ಇಂದು ಕೋಚ್ ಹುದ್ದೆಗೆ ಸಂದರ್ಶನ ಸ್ಪರ್ಧಾಕಣದಲ್ಲಿ ಶಾಸ್ತ್ರಿ ಸಹಿತ 6 ಮಂದಿ

Update: 2019-08-15 18:36 GMT

ಮುಂಬೈ, ಆ.15: ಟೀಮ್ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗೆ ಶುಕ್ರವಾರ ಸಂದರ್ಶನ ಪ್ರಕ್ರಿಯೆ ನಡೆಯಲಿದ್ದು, ಹಾಲಿ ಕೋಚ್ ರವಿ ಶಾಸ್ತ್ರಿ ಸೇರಿದಂತೆ 6 ಮಂದಿ ಆಕಾಂಕ್ಷಿಗಳು ಕಣದಲ್ಲಿದ್ದಾರೆ.

 ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರ ಸಂದರ್ಶನ ನಡೆಸಲಿದೆ. ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವುದರೊಂದಿಗೆ ಹಾಲಿ ಕೋಚ್ ರವಿ ಶಾಸ್ತ್ರಿ ಅವಧಿಯೂ ಕೊನೆಗೊಳ್ಳಲಿದೆ, ಅವರು ಇನ್ನೊಂದು ಅವಧಿಗೆ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಉದ್ದೇಶಕ್ಕಾಗಿ ಸ್ಪರ್ಧಾ ಕಣಕ್ಕೆ ಧುಮುಕಿದ್ದಾರೆ.

   

 ನ್ಯೂಝಿಲ್ಯಾಂಡ್‌ನ ಮೈಕ್ ಹೆಸನ್, ಆಸ್ಟ್ರೇಲಿಯದ ಟಾಮ್ ಮೋಡಿ, ಭಾರತದ ಲಾಲ್‌ಚಂದ್ ರಜಪೂತ್, ವೆಸ್ಟ್ ಇಂಡೀಸ್‌ನ ಫಿಲ್ ಸಿಮೊನ್ಸ್ ಮತ್ತು ಭಾರತದ ರಾಬಿನ್ ಸಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹಾಲಿ ಕೋಚ್ ರವಿಶಾಸ್ತ್ರಿ ಅರ್ಜಿ ಸಲ್ಲಿಸಬೇಕಾಗಿಲ್ಲ. ಅವರು ನೇರವಾಗಿ ಕ್ರಿಕೆಟ್ ಸಲಹಾ ಸಮಿತಿ(ಸಿಎಎಸ್) ಮುಂದೆ ಸಂದರ್ಶನಕ್ಕೆ ಹಾಜರಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಮೈಕ್ ಹೆಸನ್:

ನ್ಯೂಝಿಲ್ಯಾಂಡ್‌ನಆಲ್‌ರೌಂಡರ್ ಮೈಕ್ ಹೆಸನ್‌ಗೆ ಒಟಾಗೊ, ಕೀನ್ಯಾ, ನ್ಯೂಝಿಲ್ಯಾಂಡ್ ಮತ್ತು ಕಿಂಗ್ಸ್ ಇಲೆವೆನ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆ. ಅವರ ಮಾರ್ಗದರ್ಶನಲ್ಲಿ ನ್ಯೂಝಿಲ್ಯಾಂಡ್ ತಂಡ 2015ರಲ್ಲಿ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್ ತಲುಪಿತ್ತು.

ರವಿ ಶಾಸ್ತ್ರಿ:   

ಭಾರತ ಟೆಸ್ಟ್‌ನಲ್ಲಿ ನಂ.1 ಸ್ಥಾನ, ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶ, ಆಸ್ಟ್ರೇಲಿಯಲ್ಲಿ ಟೆಸ್ಟ್‌ನಲ್ಲಿ ಮೊದಲ ಸರಣಿ ಜಯ, ಕಳೆದ ವರ್ಷ ದಕ್ಷಿಣ ಆಫ್ರಿಕ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ 5-1 ಸರಣಿ ಜಯ ಗಳಿಸಿತ್ತು.

ಟಾಮ್ ಮೋಡಿ: 

ಶ್ರೀಲಂಕಾ, ವೆಸ್ಟರ್ನ್ ವಾರಿಯರ್ಸ್‌, ಕಿಂಗ್ಸ್ ಇಲೆವೆನ್ ಪಂಜಾಬ್, ಉಥುರಾ ರುದ್ರಾಸ್, ಸನ್‌ರೈಸರ್ಸ್‌ ಹೈದರಾಬಾದ್, ರಾಂಗ್ಪುರ್ ರೈಡರ್ಸ್‌, ಮುಲ್ತಾನ್ ಸುಲ್ತಾನ್ ತಂಡಕ್ಕೆ ಮೋಡಿ ಕೋಚ್ ಆಗಿದ್ದರು. 2007ರಲ್ಲಿ ಶ್ರೀಲಂಕಾ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶ, 2016ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಐಪಿಎಲ್ ಚಾಂಪಿಯನ್, 2017ರಲ್ಲಿ ಬಿಪಿಎಲ್‌ನಲ್ಲಿ ಇವರ ಮಾರ್ಗದರ್ಶನಲ್ಲಿ ರಾಂಗ್‌ಪುರ ರೈಡರ್ಸ್‌ ಚಾಂಪಿಯನ್ ಆಗಿದೆ. ಕಳೆದ ಬಾರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ರವಿ ಶಾಸ್ತ್ರಿ ಮುಂದೆ ಸ್ಪರ್ಧೆಯಲ್ಲಿ ಸೋತರು.

ಲಾಲ್‌ಚಂದ್ ರಜಪೂತ್:

 ಮುಂಬೈ ಇಂಡಿಯನ್ಸ್, ಅಫ್ಘಾನಿಸ್ತಾನ ಮತ್ತು ಝಿಂಬಾಬ್ವೆ ತಂಡದ ಕೋಚ್ ಆಗಿದ್ದರು. ರಾಬಿನ್ ಸಿಂಗ್: ಭಾರತದ ಮಾಜಿ ಆಲ್‌ರೌಂಡರ್ ರಾಬಿನ್ ಸಿಂಗ್ ಅವರು ಭಾರತದ ಅಂಡರ್ -19 ತಂಡಕ್ಕೆ ಕೋಚ್, ಹಾಂಕಾಂಗ್, ಡೆಕ್ಕನ್ ಚಾರ್ಜರ್ಸ್‌, ಮುಂಬೈ ಇಂಡಿಯನ್ಸ್ ಮತ್ತು ಬಾರ್ಬಡಾಸ್ ಟ್ರಿಡೆಂಟ್ಸ್ ತಂಡಕ್ಕೆ ಕೋಚ್ ಆಗಿದ್ದರು.

ಇವರು ಕೋಚ್ ಆಗಿದ್ದಾಗ ಮುಂಬೈ ಇಂಡಿಯನ್ಸ್ 2011ರಲ್ಲಿ ಚಾಂಪಿಯನ್ಸ್ ಲೀಗ್ ಮತ್ತು ಬಾರ್ಬಡಾಸ್ ಟ್ರಿಡೆಂಟ್ಸ್ 2014ರಲ್ಲಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News