ಸಂಗೀತಾ ಫೋಗಾಟ್‌ರನ್ನು ವಿವಾಹವಾಗಲಿದ್ದಾರೆ ಖ್ಯಾತ ಕುಸ್ತಿಪಟು ಬಜರಂಗ್ ಪೂನಿಯಾ?

Update: 2019-08-08 05:23 GMT

ಹೊಸದಿಲ್ಲಿ, ಆ.8:  ಕುಸ್ತಿಪಟುಗಳು ಮಹಿಳಾ ಕುಸ್ತಿಪಟುಗಳನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆರಿಸಿಕೊಳ್ಳುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿ ಬದಲಾಗಿದೆ. ಗೀತಾ ಫೋಗಾಟ್-ಪವನ್ ಕುಮಾರ್, ಸಾಕ್ಷಿ ಮಲಿಕ್-ಸತ್ಯವರ್ತ್ ಕಡಿಯಾನ್ ಹಾಗೂ ವಿನೇಶ್ ಪೋಗಾಟ್-ಸೋಮ್‌ವೀರ್ ರಥಿ ಈ ಸಾಲಿಗೆ ವಿಶ್ವದ ನಂ.1 ಕುಸ್ತಿಪಟು ಬಜರಂಗ್ ಪೂನಿಯಾ ಹಾಗೂ ಸಂಗೀತಾ ಫೋಗಾಟ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.

 65 ಕೆಜಿ ವಿಭಾಗದಲ್ಲಿ ವಿಶ್ವದ ನಂ.1 ಕುಸ್ತಿಪಟುವಾಗಿರುವ ಬಜರಂಗ್ ಸದ್ಯ ಭಾರತೀಯ ಕುಸ್ತಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಮಹಿಳಾ ಕುಸ್ತಿಯಲ್ಲಿ ಹೊಸ ಸಂಚಲನಮೂಡಿಸಿರುವ ಫೋಗಾಟ್ ಸಹೋದರಿಯರ ಪೈಕಿ ಕೊನೆಯವರಾದ ಸಂಗೀತಾರನ್ನು ವರಿಸಲು ಬಜರಂಗ್ ನಿರ್ಧರಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಜರಂಗ್ ಪದಕ ಗೆಲ್ಲಬಲ್ಲ ಫೇವರಿಟ್ ಕುಸ್ತಿಪಟು ಆಗಿದ್ದಾರೆ. 59 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈ ಹಿಂದೆ ಪದಕ ಜಯಿಸಿದ್ದ ಸಂಗೀತಾ ಹಾಗೂ ಬಜರಂಗ್ ತಮ್ಮ ನಿರ್ಧಾರವನ್ನು ತಮ್ಮ ಕುಟುಂಬ ಸದಸ್ಯರುಗಳಿಗೆ ತಿಳಿಸಿದ್ದಾರೆ. ಟೋಕಿಯೊ ಗೇಮ್ಸ್ ಬಳಿಕ ಇಬ್ಬರು ವಿವಾಹವಾಗುವ ಸಾಧ್ಯತೆಯಿದೆ.

ಇದೀಗ ಬಜರಂಗ್ ಕೋಚ್ ಶಾಕೊ ಬೆಂಟಿನಿಡಿಸ್‌ರೊಂದಿಗೆ ಒಲಿಂಪಿಕ್ಸ್‌ಗಾಗಿ ಕಠಿಣ ತರಬೇತಿಯಲ್ಲಿ ನಿರತರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಸಂಗೀತಾ ರಾಷ್ಟ್ರೀಯ ಶಿಬಿರದಲ್ಲಿ ಸಂಪೂರ್ಣ ಫಿಟ್ನೆಸ್ ಪಡೆಯಲು ಕಾರ್ಯನಿರತರಾಗಿದ್ದಾರೆ.

ಈ ಬೆಳವಣಿಗೆಯನ್ನು ದೃಢಪಡಿಸಿರುವ ಫೋಗಾಟ್ ಸಹೋದರಿಯರ ತಂದೆ ಹಾಗೂ ತರಬೇತಿದಾರನಾಗಿರುವ ಮಹಾವೀರ್ ಸಿಂಗ್, ‘‘ಈ ಜೋಡಿ ಕಳೆದ 3 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಎರಡೂ ಕುಟುಂಬಗಳ ಮಧ್ಯೆ ಮಾತುಕತೆ ನಡೆಯುತ್ತಿದೆ. ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News