ದ್ರಾವಿಡ್‌ಗೆ ಬಿಸಿಸಿಐ ನೋಟಿಸ್: ಕ್ರಿಕೆಟನ್ನು ದೇವರೇ ಕಾಪಾಡಬೇಕೆಂದ ಸೌರವ್ ಗಂಗುಲಿ

Update: 2019-08-07 09:07 GMT

ಹೊಸದಿಲ್ಲಿ, ಆ.7: ರಾಹುಲ್ ದ್ರಾವಿಡ್‌ಗೆ ನೋಟಿಸ್ ಕಳುಹಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ)ವಿರುದ್ಧ ಬುಧವಾರ ಮಾಜಿ ನಾಯಕ ಸೌರವ್ ಗಂಗುಲಿ ವಾಗ್ದಾಳಿ ನಡೆಸಿದರು.

ಟ್ವಿಟರ್‌ನ ಮೂಲಕ ಬಿಸಿಸಿಐನ ಈ ಕ್ರಮದ ಬಗ್ಗೆ ಗಂಗುಲಿ ಅಸಮಾಧಾನ ವ್ಯಕ್ತಪಡಿಸಿದರು.

 ‘‘ಹಿತಾಸಕ್ತಿ ಸಂಘರ್ಷ ಎನ್ನುವುದು ಭಾರತೀಯ ಕ್ರಿಕೆಟ್ ಹೊಸ ಫ್ಯಾಶನ್ ಆಗಿದೆ... ಇದು ಸುದ್ದಿಯಲ್ಲಿರಲು ಉತ್ತಮ ಹಾದಿ..ದೇವರೇ ಭಾರತೀಯ ಕ್ರಿಕೆಟನ್ನು ಕಾಪಾಡಬೇಕಾಗಿದೆ...ಬಿಸಿಸಿಐ ಎಥಿಕ್ಸ್ ಅಧಿಕಾರಿಯಿಂದ ದ್ರಾವಿಡ್ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿ ನೋಟಿಸ್ ಪಡೆದಿದ್ದಾರೆ’’ ಎಂದು ಗಂಗುಲಿ ಟ್ವೀಟ್ ಮಾಡಿದ್ದಾರೆ.

 ಲೆಜೆಂಡರಿ ಕ್ರಿಕೆಟಿಗರನ್ನು ಬಿಸಿಸಿಐ ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸರ ವ್ಯಕ್ತಪಡಿಸಿದ ಖ್ಯಾತ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರು ಗಂಗುಲಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದು ನಿಜವೇ? ಇದು ಎಲ್ಲಿ ತನಕ ತಲುಪಲಿದೆ ಎಂದು ಗೊತ್ತಿಲ್ಲ. ಭಾರತೀಯ ಕ್ರಿಕೆಟ್‌ಗೆ ದ್ರಾವಿಡ್‌ರಂತಹ ಉತ್ತಮ ವ್ಯಕ್ತಿ ಸಿಗಲಾರರು. ಇಂತಹ ಲೆಜೆಂಡ್‌ಗಳಿಗೆ ನೋಟಿಸ್ ಕಳುಹಿಸುವುದು ಅವರಿಗೆ ಅವಮಾನಿಸಿದಂತೆ...ಕ್ರಿಕೆಟ್ ಬೆಳವಣಿಗೆಗೆ ಇವರ ಸಲಹೆ ಅಗತ್ಯವಿದೆ. ಹೌದು, ಇದೀಗ ದೇವರೇ ಭಾರತೀಯ ಕ್ರಿಕೆಟನ್ನು ಕಾಪಾಡಬೇಕಾಗಿದೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

   ಭಾರತದ ಮಾಜಿ ನಾಯಕ ದ್ರಾವಿಡ್, ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಕ್ರಿಕೆಟ್ ಚಟುವಟಿಕೆಗಳ ಮುಖ್ಯಸ್ಥರಾಗಿದ್ದು, ಬಿಸಿಸಿಐ ಎಥಿಕ್ಸ್ ಅಧಿಕಾರಿ ಜಸ್ಟಿಸ್(ನಿವೃತ್ತ)ಡಿ.ಕೆ. ಜೈನ್‌ರಿಂದ ಹಿತಾಸಕ್ತಿ ಸಂಘರ್ಷಕ್ಕೆ ನೊಟೀಸ್ ಪಡೆದಿರುವ ಪ್ರಮುಖ ಆಟಗಾರನಾಗಿದ್ದಾರೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ ಸಂಜೀವ್ ಗುಪ್ತಾ ನೀಡಿರುವ ದೂರಿನ ಮೇರೆಗೆ ನೋಟೀಸ್ ನೀಡಲಾಗಿದೆ.

ಗುಪ್ತಾ ಪ್ರಕಾರ, ದ್ರಾವಿಡ್ ಹಲವು ಲಾಭದಾಯಕ ಹುದ್ದೆ ಯಲ್ಲಿರುವ ಮೂಲಕ ಹಿತಾಸಕ್ತಿ ಸಂಘರ್ಷ ಎದುರಿಸುತ್ತಿದ್ದಾರೆ. ಎನ್‌ಸಿಎ ನಿರ್ದೇಶಕರಾಗಿರುವ ಅವರು ಇಂಡಿಯನ್ ಸಿಮೆಂಟ್ ಸಮೂಹದ ಉಪಾಧ್ಯಕ್ಷರಾಗಿದ್ದಾರೆ. ಈ ಸಮೂಹ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲಕತ್ವ ಹೊಂದಿದೆ.

ಕ್ರಿಕೆಟ್ ಸಲಹಾ ಮಂಡಳಿ ಸದಸ್ಯತ್ವ ಹಾಗೂ ಐಪಿಎಲ್ ಫ್ರಾಂಚೈಸಿಗಳಲ್ಲಿ ಮೆಂಟರ್ ಹಾಗೂ ಐಕಾನ್‌ಗಳಾಗಿರುವ ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ವಿರುದ್ಧವೂ ಹಿತಾಸಕ್ತಿ ಸಂಘರ್ಷದ ದೂರನ್ನು ಗುಪ್ತಾ ಸಲ್ಲಿಸಿದ್ದರು.

ಈ ಇಬ್ಬರು ಮಾಜಿ ಆಟಗಾರರು ಗುಪ್ತಾ ಆರೋಪವನ್ನು ನಿರಾಕರಿಸಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ತಾನು ನೀಡುತ್ತಿರುವ ಸೇವೆಗೆ ಒಂದು ಪೈಸೆಯನ್ನು ಪಡೆಯುತ್ತಿಲ್ಲ ಎಂದು ತೆಂಡುಲ್ಕರ್ ಅಫಿಡಾವಿಟ್‌ನ್ನು ಸಲ್ಲಿಸಿದ್ದಾರೆ.

ಮೆಂಟರ್ ಹಾಗೂ ಸಿಎಸಿ ಸದಸ್ಯರಾಗಿರುವುದು ಹಿತಾಸಕ್ತಿ ಸಂಘರ್ಷವಾದರೆ, ಹುದ್ದೆಯನ್ನು ತ್ಯಜಿಸಲು ಸಿದ್ಧ ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದರು.

ಬಂಗಾಳ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಮೆಂಟರ್ ಆಗಿರುವ ಸೌರವ್ ಗಂಗುಲಿಯ ವಿರುದ್ಧವೂ ಭಸ್ವತಿ ಸಂಟುವಾ ಎಂಬುವವರು ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News