ನೀರಿನ ನಿರ್ವಹಣೆ ಹಾಗೂ ಸದ್ಬಳಕೆ ಅನಿವಾರ್ಯ: ತುಷಾರ್ ಗಿರಿನಾಥ್

Update: 2019-08-07 16:51 GMT

ಬೆಂಗಳೂರು, ಆ.7: ಕಾವೇರಿ ನೀರಿನ ಒಳ ಹರಿವು ತುಂಬಾ ಕಡಿಮೆಯಿದ್ದು, ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ತಪ್ಪಿಸಲು ನೀರಿನ ನಿರ್ವಹಣೆ ಹಾಗೂ ಸದ್ಭಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಮಲ್ಲೇಶ್ವರಂನ ಸುವರ್ಣ ಭವನದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಆಯೋಜಿಸಿದ್ದ ‘ಜೀವಾಮೃತ ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಳೆ ನೀರನ್ನು ವ್ಯರ್ಥಮಾಡದೇ ಮಳೆ ನೀರು ಕೊಯ್ಲು ಪದ್ದತಿಯನ್ನು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಮೂಲಕ ನೀರಿನ ಮರುಬಳಕೆ ಮಾಡುವ ವಿಧಾನಗಳನ್ನು ಅನುಸರಿಸುತ್ತಿರುವ ವಸತಿ ಸಮುಚ್ಚಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಇತರ ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳನ್ನು ಆಹ್ವಾನಿಸಿ, ತಾವು ಅಳವಡಿಸಿಕೊಂಡಿರುವ ವಿಧಾನಗಳ ಕುರಿತ ಮಾಹಿತಿಯನ್ನು ಎಲ್ಲರೊಂದಿಗೆ ವಿಶ್ಲೇಷಿಸುವ ಸಲುವಾಗಿ ವಿಚಾರ ಸಂಕಿರಣವನ್ನು ಆಯೋಜಿಸಿರುವುದಾಗಿ ಹೇಳಿದರು.

ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂಗ್ರಹಣಾ ರಚನೆಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸುವುದು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಇಂಗು ಗುಂಡಿಗಳನ್ನು ನಿರ್ಮಿಸುವುದನ್ನು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ನೀರನ್ನು ಸದ್ಬಳಕೆ ಮಾಡುವ ವಿಧಾನಗಳನ್ನು ಸಾರ್ವಜನಿಕರು ಅನುಸರಿಸಿ, ನೀರಿನ ಬೇಡಿಕೆಗೆ ಅನುಗುಣವಾಗಿ ನೀರಿನ ಬಳಕೆ ಮಾಡುವುದು ಅಗತ್ಯ ಎಂದು ಸಲಹೆ ನೀಡಿದರು.

ವಿವಿಧ ಕಂಪನಿಗಳು ಹಾಗೂ ವಸತಿ ಸಮುಚ್ಚಯಗಳಲ್ಲಿ ಸ್ಮಾರ್ಟ್ ಮೀಟರಿಂಗ್ ಪದ್ದತಿ, ಮಳೆ ನೀರು ಕೊಯ್ಲು ಪದ್ದತಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಅಳವಡಿಕೆ ಪದ್ದತಿ, ಇಂಗು ಗುಂಡಿಗಳ ನಿರ್ಮಾಣ, ಏರೇಟರ್‌ಗಳನ್ನು ಹೊಂದಿರುವ ಕೊಳಾಯಿಗಳನ್ನು ಅಳವಡಿಸುವುದು, ಜೋಡಿ ಕೊಳವೆ ಪದ್ದತಿ ಹಾಗೂ ಇತರೆ ಪದ್ದತಿಗಳನ್ನು ಅನುಸರಿಸುವ ಮೂಲಕ ನೀರಿನ ಸದ್ಭಳಕೆ ಮಾಡುವ ವಿಧಾನಗಳನ್ನು ಅವರು ವಿವರಿಸಿದರು.

ಜಲ ಮಂಡಲಿಯಿಂದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಈಗ ಒಟ್ಟು 1,400 ದ.ಲ.ಲೀ ನೀರು ಉತ್ಪತ್ತಿಯಾಗುತ್ತಿದೆ. ಅದರಲ್ಲಿ 25 ಸಂಸ್ಕರಣಾ ಘಟಕಗಳಿಂದ 1067 ದ.ಲ.ಲೀ ನೀರನ್ನು ಸಂಸ್ಕರಿಸಲಾಗುತ್ತದೆ.

-ತುಷಾರ್ ಗಿರಿನಾಥ್, ಬೆಂಗಳೂರು ನೀರು ಸರಬರಾಜು ವುತ್ತು ಒಳಚರಂಡಿ ಮಂಡಲಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News