ಪ್ರವಾಹ ಉಂಟಾಗಿದೆ, ಯಡಿಯೂರಪ್ಪ ಎಲ್ಲಿದ್ದೀಯಪ್ಪ: ಎಚ್.ಡಿ.ಕುಮಾರಸ್ವಾಮಿ

Update: 2019-08-07 14:45 GMT

ಬೆಂಗಳೂರು, ಆ.7: ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ನಿಖಿಲ್ ಎಲ್ಲಿದ್ದೀಯಪ್ಪ ಎಂದು ಪ್ರಶ್ನಿಸುತ್ತಿದ್ದವರೆಲ್ಲ ಈಗ ಯಾಕೆ ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಪ್ರಶ್ನಿಸುತ್ತಿಲ್ಲ ಎಂದು ನೆಟ್ಟಿಗರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. 

ಬುಧವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳುತ್ತಿದ್ದ ಆ ವರ್ಗದ ಯುವಕರಲ್ಲಿ ಮನವಿ ಮಾಡುತ್ತೇನೆ, ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಪ್ರಶ್ನೆ ಮಾಡಿ ಎಂದರು.

ರಾಜ್ಯದ ಜನ ನನ್ನ ವಿರುದ್ಧವಿಲ್ಲ. ಆದರೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತಿರುವವರು ನನ್ನ ವಿರುದ್ಧವಿದ್ದಾರೆ. ಇವತ್ತು ಏನಾದರೂ ರಾಜ್ಯದಲ್ಲಿ ನನ್ನ ಸರಕಾರ ಅಧಿಕಾರದಲ್ಲಿ ಇದ್ದಿದ್ದರೆ ಯಾವ ಯಾವ ರೀತಿಯಲ್ಲಿ ನಮ್ಮನ್ನು ಹರಾಜು ಹಾಕುತ್ತಿದ್ದರೋ ಗೊತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಾಲ ಮನ್ನಾ ಮಾಡಲು ನಾನು ತೆಗೆದಿಟ್ಟಿದ್ದ ಹಣದಿಂದಲೇ, ಯಡಿಯೂರಪ್ಪ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ನಾಲ್ಕು ಸಾವಿರ ರೂ.ಗಳನ್ನು ನೀಡಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ಐದು ಬಾರಿ ಕೊಡಗು ಜಿಲ್ಲೆಗೆ ಭೇಟಿ ನೀಡಿದೆ. ರಾಜ್ಯದ ಇತಿಹಾಸದಲ್ಲೇ ತಲಾ 10 ಲಕ್ಷ ರೂ.ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಕಟ್ಟುವ ವಿನೂತನವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದರು. ಅಲ್ಲದೆ, ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡುವವರಿಗೆ ಸರಕಾರದಿಂದ ಪ್ರತಿ ತಿಂಗಳು 10 ಸಾವಿರ ರೂ.ಮನೆ ಬಾಡಿಗೆ ಪಾವತಿಸಲಾಗುತ್ತಿತ್ತು. ಆದರೆ, ನಾವು ಮಾಡಿದ ಕೆಲಸದ ಬಗ್ಗೆ ಯಾರು ಒಂದು ಮಾತು ಹೇಳುವುದಿಲ್ಲ. ಇದರಿಂದ ನನಗೆ ಏನು ನಷ್ಟ ಇಲ್ಲ, ರಾಜ್ಯದ ಜನರಿಗೆ ನಷ್ಟ ಎಂದು ಅವರು ತಿಳಿಸಿದರು.

ಕಳೆದ 14 ನಾನು ಮುಖ್ಯಮಂತ್ರಿಯಾಗಿದ್ದೆ. ನಿಗಮ, ಮಂಡಳಿಗಳಲ್ಲಿ ನಮಗೆ ಸ್ಥಾನಮಾನ ಸಿಗುತ್ತೆ ಎಂದು ಪಕ್ಷದ ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಾನು ಸ್ವತಂತ್ರವಾಗಿ ಕೆಲಸ ಮಾಡುವ ಪರಿಸ್ಥಿತಿ ಇರಲಿಲ್ಲ. ಆದುದರಿಂದ, ಕಾರ್ಯಕರ್ತರ ಹಿತರಕ್ಷಣೆ ಕಾಪಾಡಲು ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಯಾವ ಪಕ್ಷದ ವಿರುದ್ಧ ನಾವು ಚುನಾವಣಾ ಕಣದಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೆವೋ ಅದೇ ಪಕ್ಷದ ಜೊತೆ ಕೈ ಜೋಡಿಸಿ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಅವರು ಹೇಳಿದರು.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಗೆಲುತ್ತಾನೆ ಎಂಬ ವಿಶ್ವಾಸದಲ್ಲಿ ಹಲವಾರು ಮಂದಿ ಬೆಟ್ಟಿಂಗ್ ಕಟ್ಟಿ ತಮ್ಮ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸುಮಾರು 100 ಕೋಟಿ ರೂ.ಗಳಿಗಿಂತ ಹೆಚ್ಚು ಬೆಟ್ಟಿಂಗ್ ಕಟ್ಟಿ ಬೀದಿಪಾಲಾಗಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.

ನಾನು ಅಧಿಕಾರ ಬಿಡುವಾಗ ಕಣ್ಣೀರು ಹಾಕದೆ ಸಂತೋಷದಿಂದ ಹೊರಬಂದಿದ್ದೇನೆ. ಈಗ ನಾನು ಸಂತೋಷದಿಂದ ಇದ್ದೇನೆ. ನನಗೆ ಅಧಿಕಾರ ಮುಖ್ಯ ಅಲ್ಲ, ಪಕ್ಷದ ಕಾರ್ಯಕರ್ತರು ಮುಖ್ಯ. ಯಾರು ನನ್ನಿಂದ ದೂರ ಹೋದರೋ, ಅವರು ಈಗ ಕುಮಾರಣ್ಣನಿಗೆ ಈ ರೀತಿ ಆಗಬಾರದಿತ್ತು, ಆತನಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮಳೆ ನಿಂತ ನಂತರ ಜನರು ಯಾವ ರೀತಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾಳಜಿ ಈ ಸರಕಾರಕ್ಕೆ ಇದೆಯಾ, ಎಲ್ಲ ಜಿಲ್ಲಾಧಿಕಾರಿಗಳಿಗೆ 20 ಕೋಟಿ ರೂ.ಗಳನ್ನು ಇಡಲು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಆ ಹಣವನ್ನು ಇಟ್ಟಿರುವುದು ನಾನು, ಯಡಿಯೂರಪ್ಪ ಅಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News