‘ನಮಸ್ತೆ ’ಎನ್ನುವ ಮೂಲಕ ಪ್ರಧಾನಿ ಮೋದಿ,ಭಾರತಕ್ಕೆ ಇಸ್ರೇಲ್ ಪ್ರಧಾನಿಯ ಸ್ವಾತಂತ್ರ ದಿನದ ಶುಭಾಶಯ

Update: 2019-08-15 13:38 GMT

ಹೊಸದಿಲ್ಲಿ,ಆ.15: ಭಾರತದ 73ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶಕ್ಕೆ ಶುಭಾಶಯಗಳನ್ನು ಕೋರಿರುವ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತಾನ್ಯಹು ಅವರು,ಉಭಯ ದೇಶಗಳ ನಡುವಿನ ಸಂಬಂಧವು ನಿಜವಾದ ಗೆಳೆತನವಾಗಿದೆ ಎಂದು ಬಣ್ಣಿಸಿದ್ದಾರೆ.

‘ನನ್ನ ಮಿತ್ರ ಪ್ರಧಾನಿ ಮೋದಿ ಮತ್ತು ಭಾರತದ ಜನತೆಗೆ ನಮಸ್ತೆ. ಸ್ವಾತಂತ್ರೋತ್ಸವದ ಶುಭಾಶಯಗಳು. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಹಿಂದೆಂದೂ ಈ ಮಟ್ಟದಲ್ಲಿರಲಿಲ್ಲ. ಅದು ಹಲವಾರು ಕ್ಷೇತ್ರಗಳಲ್ಲಿ ಸಹಕಾರ ಮಾತ್ರವಲ್ಲ,ಅದು ನಿಜವಾದ ಗೆಳೆತನವಾಗಿದೆ ’ ಎಂದು ನೆತಾನ್ಯಹು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಸಂದೇಶವು ಹಿಂದೆ ವಿವಿಧ ಕಾರ್ಯಕ್ರಮಗಳಲ್ಲಿ ಉಭಯ ನಾಯಕರು ಪರಸ್ಪರ ಶುಭಾಶಯಗಳನ್ನು ಕೋರುವ ಮತ್ತು ಆಲಂಗಿಸಿಕೊಳ್ಳುವ ವೀಡಿಯೊ ತುಣುಕುಗಳನ್ನು ಒಳಗೊಂಡಿದೆ.

‘ಇಸ್ರೇಲ್ ಎಲ್ಲ ಭಾರತೀಯರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರುತ್ತದೆ ’ಎಂಬ ಹಿಂದಿ ಒಕ್ಕಣೆಯೂ ವೀಡಿಯೊ ಸಂದೇಶದಲ್ಲಿದೆ.

ಕೆಲವು ದಿನಗಳ ಹಿಂದೆ ಅಂತರರಾಷ್ಟ್ರೀಯ ಗೆಳೆತನ ದಿನದ ಸಂದರ್ಭದಲ್ಲಿ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯು ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು,ಅದರ ಜೊತೆಗೆ ‘ಶೋಲೆ’ ಚಿತ್ರದ ‘ ಯೇ ದೋಸ್ತಿ ಹಮ್ ನಹೀಂ ತೋಡೆಂಗೆ’ ಹಾಡಿನ ಸಾಲುಗಳನ್ನು ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News