ದೇಶ ಅಪಾಯದ ಸ್ಥಿತಿಯಲ್ಲಿದ್ದರೂ ಬುದ್ಧಿಜೀವಿಗಳು ಮೌನವಾಗಿದ್ದಾರೆ: ಸುಗತ ಶ್ರೀನಿವಾಸರಾಜು

Update: 2019-08-08 16:55 GMT

ಬೆಂಗಳೂರು, ಆ.8: ನಾವಿಂದು ದೇಶದ ಚರಿತ್ರೆಯನ್ನು ಬದಲಿಸಬಹುದಾದ ಭೀಕರ ಸ್ಥಿತಿಯಲ್ಲಿದ್ದರೂ, ಕನ್ನಡದ ಬುದ್ಧಿಜೀವಿಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡವರು ಮೌನವಾಗಿದ್ದಾರೆ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅಭಿಪ್ರಾಯಪಟ್ಟಿದ್ದಾರೆ. 

ಗುರುವಾರ ನಗರದ ಕಸಾಪದಲ್ಲಿ ದೇಸಿ ಪುಸ್ತಕದ ವತಿಯಿಂದ ಆಯೋಜಿಸಿದ್ದ ವಿ.ಎಂ.ಮಂಜುನಾಥ್ ಹಾಗೂ ಡಾ.ಕೆ.ಎಲ್.ದಿವ್ಯ ಅವರು ಸಂಪಾದಿಸಿರುವ ಸಿ.ಎಸ್.ದ್ವಾರಕಾನಾಥ್ ಅವರ ‘ಗೋಡೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರ ನಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಲು ಮುಂದಾಗುತ್ತಿದೆ. ಇಂತಹ ಭೀಕರ ಸಂದರ್ಭದಲ್ಲಿ ಕನ್ನಡ ಪತ್ರಿಕೆಗಳು ಏನೂ ಬರೆಯುತ್ತಿಲ್ಲ. ದೃಶ್ಯ ಮಾಧ್ಯಮಗಳಂತೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದ ಅವರು, ಬುದ್ಧಿಜೀವಿಗಳು ಸಾಮಾಜಿಕ ಪ್ರತಿರೋಧವನ್ನು ತೋರುವಲ್ಲಿ ನಿರಾಸಕ್ತಿ ತೋರಿರುವುದು ಸರಿಯಲ್ಲ ಎಂದು ನುಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬಿದ್ದು, ಬಿಜೆಪಿ ಸರಕಾರ ರಚನೆಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅಕಾಡೆಮಿಗಳ ಎಲ್ಲ ಸ್ಥಾನಗಳು ಖಾಲಿಯಾಗಿವೆ. ಬುದ್ಧಿಜೀವಿಗಳೆಲ್ಲರೂ ಇದರ ಲಾಬಿ ಮಾಡಲು ತಯಾರಿ ನಡೆಸುತ್ತಿದ್ದಾರೆಯೇ ಎಂದು ಸುಗತ ಲೇವಡಿ ಮಾಡಿದರು.

ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಚರಿತ್ರೆಯನ್ನೇ ತಿಳಿಯದ ಮಾಧ್ಯಮಗಳಿಂದು, ಕಾಶ್ಮೀರ ಭಾರತದೊಂದಿಗೆ ಉಳಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಶೇಖ್ ಅಬ್ದುಲ್ಲಾರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಇಲ್ಲದೇ ಇದ್ದಿದ್ದರೆ ಕಾಶ್ಮೀರ ಇಷ್ಟರಲ್ಲಿ ಪಾಕಿಸ್ತಾನಕ್ಕೆ ಸೇರಿಬಿಡುತ್ತಿತ್ತು. ಅವರು ಕಾಶ್ಮೀರದ ಮುಸ್ಲಿಮ್‌ರನ್ನು ಭಾರತದ ಕಡೆಗೆ ನೋಡುವಂತೆ ಪ್ರೇರೇಪಿಸಿದ ವ್ಯಕ್ತಿಯಾಗಿದ್ದಾರೆ ಎಂದರು.

ಅಂದಿನ ಪ್ರಧಾನಿಯಾಗಿದ್ದ ನೆಹರು ಜತೆಗೆ ಅವರು ಉತ್ತಮ ಸಂಬಂಧ ಹೊಂದಿದ್ದರು. ಅವರ ಸಂಬಂಧ ಮುರಿದು ಬಿದ್ದ ಬಳಿಕ ಶೇಖ್ ಅಬ್ದುಲ್ಲಾ 10 ವರ್ಷಗಳ ಕಾಲ ಜೈಲಿನಲ್ಲಿದ್ದರು. ಬಿಡುಗಡೆಯಾದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಭಾರತದಲ್ಲಿ ಎಷ್ಟೇ ಹಿಂಸೆ, ಕಿರುಕುಳ ನೀಡಿದರೂ ನಾನಲ್ಲಿಯೇ ಇರುವೆ. ಅದೊಂದು ಜಾತ್ಯತೀತ, ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ ಎಂದಿದ್ದರು ಎಂದು ಸುಗತ ಹೇಳಿದರು.

ಇಂದಿನ ಅನೇಕರು ಲಂಕೇಶ್‌ರನ್ನು ಮರೆತುಬಿಟ್ಟಿದ್ದಾರೆ. ಇಂದಿನ ಯುವಜನರಿಗೆ ಲಂಕೇಶ್‌ರನ್ನು ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ ಎಂದ ಅವರು, ಲಂಕೇಶ್ ಕೇವಲ ಕನ್ನಡವಲ್ಲದೆ ಪ್ರೆಂಚ್ ಹಾಗೂ ರಷ್ಯಾದ ರಾಜಕೀಯದ ಬಗ್ಗೆ ನಮಗೆ ಪರಿಚಯಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. 20 ನೆ ಶತಮಾನದ ಪ್ರಮುಖ ಸಾಹಿತಿಗಳಲ್ಲಿ ಯಾರಿಲ್ಲದಿದ್ದರೂ ಲಂಕೇಶ್ ಪ್ರಮುಖ ಸ್ಥಾನ ಪಡೆಯುತ್ತಾರೆ ಎಂದು ಅವರು ಹೇಳಿದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸುಧೀರ್ಘವಾದ ಬರಹಗಳನ್ನು ಓದುವುದು ತೀರಾ ಕಡಿಮೆ. ಇಂದಿನ ಸಂದರ್ಭಕ್ಕೆ ಅಗತ್ಯವಾದ ರೀತಿಯಲ್ಲಿ ಅತ್ಯಂತ ಚುಟುಕಾದ ಕೃತಿ ಇದಾಗಿದೆ. ಸಾಮಾಜಿಕ ನ್ಯಾಯವನ್ನು ಚರ್ಚಿಸುತ್ತಾ ಜಾತಿ ಎಂಬ ವಿಷದ ಕುರಿತು ಆಳವಾದ ಅಧ್ಯಯನ ನಡೆಸಿದ ವಿಶ್ಲೇಷಣಾ ಕೃತಿಯಾಗಿದೆ ಎಂದು ತಿಳಿಸಿದರು.

ಕೃತಿಯಲ್ಲಿ ತಾವೇ ಸ್ವತಃ ಜಾತಿಯ ಸರೋವರಕ್ಕಿಳಿದು ಈಜಾಡುತ್ತಾ, ವೈಯಕ್ತಿಕವಾಗಿ ಆದ ಅನುಭವ, ಅನುಭವಿಸಿದ ಸಂಕಷ್ಟ ಸೇರಿದಂತೆ ಅನೇಕ ವಿಚಾರಗಳನ್ನು ಮಂಡಿಸಿದ್ದಾರೆ. ಇಂದು ಜಾತಿಯಿಲ್ಲದೆ ಯಾವುದೇ ಪ್ರಕ್ರಿಯೆ ಸಾಧ್ಯವಿಲ್ಲ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಹೆಸರು ತಿಳಿಯದ ಜಾತಿಗಳನ್ನು ಹುಡುಕಿ ಅದನ್ನು ಇಲ್ಲಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೋರಾಟಗಾರ ಭಾಸ್ಕರ್ ಪ್ರಸಾದ್, ಲೇಖಕ ಹಾಗೂ ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ವಿ.ಎಂ.ಮಂಜುನಾಥ, ಡಾ.ಕೆ.ಎಲ್.ದಿವ್ಯ ಉಪಸ್ಥಿತರಿದ್ದರು.

ಚರಿತ್ರೆಯ ಪರಿಜ್ಞಾನವೇ ಇಲ್ಲದ ಮಾಧ್ಯಮಗಳಿಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ಅನ್ನು ರದ್ದು ಮಾಡಿದ್ದಕ್ಕೆ ಸಂಬಂಧಿಸಿದಂತೆ ಶೇಖ್ ಅಬ್ದುಲ್ಲಾರನ್ನು ತೇಜೋವಧೆ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಮೊದಲಿಗೆ ಉಳುವವನಿಗೆ ಭೂಮಿ ಕಾಯ್ದೆ ತಂದು 22 ಲಕ್ಷ ಎಕರೆ ಪ್ರದೇಶ ಭೂಮಿಯನ್ನು ಹಂಚಿಕೆ ಮಾಡಿದವರು ಶೇಖ್ ಅಬ್ದುಲ್ಲಾ.

-ಸುಗತ ಶ್ರೀನಿವಾಸ ರಾಜು, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News