ಗ್ರಾಮೀಣ ಕ್ರೀಡಾಕೂಟದಿಂದ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಪರಿಚಯ: ಹಿರಿಯ ಲೇಖಕಿ ಲಲಿತಾ ನಾಯಕ್

Update: 2019-08-07 16:58 GMT

ಬೆಂಗಳೂರು, ಆ.7: ನಗರಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸುವ ಅಗತ್ಯವಿದೆ ಎಂದು ಹಿರಿಯ ಲೇಖಕಿ ಬಿ.ಟಿ.ಲಲಿತಾ ನಾಯಕ್ ತಿಳಿಸಿದ್ದಾರೆ.

ಬುಧವಾರ ಬೆಂಗಳೂರು ಜಿಲ್ಲಾ ಪಂಚಾಯತ್, ಜನದನಿ ಹಾಗೂ ಕ್ರೀಡಾ ಇಲಾಖೆ ನಗರದ ಸೈಂಟ್ ಮೀರಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅದು ಗ್ರಾಮೀಣ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಹೀಗಾಗಿ ಗ್ರಾಮೀಣ ಕ್ರೀಡೆಗಳ ಬಗ್ಗೆ ನಗರದ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗಿದೆ ಎಂದು ತಿಳಿಸಿದರು.

ಜಾತಿ, ಧರ್ಮವನ್ನು ಮೀರಿದ ಬದುಕು ನಮ್ಮದಾಗಬೇಕು. ಎಲ್ಲರೂ ಅನ್ಯೋನ್ಯತೆಯಿಂದ ಬದುಕುವಂತಾಗಬೇಕು. ಇಂತಹ ಚಿಂತನೆಯನ್ನು ನಮ್ಮಲ್ಲಿ ಮೂಡಿಸಲು ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗುತ್ತವೆ. ಹೀಗೆ ಯಾವುದರಿಂದ ನಮ್ಮ ಸಮಾಜ ಸೌಹಾರ್ದತೆಯಿಂದ ಇರಲು ಸಾಧ್ಯವಾಗುತ್ತದೆಯೊ, ಅದೆಲ್ಲವನ್ನು ನಾವು ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಸೈಂಟ್ ಮೀರಾಸ್ ಕಾಲೇಜಿನ ಪ್ರಾಂಶುಪಾಲ ಇರ್ಫಾನ್ ಖಾನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಟ ಹಾಗೂ ಪಾಠಗಳು ಜೊತೆಯಾಗಿಯೆ ಸಾಗಬೇಕು. ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆಯ ಪಾತ್ರ ಮಹತ್ವದಾಗಿದೆ. ಹೀಗಾಗಿ ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಕ್ರೀಡೋತ್ಸವವನ್ನು ಆಯೋಜಿಸಿದ್ದೇವೆಂದು ತಿಳಿಸಿದರು. ಈ ವೇಳೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಯೇಜಸ್ ಪಾಷಾ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News