಾಗಿ, ಮಕ್ಕಳನ್ನು ಸಾಹಿತ್ಯದ ಕಡೆಗೆ ಆಕರ್ಷಿಸುವ ಸಾಹಿತ್ಯವನು ರಚಿಸಬೇಕು ಎಂದು ನುಡಿದರು.

ಮಕ್ಕಳಲ್ಲಿ ಅಧ್ಯಾತ್ಮ, ಯೋಗದ ಕುರಿತಾದ ಸಾಹಿತ್ಯ ಗೊಂದಲವನ್ನು ಸೃಷ್ಟಿಸುತ್ತದೆ. ಹೀಗಾಗಿ, ಮಕ್ಕಳಿಗೆ ಕೈಗೆಟುಕುವ ಸಾಹಿತ್ಯ ರಚನೆಗೆ ಮುಂದಾಗಬೇಕು. ಇಂದಿನ ಕೆಲ ಹಿರಿಯ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆಯನ್ನು ಕೈಬಿಟ್ಟಿದ್ದಾರೆ. ಆದರೆ, ಕನ್ನಡ ಸಾಹಿತ್ಯ ಪ್ರಾರಂಭದ ದಿನದಿಂದಲೂ ಮಕ್ಕಳ ಸಾಹಿತ್ಯಕ್ಕೆ ನಾವು ಆದ್ಯತೆ ನೀಡಿದ್ದೇವೆ. ಮಕ್ಕಳಿಗೆ ಸಾಕು ಪ್ರಾಣಿಗಳ ಮೇಲೆ ತುಂಬಾ ಪ್ರೀತಿ ಇದೆ. ಇದೇ ವಿಷಯ ಸಾಹಿತ್ಯದಲ್ಲಿ ಇನ್ನೂ ಜೀವಂತವಾಗಿದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಶಿಶು ಸಾಹಿತ್ಯ ರಚನೆ ಅತ್ಯಂತ ತ್ರಾಸದಾಯಕ ಕೆಲಸವಾಗಿದೆ. ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸೇರಿದಂತೆ ಕೆಲವರನ್ನು ಹೊರತುಪಡಿಸಿದರೆ ಮಕ್ಕಳ ಸಾಹಿತ್ಯದ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಭಾಷೆಯ ಉಳಿವಿನ ಪ್ರಶ್ನೆಯು ಮಕ್ಕಳ ಓದಿನ ಮೇಲೆ ನಿಂತಿರುತ್ತದೆ. ಅವರಿಗೆ ಸಣ್ಣ ವಯಸ್ಸಿನಿಂದಲೇ ಕನ್ನಡದ ಓದಿನ ಅಭಿರುಚಿ ಬೆಳೆಸಬೇಕು. ಅದಕ್ಕಾಗಿ ಅವರಿಗೆ ಇಷ್ಟವಾಗುವ ಸಾಹಿತ್ಯ ರಚನೆ ಬೇಕು ಎಂದು ಸಿದ್ದಲಿಂಗಯ್ಯ ನುಡಿದರು.

ಮಕ್ಕಳಿಗೆ ಕವಿತೆ, ನಾಟಕ, ಕಾದಂಬರಿ ಸೇರಿದಂತೆ ಎಲ್ಲ ಪ್ರಕಾರದ ಸಾಹಿತ್ಯವನ್ನೂ ಓದಿಸಬೇಕು. ಅವರಿಗೆ ಅರ್ಥವಾಗುವಂತೆ ಸರಳವಾದ ಭಾಷೆಯ ಮೂಲಕ ಅವರನ್ನು ತಲುಪಬೇಕು ಎಂದ ಅವರು, ಈ ಮೂಲಕ ಮಕ್ಕಳನ್ನು ಸಾಹಿತ್ಯ ಲೋಕಕ್ಕೆ ಸೆಳೆಯಬೇಕು. ನಂತರದ ಹಂತದಲ್ಲಿ ಮಕ್ಕಳ ಮನಸ್ಸನ್ನು ತಣಿಸಿ, ಆಸಕ್ತಿ ಕೆರಳಿಸಿ, ಕಲ್ಪನೆಯನ್ನು ವಿಸ್ತರಿಸುವ ಪುಟ್ಟ ಕಥೆಗಳನ್ನು, ದೃಶ್ಯವಾಗಿ ಕಟ್ಟಿಕೊಡುವ ನಾಟಕಗಳ ಮೂಲಕ ಅವರ ಸಾಹಿತ್ಯ ಲೋಕದಲ್ಲಿಯೇ ಉಳಿಯುವಂತೆ ಮಾಡಬೇಕಿದೆ ಎಂದರು.

ಮಕ್ಕಳಿಗೆ ಓದಿನ ಆಸಕ್ತಿಯನ್ನು ಹೆಚ್ಚಿಸುವ ಯಾವುದೇ ಪುಸ್ತಕವನ್ನು ಅವರಿಗೆ ನೀಡಬೇಕು. ಆ ಮೂಲಕ ಅವರಲ್ಲಿ ಹವ್ಯಾಸ ಬೆಳೆಸಬೇಕು. ಒಮ್ಮೆ ಓದು ಆರಂಭವಾದರೆ ಅದು ಹವ್ಯಾಸವಾಗಿ ಮಾರ್ಪಡುತ್ತದೆ. ಮಕ್ಕಳನ್ನು ಪುಸ್ತಕ ಮಳಿಗೆಗೆ ಕರೆದುಕೊಂಡು ಹೋಗಬೇಕು. ಅಲ್ಲಿ ಅವರಿಗೆ ಯಾವ ಪುಸ್ತಕ ಇಷ್ಟವಾಗುತ್ತದೆ ಎಂದು ತಿಳಿದುಕೊಂಡು ಅದನ್ನೇ ಗಿಫ್ಟ್ ಆಗಿ ಕೊಡುವಂತಹ ಪದ್ಧತಿ ಪೋಷಕರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಬ್ದನಾ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್.ವಿಜಯಶಂಕರ್, ಪ್ರಥಮ ಬುಕ್ಸ್‌ನ ಹಿರಿಯ ಸಂಪಾದಕ ಸಂಧ್ಯಾ ಟಾಕ್ಸಾಳೆ, ಅಧ್ಯಕ್ಷ ಸುಝೇನ್ ಸಿಂಗ್, ಮೈಥಿಲಿ ಪಿ.ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News