ಭೀಮ್‌ಸೇನೆ ಉಪಾಧ್ಯಕ್ಷ ನೌಟಿಯಾಲ್ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲು

Update: 2019-08-15 14:54 GMT

ಲಕ್ನೊ, ಆ.15: ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದಕ ಹೇಳಿಕೆ ಅಪ್‌ಲೋಡ್ ಮಾಡಿರುವ ಆರೋಪದಲ್ಲಿ ಭೀಮ್‌ಸೇನೆಯ ಉಪಾಧ್ಯಕ್ಷ ಮಂಜೀತ್ ಸಿಂಗ್ ನೌಟಿಯಾಲ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

 ದಿಲ್ಲಿಯಲ್ಲಿ ಕೆಡವಲಾಗಿರುವ ದೇವಸ್ಥಾನವನ್ನು ಮರು ನಿರ್ಮಾಣ ಮಾಡಿ ಅಲ್ಲಿ ದಲಿತರ ಗುರು ಸಂತ ರವಿದಾಸರ ಪ್ರತಿಮೆಯನ್ನು ಮತ್ತೆ ಸ್ಥಾಪಿಸಲಾಗುವುದು. ಈ ಕಾರ್ಯಕ್ಕೆ ಯಾರಾದರೂ ಅಡ್ಡಿಯಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೌಟಿಯಾಲ್ ಎಚ್ಚರಿಕೆ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನು ಗಮನಿಸಿ ಸಹಾರಣ್‌ಪುರದ ಬೆಹ್ತಾ ಠಾಣೆಯ ಅಧಿಕಾರಿ ಸೊಹಾನ್‌ಪಾಲ್ ಸಿಂಗ್ ಸ್ವಯಂಪ್ರೇರಿತವಾಗಿ ದೇಶದ್ರೋಹದ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರವಿವಾರ ಫೇಸ್‌ಬುಕ್‌ನಲ್ಲಿ ನೇರಪ್ರಸಾರವಾಗಿದ್ದ ಭಾಷಣದಲ್ಲಿ ನೌಟಿಯಾಲ್ , ಆಗಸ್ಟ್ 21ರೊಳಗೆ ಸಂತ ರವಿದಾಸರ ಪ್ರತಿಮೆ ಪುನಸ್ಥಾಪಿಸುವುದಾಗಿ ಪಣ ತೊಟ್ಟಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಸಿಖ್‌ರನ್ನು ಅವಮಾನಗೊಳಿಸಿದ್ದಕ್ಕಾಗಿ ತನ್ನ ಅಂಗರಕ್ಷಕರಿಂದಲೇ ಹತ್ಯೆಯಾಗಿದ್ದರು. ಗೌರವ ಮರಳಿ ಪಡೆಯುವ ಹೋರಾಟದಲ್ಲಿ ಭಾಗಿಯಾಗಲು ಆಗಸ್ಟ್ 21ರಂದು ಶಸ್ತ್ರಾಸ್ತಗಳೊಂದಿಗೆ ದಿಲ್ಲಿಗೆ ಆಗಮಿಸುವಂತೆ ಭೀಮ್‌ಸೇನೆಯ ಕಾರ್ಯಕರ್ತರಿಗೆ ಕರೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ವೀಡಿಯೊ ವೈರಲ್ ಆಗಿದ್ದು ಅದನ್ನು ಗಮನಿಸಿದ ಬಳಿಕ ಕಾನೂನು ತಜ್ಞರ ಅಭಿಪ್ರಾಯ ಪಡೆದು ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News