ನಕಲಿ ಫೇಸ್‌ಬುಕ್ ಖಾತೆ ಬಳಸಿ ಲಕ್ಷಾಂತರ ರೂ. ವಂಚನೆ: ಆರೋಪಿ ಬಂಧನ
ಬೆಂಗಳೂರು, ಆ.6: ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು, ಸಲಿಗೆಯಿಂದಲೇ ಮಾತನಾಡಿ, ಮದುವೆ ಆಗುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ಆರೋಪಿಯೋರ್ವನನ್ನು ನಗರದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾಂಚಿಕೈ ಗ್ರಾಮದ ನಿವಾಸಿ ಪ್ರಮೋದ್ ಮಂಜುನಾಥ್ ಹೆಗಡೆ(28) ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಾಶ್ ಭಟ್ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಆರೋಪಿ ಮಂಜುನಾಥ್ ಹೆಗಡೆ, ಹಲವು ಯುವತಿಯರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ ತನ್ನ ಸಂಕಷ್ಟಗಳನ್ನು ಹೇಳಿಕೊಂಡು ಹಂತ ಹಂತವಾಗಿ ಹಣ ನೀಡುವಂತೆ ವಸೂಲಿ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಒಂದು ವರ್ಷದಿಂದ ಸುಮಾರು 11.23 ಲಕ್ಷ ರೂ. ಗಳನ್ನು ಸುಲಿಗೆ ಮಾಡಿದ್ದ ಆರೋಪಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ. ಈತನಿಂದ ಒಂದು ಕಾರು, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಸುಮಾರು 40 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ 6.2 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ಬಂಧಿತ ಪ್ರಮೋದ್ ಮಂಜುನಾಥ್ ಹೆಗಡೆಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.