ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-08-11 15:51 GMT

ಬೆಂಗಳೂರು, ಜು.11: ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ಸಿಗಬೇಕು ಎನ್ನುವುದೇ ನಮ್ಮ ಸರಕಾರದ ಆಶಯವಾಗಿದ್ದು, ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಸಿಗಬೇಕು ಎಂದು ಕನ್ನಡಿಗರು ನಡೆಸುತ್ತಿರುವ ಅಭಿಯಾನಕ್ಕೆ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಬಿಎಸ್‌ವೈ ಅವರು, ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುವ ನಿಟ್ಟಿನಲ್ಲಿ ಸರಕಾರ ಕೂಡ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಹೇಳಿದರು.

ಬೆಂಗಳೂರಿನ ಕೆಲವು ಖಾಸಗಿ ಕಂಪೆನಿಗಳು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಅರ್ಜಿಯಲ್ಲಿ ಉತ್ತರ ಭಾರತದ ಅಭ್ಯರ್ಥಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿರುವುದನ್ನು ವಿರೋಧಿಸಿರುವ ನೆಟ್ಟಿಗರು ಕರ್ನಾಟಕ ಜಾಬ್ಸ್ ಫಾರ್ ಕನ್ನಡಿಗಾಸ್ ಹ್ಯಾಸ್ ಟ್ಯಗ್ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ದಕ್ಷಿಣ ಭಾರತದ ಅಭ್ಯರ್ಥಿಗಳನ್ನು ಕಡೆಗಣಿಸಬೇಕು ಎಂಬಂತಹ ಉಲ್ಲೇಖಗಳು ಅರ್ಜಿಯಲ್ಲಿ ಲಭ್ಯವಿರುವ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೇಮಕಾತಿ ವೇಳೆ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಬಲ್ಲವರಿಗೆ ಹೆಚ್ಚಿನ ಆದ್ಯತೆ ಎಂಬುದನ್ನು ಖಂಡಿಸಿರುವ ಕನ್ನಡಿಗರು ರಾಜ್ಯದಲ್ಲಿಯೇ ಕನ್ನಡಕ್ಕೆ ಇಂತಹ ದುರ್ಗತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.90ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು. ಈಗಾಗಲೇ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಮಸೂದೆಗೆ ಆಂಧ್ರಪ್ರದೇಶದ ವಿಧಾನಸಭೆ ಅಂಗೀಕರಿಸಿದ ಬಗ್ಗೆ ಉಲ್ಲೇಖಿಸಿರುವ ಹೋರಾಟಗಾರರು, ರಾಜ್ಯದಲ್ಲೂ ಇಂತಹ ಕಾನೂನನ್ನು ಜಾರಿಗೆ ತರುವ ಮೂಲಕ ಸ್ಥಳೀಯರ ಹಿತ ರಕ್ಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸರಕಾರದ ಮೇಲೆ ಒತ್ತಡ ಹೇರಲು ಆ.13 ಮತ್ತು 14ಕ್ಕೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಾಗೂ ಎಲ್ಲ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಬೇಕೆಂದು ಸಾಮಾಜಿಕ ಜಾಲ ತಾಣದ ಮೂಲಕ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News