ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿ ಕೂಡಲೇ ನಡೆಸಿ: ಮೇಯರ್ ಗಂಗಾಂಬಿಕೆ ತಾಕೀತು

Update: 2019-08-07 12:15 GMT

ಬೆಂಗಳೂರು, ಆ.7: ಜಲಮಂಡಳಿಯು 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವ ಪರಿಣಾಮ ರಸ್ತೆಗಳು ಹಾಳಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಾತ್ಕಾಲಿಕ ರಸ್ತೆ ದುರಸ್ತಿ ಕಾಮಗಾರಿಯನ್ನು ಕೂಡಲೇ ನಡೆಸಬೇಕು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಲಮಂಡಳಿ 110 ಹಳ್ಳಿಗಳಿಗೆ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕೈಗೆತ್ತಿಕೊಂಡಿರುವ ಕಾಮಗಾರಿಯಿಂದ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿ ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳ ಜೊತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರದ 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಜಲಮಂಡಳಿ ಮುಖ್ಯ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ನಡೆಸುತ್ತಿರುವ ಕಾಮಗಾರಿಯಿಂದ ವಾಹನ ಸವಾರರು ಕಳೆದ ಒಂದು ವರ್ಷದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತ್ವರಿತವಾಗಿ ಕಾಮಗಾರಿ ಮುಗಿಸಿ ರಸ್ತೆ ಸರಿಪಡಿಸಲು ನಿಮಗೆ ಆಗುವುದಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಸಮನ್ವಯತೆ ಕಾಪಾಡಿಕೊಂಡು ಕೆಲಸ ಮಾಡಿದರೆ ಮಾತ್ರ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ. ಈ ಪೈಕಿ ಎರಡೂ ಇಲಾಖೆಗಳ ಅಧಿಕಾರಿಗಳು ಇರುವ ಸಮಸ್ಯೆ ಬಗ್ಗೆ ಚರ್ಚಿಸಿ ಕೂಡಲೆ ಸಮಸ್ಯೆ ಬಗೆಹರಿಸಿಕೊಳ್ಳಿ. ಜೊತೆಗೆ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಪಡಿಸಿ, ಕಾಮಗಾರಿ ಮುಗಿದ ಬಳಿಕ ಸಂಪೂರ್ಣ ರಸ್ತೆಗೆ ಡಾಂಬರೀಕರಣ ಅಳವಡಿಸಿ ಎಂದು ತಿಳಿಸಿದರು.

ಮುಖ್ಯ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಡೆಗಳಲ್ಲಿ ಮಣ್ಣು ರಸ್ತೆಯಗಲಕ್ಕೂ ವಿಸ್ತರಿಸಿ ಸಂಪೂರ್ಣ ರಸ್ತೆಗಳು ಹಾಳಾಗಿವೆ. ಮಳೆ ಬಂದರೆ ರಸ್ತೆಯಲ್ಲಾ ಕೊಚ್ಚೆಯಂತಾಗುತ್ತದೆ. ಆದ್ದರಿಂದ ಮಣ್ಣನ್ನು ಒಂದು ಬದಿಗೆ ಹಾಕುವಂತೆ ಜಲಮಂಡಳಿ ಅಧಿಕಾರಿಗೆ ಮೇಯರ್ ಸೂಚನೆ ನೀಡಿದರು.

ಅದಕ್ಕೆ ಜಲಮಂಡಳಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, 110 ಹಳ್ಳಿಗಳಿಗೆ 3,200 ಕಿ.ಮೀನ ಕುಡಿಯುವ ನೀರು ಮತ್ತು ಒಳ ಚರಂಡಿ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 2,200 ಕಿ.ಮೀ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲಾಗಿದೆ. ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಆಡಳಿತ ಮತ್ತು ಜೆಡಿಎಸ್ ಪಕ್ಷದ ನಾಯಕರು, ಹೊರಮಾವು ವಾರ್ಡ್ ಸದಸ್ಯೆ ರಾಧಮ್ಮ ವೆಂಕಟೇಶ್, ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ವೆಂಕಟೇಶ್, ಮುಖ್ಯ ರಸ್ತೆ ಇಂಜಿನಿಯರ್ ಸೋಮಶೇಖರ್, ಮಹದೇವಪುರ ವಲಯದ ಜಂಟಿ ಆಯುಕ್ತರು ಜಗದೀಶ್ ಹಾಗೂ ವಲಯದ ಮುಖ್ಯ ಇಂಜಿನಿಯರ್ ಪರಮೇಶ್ವರ, ಜಲಮಂಡಳಿ ಹೆಚ್ಚುವರಿ ಮುಖ್ಯ ಇಂಜಿನಿಯರ್ ಸೋಮಶೇಖರ್ ಉಪಸ್ಥಿತರಿದ್ದರು.

ಬಿಬಿಎಂಪಿ ಮುಖ್ಯ ರಸ್ತೆಗಳಿಗೆ 34 ಕೋಟಿ ರೂ. ಹಾಗೂ ವಾರ್ಡ್ ರಸ್ತೆಗಳ ದುರಸ್ತಿಗೆ 8 ಕೋಟಿ ರೂ. ಮೀಸಲಿಟ್ಟಿದೆ. ಇದರ ಜೊತೆಗೆ ಜಲಮಂಡಳಿ ಅಗೆದಿರುವ ರಸ್ತೆಗಳ ದುರಸ್ತಿಪಡಿಸಲು 68 ಕೋಟಿ ರೂ.ಗಳಲ್ಲಿ 34 ಕೋಟಿ ರೂ. ಕೊಟ್ಟಿದ್ದೇವೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News