ಬೇಕಾಬಿಟ್ಟಿ ನಾಗರಿಕ ಪೌರತ್ವ ನೋಟಿಸ್‌ಗಳಿಂದಾಗಿ ಅಸ್ಸಾಂ ಅಯೋಮಯ

Update: 2019-08-14 10:12 GMT

ಅಸ್ಸಾಮಿನ ಕಾಮರೂಪದ ಸೊಂತೊಲಿ ಎಂಬ ಹಳ್ಳಿಯ 50ರ ಹರೆಯದ ಓರ್ವ ರೈತ ತಫೀಝುದ್ದೀನ್‌ಗೆ ಆಗಸ್ಟ್ 4ರಂದು ರಾಷ್ಟ್ರೀಯ ನಾಗರಿಕ ಪೌರತ್ವ ನೋಂದಣಿ ಅಧಿಕಾರಿಗಳಿಂದ ಒಂದು ನೋಟಿಸ್ ಬಂತು. ಆತನ ಹಳ್ಳಿಯಿಂದ ಸುಮಾರು 366 ಕಿಲೋಮೀಟರ್ ದೂರದಲ್ಲಿರುವ ಎನ್‌ಆರ್‌ಸಿ ಸೇವಾ ಕೇಂದ್ರ (ಎನ್‌ಎಸ್‌ಕೆ)ವೊಂದರ ಅಧಿಕಾರಿಗಳ ಮುಂದೆ 24 ಗಂಟೆಗಳೊಳಗಾಗಿ ಆತ ಮತ್ತು ಆತನ ಕುಟುಂಬದವರು ಹಾಜರಾಗತಕ್ಕದ್ದೆಂದು ಆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆತನ ಹಳ್ಳಿ ಇರುವ ಜಿಲ್ಲೆಯಲ್ಲೇ ಒಂದು ಎನ್‌ಎಸ್‌ಕೆ ಇದೆಯಾದರೂ ಆತನಿಗೆ ಬಂದ ನೋಟಿಸ್‌ನಲ್ಲಿ 366 ಕಿಲೋಮೀಟರ್ ದೂರದ ಕೇಂದ್ರಕ್ಕೆ ಬರುವಂತೆ ತಿಳಿಸಲಾಗಿತ್ತು.

ಕಾಮರೂಪದ ಸರಕಾರಿ ಶಾಲೆಯೊಂದರಲ್ಲಿ ತಾತ್ಕಾಲಿಕ ಶಿಕ್ಷಕನಾಗಿರುವ ನಿಜಾಮುಲ್ ಹಕ್ ಚೌಧುರಿಗೆ ಕೂಡ ಅದೇ ದಿನ ಅಂತಹದೇ ಒಂದು ನೋಟಿಸ್ ಬಂತು. ಆತನ ಹಳ್ಳಿಯಿಂದ 390 ಕಿಲೋಮೀಟರ್ ದೂರದಲ್ಲಿರುವ ಜೊಹ್ರಾತ್ ಜಿಲ್ಲೆಯ ಟಿಟಬೊರ್‌ನಲ್ಲಿರುವ ಒಂದು ಎನ್‌ಎಸ್‌ಕೆ ಕೇಂದ್ರದಲ್ಲಿ 24 ಗಂಟೆಗಳೊಳಗಾಗಿ ಹಾಜರಾಗುವಂತೆ ಆತನಿಗೆ ಹೇಳಲಾಗಿತ್ತು. ತಫೀಝುದ್ದೀನ್ ಮತ್ತು ಚೌಧುರಿಯವರ ಪಾಡು ಅಸ್ಸಾಮಿನಲ್ಲಿ ಎನ್‌ಆರ್‌ಸಿ ಅಧಿಕಾರಿಗಳಿಂದಾಗಿ ಜನರು ಅನುಭವಿಸುತ್ತಿರುವ ಗೋಳು ಹಾಗೂ ಯಾತನೆಯನ್ನು ಹೇಳುತ್ತದೆ. ಎನ್‌ಆರ್‌ಸಿ ಅಧಿಕಾರಿಗಳು ಕಳುಹಿಸಿದ ಬೇಕಾಬಿಟ್ಟಿ ಅತಾರ್ಕಿಕ ನೋಟಿಸ್‌ಗಳಿಂದಾಗಿ ಅವರು ಇನ್ನಿಲ್ಲದ ಪಾಡು ಪಡಬೇಕಾಯಿತು.

ಎನ್‌ಆರ್‌ಸಿಯ ಎರಡೂ ಕರಡುಗಳಲ್ಲಿ ಅವರ ಹೆಸರುಗಳಿದ್ದಾಗ್ಯೂ ಅವರು ದಾಖಲೆಗಳ ಪರಿಶೀಲನೆಗಾಗಿ ಅವರಿಗೆ ಪುನಃ ಎನ್‌ಆರ್‌ಸಿ ಕೇಂದ್ರಕ್ಕೆ ಬರುವಂತೆ ಹೇಳಲಾಯಿತು. ಅಲ್ಲದೆ ನೂರಾರು ಕಿಲೋಮೀಟರ್‌ಗಳ ದೂರದಲ್ಲಿರುವ ಕೇಂದ್ರಕ್ಕೆ ಅವರ ಕುಟುಂಬದ ಸದಸ್ಯರನ್ನು ಒಟ್ಟುಗೂಡಿಸಿ ಬರುವಂತೆ ಅವರಿಗೆ ಕೇವಲ 24 ಗಂಟೆಗಳ ಸಮಯ ನೀಡಲಾಯಿತು. ತನ್ನ ಇಬ್ಬರು ಮಕ್ಕಳಲ್ಲಿ ಬೆಂಗಳೂರಿನಲ್ಲಿದ್ದ ತನ್ನ ಕಿರಿಯ ಪುತ್ರ ನಾಸಿರುದ್ದೀನ್‌ನನ್ನು ಮನೆಗೆ ಕರೆತರಲು ತಫೀಝುದ್ದೀನ್ 13,000 ರೂಪಾಯಿ ಸಾಲ ಮಾಡಬೇಕಾಯಿತು. ಆದರೆ ವಿಮಾನ ಟಿಕೆಟ್‌ಗಳು ಭಾರೀ ದುಬಾರಿಯಾದ್ದರಿಂದ ಆತ ರೈಲಿನಲ್ಲಿ ಊರಿಗೆ ಬರಬೇಕಾಯಿತು. ಆತ ಮನೆ ತಲುಪುವಾಗ ಎನ್‌ಎಸ್‌ಕೆ ವಿಚಾರಣೆ ಮುಗಿದು ಎರಡು ದಿನ ಕಳೆದಿತ್ತು. ತಫೀಝುದ್ದೀನ್ ಮಹಿಳೆಯೊಬ್ಬರಿಂದ 13,000 ರೂಪಾಯಿ ಸಾಲ ಪಡೆದು ನಾಸಿರುದ್ದೀನ್‌ಗೆ 5,000 ಕಳುಹಿಸಿದರು. ಆವತ್ತು ಬೆಂಗಳೂರು-ಗುವಾಹಟಿ ವಿಮಾನ ಪ್ರಯಾಣ ದರ ರೂಪಾಯಿ 16,000 ಇತ್ತು.

ಅಷ್ಟೊಂದು ಹಣ ಇಲ್ಲದ್ದರಿಂದ ನಾಸಿರ್ ರೈಲಿನಲ್ಲಿ ಪ್ರಯಾಣಿಸಿ ಮನೆ ತಲುಪುವಾಗ ವಿಚಾರಣೆ ಮುಗಿದು ಎರಡು ದಿನಗಳು ಕಳೆದು ಹೋಗಿತ್ತು. ತಫೀಝುದ್ದೀನ್ ಕುಟುಂಬದ ಸದಸ್ಯರ ಎಲ್ಲ ದಾಖಲೆಗಳನ್ನು ಸಲ್ಲಿಸಲಾಯಿತಾದರೂ ಎನ್‌ಆರ್‌ಸಿಯಲ್ಲಿ ನಾಸಿರುದ್ದೀನ್ ಹೆಸರು ಸೇರ್ಪಡೆಯಾಗುತ್ತದೆಯೋ ಇಲ್ಲವೋ ಎಂದು ಅವರ ಕುಟುಂಬಕ್ಕೆ ತಿಳಿದಿಲ್ಲ. ಎನ್‌ಆರ್‌ಸಿ ಅಧಿಕಾರಿಗಳು ನಮ್ಮನ್ನು ಅನುಮಾನದಿಂದ ಕಂಡರು ಎಂದಿದ್ದಾರೆ ತಫೀಝುದ್ದೀನ್: ‘‘ನಮಗೆ ನೋಟಿಸ್ ಬಂದ ದಿನ ಸೊಂತೊಲಿಯಲ್ಲಿ ಸಂಪೂರ್ಣ ಗೊಂದಲ ಮತ್ತು ದಿಗಿಲು. ನಮ್ಮ ಹಳ್ಳಿಯಲ್ಲಿ ಕೆಲವರನ್ನು ಹೊರತುಪಡಿಸಿ ಇತರ ಎಲ್ಲರಿಗೂ ನೋಟಿಸ್‌ಗಳು ಬಂದಿದ್ದವು. ಜನರು ಅಳುತ್ತಿದ್ದರು.’’ ತಮ್ಮ ಹಳ್ಳಿಯಿಂದ ನೂರಾರು ಕಿಲೋಮೀಟರ್‌ಗಳ ದೂರದಲ್ಲಿರುವ ಎನ್‌ಎಸ್‌ಕೆಗಳಿಗೆ ತೆರಳಲು ಮಾಡಬೇಕಾದ ಪ್ರಯಾಣಕ್ಕಾಗಿ ಹಣ ಹೊಂದಿಸಲು ಹಲವಾರು ಕುಟುಂಬಗಳು ತಮ್ಮ ಆಸ್ತಿಯನ್ನು ಅಡವಿಟ್ಟವು ಅಥವಾ ಅವುಗಳು ತಮ್ಮ ಜಾನುವಾರು ಮತ್ತು ಚಿನ್ನಾಭರಣಗಳನ್ನು ಮಾರಬೇಕಾಯಿತು.

ಆ ಕುಟುಂಬಗಳ ಸದಸ್ಯರು ಬಾಡಿಗೆಗೆ ಪಡೆದ ಬಸ್ಸಿನಲ್ಲಿ 41 ಮಂದಿ ಇದ್ದರು ಮತ್ತು ಎರಡು ದಿನಗಳ ಕಾಲ ಅವರಿಗೆ ಆಹಾರ ಸಿಗಲಿಲ್ಲ. ನಿಜಾಮುಲ್ ಹಕ್ ಚೌಧರಿ ಮತ್ತು ಆತನ ಕುಟುಂಬದವರು ಕೂಡ ನಾನಾ ರೀತಿಯ ಪಾಡು ಪಡಬೇಕಾಯಿತು. ಭಾರೀ ಕಷ್ಟಪಟ್ಟು ಅವರಿಗೆ ಬಾಡಿಗೆಗೆ ಒಂದು ಬಸ್ಸು ಸಿಕ್ಕಿತು. ಬಾಡಿಗೆ 40,000 ರೂಪಾಯಿ ತೆರಬೇಕಾಯಿತು. ನಾಲ್ಕು ಕುಟುಂಬಗಳ 40 ಸದಸ್ಯರು ಬಾಡಿಗೆ ಮೊತ್ತವನ್ನು ಹಂಚಿಕೊಂಡು ಪ್ರಯಾಣ ಮಾಡಿದರು. ‘‘ನಾವು ಹಳ್ಳಿ ಬಿಡುವಾಗ ಹಳ್ಳಿಯ ಜನ ಕಂಗಾಲಾಗಿ ವಾಹನಗಳಿಗಾಗಿ ಪರದಾಡುತ್ತಿದ್ದರು’’ ಎಂದಿದ್ದಾರೆ ಚೌಧುರಿ. ಚೌಧುರಿಗೆ ಎದುರಾದ ಇನ್ನೊಂದು ಸಮಸ್ಯೆ ಎಂದರೆ ಆತನ ಮಲತಾಯಿ ತಹಿರುನ್ನಿಸಾರನ್ನು ಅಸ್ಸಾಮಿನ ಇನ್ನೊಂದು ಕಡೆ ಇರುವ ಎನ್‌ಎಸ್‌ಕೆಗೆ ಕರೆಯಲಾಗಿತ್ತು. ಎರಡು ಬೇರೆ ಬೇರೆ ಸ್ಥಳಗಳಲ್ಲಿ ಎರಡೂ ವಿಚಾರಣೆಗಳು ಒಂದೇ ದಿನ ನಡೆಯಲಿದ್ದವು. ಆಕೆ ನಿರಕ್ಷರಿ ಮತ್ತು ಆಕೆಗೆ ಅಸ್ಸಾಮಿ ಭಾಷೆ ಬರುವುದಿಲ್ಲ. ಅವಳ ಜತೆ ಹೋಗಬಹುದಾಗಿದ್ದ ಅವಳ ಸಹೋದರರನ್ನು ಬೇರೆಯೇ ಒಂದು ಎನ್‌ಎಸ್‌ಕೆಗೆ ಕರೆಯಲಾಗಿತ್ತು. ಆದ್ದರಿಂದ ಅವರೊಬ್ಬರೇ ಹೋಗಬೇಕಾಯಿತು. ಆ ಮೊದಲು ಪ್ರಕಟವಾಗಿದ್ದ ಎರಡು ಯಾದಿಗಳಲ್ಲಿ ಅವರ ಹೆಸರುಗಳಿವೆ. ‘‘ನಮ್ಮನ್ನು ಯಾಕಾಗಿ ಹೀಗೆ ಸತಾಯಿಸುತ್ತಾರೆ’’ ಎಂದು ಪ್ರಶ್ನಿಸುತ್ತಾರೆ ಚೌಧುರಿ.

ಜನರಿಗೆ ಅನುಕೂಲಕರವಾದ ಸ್ಥಳದಲ್ಲಿರುವ ಎನ್‌ಎಸ್‌ಕೆಗಳಲ್ಲಿ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆಜ್ಞೆ ಮಾಡಿತ್ತು. ಆದರೂ ಜನರನ್ನು ತಮ್ಮ ಹಳ್ಳಿಗಳಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಕೇಂದ್ರಗಳಿಗೆ ಬರುವಂತೆ ಹೇಳಿ ಪೀಡಿಸಲಾಗುತ್ತಿದೆ.
ಅಸ್ಸಾಮಿನಾದ್ಯಂತ ಸಾವಿರಾರು ಮುಸ್ಲಿಂ ಕುಟುಂಬಗಳಿಗೆ ಇಂತಹ ನೋಟಿಸ್‌ಗಳು ಬರುತ್ತಿವೆ. ತುಂಬಾ ದೂರದಲ್ಲಿರುವ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನಗಳೊಳಗಾಗಿ ಹಾಜರಾಗಬೇಕೆಂದು ಆದೇಶಿಸಲಾಗುತ್ತದೆ. ‘‘ಸಮೀಪದಲ್ಲಿ ಎನ್‌ಎಸ್‌ಕೆಗಳಿರುವಾಗ 400 ಕಿಲೋಮೀಟರ್‌ಗಳ ದೂರದ ಕೇಂದ್ರಗಳಲ್ಲಿ ಹಾಜರಾಗುವಂತೆ ಯಾಕೆ ಜನರನ್ನು ಸತಾಯಿಸಲಾಗುತ್ತಿದೆ?’’ ಎಂದು ಕೇಳುತ್ತಾರೆ ಗುವಾಹಟಿ ಹೈಕೋರ್ಟ್‌ನ ಹಿರಿಯ ವಕೀಲ ಹಫೀಝ್ ರಶೀದ್ ಅಹ್ಮದ್ ಚೌಧರಿ. ಇದೇ ಕಾರಣಕ್ಕಾಗಿ ಆರ್‌ಟಿಐ ಕಾರ್ಯಕರ್ತ ಅಖಿಲ್ ಗೊಗೊಯಿ ಕೂಡ ಎನ್‌ಆರ್‌ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ: ‘‘ಹಲವಾರು ಬಾರಿ ಪರೀಕ್ಷಿಸಿದ ಬಳಿಕ ಈ ಜನರಲ್ಲಿ ಹೆಚ್ಚಿನ ಜನರ ಹೆಸರುಗಳನ್ನು ಎನ್‌ಆರ್‌ಸಿ ಯಾದಿಯಲ್ಲಿ ಸೇರಿಸಲಾಗಿದೆ ಅಂದ ಮೇಲೆ ಅವರ ದಾಖಲೆಗಳ ಮರುಪರಿಶೀಲನೆ ಅಗತ್ಯ ಏನಿದೆ? ಎಂದು ಗೊಗೊಯಿ ಪ್ರಶ್ನಿಸಿದ್ದಾರೆ.

(ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್) 

Similar News