×
Ad

ಕನ್ನಡ ಹಾಡು ಹಾಡಲು ನಿರಾಕರಿಸಿದ ಗಾಯಕನ ಮೇಲೆ ಹಲ್ಲೆ

Update: 2019-08-06 20:22 IST

ಬೆಂಗಳೂರು, ಆ.6: ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ನಡೆಯುತ್ತಿದ್ದ ಬ್ಯಾಂಡ್ ಕಾರ್ಯಕ್ರಮದ ವೇಳೆ ಕನ್ನಡ ಹಾಡು ಹಾಡಲು ನಿರಾಕರಿಸಿದ ಗಾಯಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಈ ಘಟನೆ ಮಹದೇವಪುರದ ಫಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ನಡೆದಿದ್ದು, ಹಲ್ಲೆಯಿಂದ ಗೀಟಾರ್ ವಾದಕ, ಗಾಯಕ ಅನುಭವ್ ಎಂಬುವರ ಕಣ್ಣಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದಾರೆ.

ಫಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ಮ್ಯೂಸಿಕ್ ಬ್ಯಾಂಡ್ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮ ಮುಗಿಯುವ ವೇಳೆಗೆ ಕುಡಿದ ಅಮಲಿನಲ್ಲಿದ್ದ ನಾಲ್ವರು ಯುವಕರು ಅಲ್ಲಿಗೆ ಬಂದು ಕನ್ನಡ ಹಾಡುಗಳನ್ನು ಹಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಇದಕ್ಕೆ ಗಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸಂಗೀತ ಉಪಕರಣಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಎಲ್ಲವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದರಿಂದ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News