ಶೀಘ್ರವೇ ಸಚಿವ ಸಂಪುಟ ರಚನೆಯಾಗಲಿ: ಸಿದ್ದರಾಮಯ್ಯ

Update: 2019-08-11 12:54 GMT

ಬೆಂಗಳೂರು, ಆ.11: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ಸಂಪುಟ ವಿಸ್ತರಣೆ ಮಾಡಿ, 20 ಮಂದಿಗೆ ಸಚಿವ ಸ್ಥಾನವನ್ನು ಕೊಟ್ಟು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸುವುದರಿಂದ ಪರಿಹಾರ ಕಾರ್ಯಕ್ರಮಗಳು ಚುರುಕಾಗುತ್ತವೆ. ಸದ್ಯ ಸಚಿವರಿಲ್ಲದ ಕಾರಣ ಪರಿಹಾರ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪುನರ್ ವಸತಿ ಕೇಂದ್ರಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಸರಕಾರ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ರಕ್ಷಣೆ ಮಾಡಿ ಮೇವು ಒದಗಿಸುವ ಕೆಲಸವೂ ತ್ವರಿತಗತಿಯಲ್ಲಿ ಆಗಬೇಕು. ಸಂತ್ರಸ್ತತರಿಗೆ ಮರು ವಸತಿ ಸೌಕರ್ಯದ ಜೊತೆಗೆ ಆಹಾರ, ಔಷಧ ಸಾಮಗ್ರಿಗಳನ್ನು ವಿತರಿಸಬೇಕೆಂದು ಅವರು ಹೇಳಿದರು.

ಪರಿಹಾರ ಕಾರ್ಯಕ್ಕೆ ಸೇನೆಯನ್ನೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಯೋಜನೆ ಮಾಡುವುದು ಸೂಕ್ತ. ಕೇಂದ್ರ ಸರಕಾರ ಈಗಲಾದರೂ ಮಲತಾಯಿ ಧೋರಣೆ ಬಿಟ್ಟು ರಾಜ್ಯ ಸರಕಾರದ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುವುದು ಒಳ್ಳೆಯದು. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೇನೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News