×
Ad

ಬಕ್ರೀದ್, ಗಣೇಶ ಹಬ್ಬ ಹಿನ್ನೆಲೆ: ಬೆಂಗಳೂರಿನೆಲ್ಲೆಡೆ ಕಟ್ಟೆಚ್ಚರ ವಹಿಸಲು ಪೊಲೀಸ್ ಆಯುಕ್ತರ ಸೂಚನೆ

Update: 2019-08-06 21:02 IST
ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು, ಆ.6: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಬಕ್ರೀದ್ ಹಾಗೂ ಗಣೇಶ ಹಬ್ಬದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಸಂಜೆ ನಗರದ ಇನ್ಫೆಂಟ್ರಿ ರಸ್ತೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು, ದೇಶದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸರಣಿ ಹಬ್ಬಗಳ ಹಿನ್ನಲೆ ಸಮಾಜ ವಿರೋಧಿ ಶಕ್ತಿಗಳು, ದುಷ್ಕೃತ್ಯ ಎಸಗುವ ಸಾಧ್ಯತೆ ಇದೆ. ಹಾಗಾಗಿ, ತೀವ್ರ ನಿಗಾ ಇರಿಸುವಂತೆ ಆಯುಕ್ತರು ಹೇಳಿದರು.

ಬಸ್, ರೈಲು, ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಸಾರ್ವಜನಿಕರ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅವಘಡಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ರೌಡಿಗಳು, ಮಾದಕ ವಸ್ತು ಮಾರಾಟದ ಮೇಲೂ ನಿಗಾ ಇಟ್ಟು, ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ಜಮ್ಮು- ಕಾಶ್ಮೀರದಲ್ಲಿ 370, 35ಎ ರದ್ದು ಸಂಬಂಧ, ಕೇಂದ್ರ ಸಚಿವಾಲಯದಿಂದ ರಾಜ್ಯಕ್ಕೆ ಹಾಗೂ ನಗರಕ್ಕೆ ಸೂಕ್ತ ಭದ್ರತೆ ನೀಡುವಂತೆ ಸೂಚನೆ ಬಂದಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ವದಂತಿಗಳ ಬಗ್ಗೆ ಎಚ್ಚರವಿರಲಿ

ಸಾಮಾಜಿಕ ತಾಣಗಳು ಕಿಡಿಗೇಡಿಗಳ ಅಸ್ತ್ರವಾಗಿದೆ. ಸಾರ್ವಜನಿಕರ ನೆಮ್ಮದಿ ಕೆಡಿಸಲು ಸುಳ್ಳು ಸಂಗತಿಗಳನ್ನು ಹರಡಿಸಲು ಕಿಡಿಗೇಡಿಗಳು ವಾಟ್ಸ್ ಆ್ಯಪ್, ಫೇಸ್‌ಬುಕ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಗಾ ಇಡಲು ಪೊಲೀಸರು ಸಜ್ಜಾಗಿದ್ದು, ಸುಳ್ಳು ವದಂತಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News