ನಿಮ್ಮ ಅಜ್ಜ ಭಾರತೀಯ ಎಂದು ಸಾಬೀತುಪಡಿಸಿ

Update: 2019-08-17 18:23 GMT

ನಾನು ವೀಕ್ಷಿಸಿದ 500ಕ್ಕೂ ಹೆಚ್ಚು ತೀರ್ಪುಗಳಲ್ಲಿ ವಿಚಾರಣೆಗೊಳಪಟ್ಟ ಜನರ ಪೈಕಿ ಸುಮಾರು ಶೇ. 82 ಮಂದಿಯನ್ನು ವಿದೇಶಿಯರೆಂದು ಘೋಷಿಸಲಾಗಿತ್ತು. ವಿಚಾರಣೆಗಳಲ್ಲಿ ಹಲವಾರು ದೋಷಗಳಿರುವುದು ಕಂಡು ಬಂತು. ಐದು ಪ್ರಕರಣಗಳ ವಿಚಾರಣೆಗಳು, ತೀರ್ಪುಗಳು ಆಶ್ಚರ್ಯಕರವಾಗಿದೆ, ಆಘಾತಕಾರಿಯಾಗಿವೆ.


ಈ ತಿಂಗಳ ಅಂತ್ಯದೊಳಗೆ ಅಸ್ಸಾಮಿನಲ್ಲಿರುವ ಮಿಲಿಯಗಟ್ಟಲೆ ಜನರಿಗೆ ತಾವು ಭಾರತೀಯ ರೆಂದು ಸರಕಾರ ನಂಬುತ್ತದೋ ಇಲ್ಲವೋ ಎಂದು ಗೊತ್ತಾಗಲಿದೆ. ಆಗಸ್ಟ್ 31ರಂದು ಪ್ರಕಟವಾಗ ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಯಾರ ಹೆಸರು ಇರುವುದಿಲ್ಲವೋ ಅಂತಹವರು ಅಸ್ಸಾಮ್‌ನ ಅರೆ-ನ್ಯಾಯಾಂಗ ವಿದೇಶಿಯರ ನ್ಯಾಯಮಂಡಲಿ (ಫಾರಿನರ್ಸ್ ಟ್ರಿಬ್ಯೂನಲ್-ಎಫ್‌ಟಿ)ಗಳಲ್ಲಿ ವಿಚಾರಣೆ ಎದುರಿಸಬೇಕಾಗಬಹುದು. ಅದು ಅವರಿಗೆ ತಾವು ಭಾರತೀಯರೆಂದು ಸಾಬೀತುಪಡಿಸಲು ಇರುವ ಕೊನೆಯ ಅವಕಾಶ. ಅವರು ಇದನ್ನು ಸಾಬೀತುಪಡಿಸಲು ವಿಫಲರಾದಲ್ಲಿ, ಅವರನ್ನು ತಕ್ಷಣ ಬಂಧಿಸಬಹುದು ಮತ್ತು ಬಾಂಗ್ಲಾದೇಶಕ್ಕೆ ಹಿಂದೆ ಕಳುಹಿಸಬೇಕಾದವರ ಪಟ್ಟಿಯಲ್ಲಿ ಅವರ ಹೆಸರನ್ನು ನಮೂದಿಸಿಬಿಡಬಹುದು. ಇದೆಲ್ಲ ಒಂದು ನೇರವಾದ ಪ್ರಕ್ರಿಯೆ, ಅಕ್ರಮ ವಲಸಿಗರನ್ನು ಗುರುತಿಸಿ ದೇಶದಿಂದ ಹೊರಗೆ ಕಳುಹಿಸಿ ಬಿಡುವುದು, ಅಷ್ಟೇ ಅಂತ ಅನ್ನಿಸಬಹುದು. ಅಂತಹ ವರು ರಾಜ್ಯದ ಆರ್ಥಿಕತೆಗೆ ಒಂದು ಹೊರೆ ಹಾಗೂ ರಾಷ್ಟ್ರೀಯ ಭದ್ರತೆಗೆ ಒಂದು ಅಪಾಯ ಎಂದು ಅಸ್ಸಾಂನಲ್ಲಿ ಕೆಲವರು ಭಾವಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರನ್ನು ‘‘ನುಸುಳುಕೋರರು’’ ಮತ್ತು ‘‘ಗೆದ್ದಲ ಹುಳಗಳು’’ ಎಂದು ಕರೆದಿದ್ದಾರೆ. ಅವರು ತಮ್ಮ ಗಂಟುಮೂಟೆ ಕಟ್ಟಿಕೊಂಡು ಹೊರಡುವ ಹಾಗೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿದ್ದಾರೆ.

1980ರ ದಶಕದಿಂದ 1.17 ಲಕ್ಷ ಮಂದಿಯನ್ನು ವಿದೇಶಿಯರೆಂದು ನ್ಯಾಯಮಂಡಲಿ (ಟ್ರಿಬ್ಯೂನಲ್)ಗಳು ಘೋಷಿಸಿವೆ. ಆದರೆ ಅವುಗಳು ನಡೆಸುವ ವಿಚಾರಣೆಗಳು ಯದ್ವಾತದ್ವಾ, ಬೇಕಾಬಿಟ್ಟಿ ಹಾಗೂ ತಪ್ಪುಗಳಿಂದ ಕೂಡಿದ ಕ್ರಮಗಳೆಂದು ವಿಚಾರಣಾ ಅಧ್ಯಯನವೊಂದರಿಂದ ತಿಳಿದು ಬಂದಿದೆ ಅಸ್ಸಾಮ್‌ನಲ್ಲಿ ಎಲ್ಲಾ ಒಂದು ನೂರು ಟ್ರಿಬ್ಯೂನಲ್‌ಗಳು 2018ರ ಜುಲೈಯಿಂದ ಡಿಸೆಂಬರ್‌ವರೆಗೆ ನೀಡಿದ ಎಲ್ಲ ಆಜ್ಞೆಗಳ ಪ್ರತಿಗಳನ್ನು ನೀಡುವಂತೆ ನಾನು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ವಿನಂತಿಸಿಕೊಂಡೆ. ಕೇವಲ ಐದು ಟ್ರಿಬ್ಯೂನಲ್‌ಗಳು ಮಾತ್ರ ನನ್ನ ವಿನಂತಿಯನ್ನು ಪರಿಗಣಿಸಿ ಆಜ್ಞೆಗಳ ಪ್ರತಿಗಳನ್ನು ಒದಗಿಸಿದವು. ಆದರೆ ಈ ಐದು ಟ್ರಿಬ್ಯೂನಲ್‌ಗಳು ನೀಡಿರುವ ಆಜ್ಞೆಗಳೇ ಕಣ್ಣು ತೆರೆಸುವಂತಿವೆ. ನಾನು ವೀಕ್ಷಿಸಿದ 500ಕ್ಕೂ ಹೆಚ್ಚು ತೀರ್ಪುಗಳಲ್ಲಿ ವಿಚಾರಣೆಗೊಳಪಟ್ಟ ಜನರ ಪೈಕಿ ಸುಮಾರು ಶೇ. 82 ಮಂದಿಯನ್ನು ವಿದೇಶಿಯರೆಂದು ಘೋಷಿಸಲಾಗಿತ್ತು. ವಿಚಾರಣೆಗಳಲ್ಲಿ ಹಲವಾರು ದೋಷಗಳಿರುವುದು ಕಂಡು ಬಂತು. ಐದು ಪ್ರಕರಣಗಳ ವಿಚಾರಣೆಗಳು, ತೀರ್ಪುಗಳು ಆಶ್ಚರ್ಯಕರವಾಗಿದೆ, ಆಘಾತಕಾರಿಯಾಗಿವೆ.

ಮೊದಲನೆಯದಾಗಿ, ವಿದೇಶಿಯರಿಂದ ತೀರ್ಪು ನೀಡಲಾಗಿದ್ದ 113 ಮಂದಿಯಲ್ಲಿ ನಾನು ಭೇಟಿ ಮಾಡಿದ ಆ ಎಲ್ಲಾ 113 ಮಂದಿ ಕೂಡ ಬಂಗಾಳಿ ಭಾಷೆ ಮಾತನಾಡುವವರು.
ಎರಡನೆಯದಾಗಿ, ಇತರರಿಗೆ ಹೋಲಿಸಿದಾಗ ವಿಚಾರಣೆಗೊಳಪಟ್ಟು ವಿದೇಶಿಯರೆಂದು ತೀರ್ಪು ನೀಡಲಾದವರಲ್ಲಿ ಹೆಚ್ಚಿನವರು ಮುಸ್ಲಿಮರು. ನಾನು ವಿಶ್ಲೇಷಿಸಿದ ಪ್ರಕರಣಗಳಲ್ಲಿ ಸುಮಾರು ಶೇ. 89 ಮಂದಿ ಮುಸ್ಲಿಮರು.

ಮೂರನೆಯದಾಗಿ ನೀಡಲಾದ ಒಟ್ಟು ತೀರ್ಪುಗಳಲ್ಲಿ ಶೇ. 78 ತೀರ್ಪುಗಳು, ಆಪಾದಿತರು ಟ್ರಿಬ್ಯೂನಲ್‌ಗಳಲ್ಲಿ ಹಾಜರಿರದೆ ಇದ್ದಾಗ ನೀಡಲಾದ ಎಕ್ಸ್-ಪಾರ್ಟಿ ತೀರ್ಪುಗಳು. ಇದಕ್ಕೆ ನೀಡಲಾಗಿರುವ ಸಾಬೂಬು: ‘ಅಕ್ರಮಿಗಳು’ ನಾಪತ್ತೆಯಾಗಿದ್ದಾರೆ. ಆದ್ದರಿಂದ ಅವರಿಗೆ ವಿಚಾರಣೆ ಸಮನ್ಸ್‌ಗಳನ್ನು ತಲುಪಿಸಲು ಸಾಧ್ಯವಾಗಲಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಆದರೆ ಆಪಾದಿತರಲ್ಲಿ ಹಲವರು ಅವರ ಹಳ್ಳಿಗಳಲ್ಲಿ ಇರುವುದನ್ನು ನಾನು ಕಂಡುಕೊಂಡೆ. ನಾನು ಹೇಳುವವರೆಗೆ ಅವರಿಗೆ ತಮ್ಮನ್ನು ವಿದೇಶಿಯರೆಂದು ಘೋಷಿಸಲಾಗಿದೆ ಎಂದು ಗೊತ್ತೇ ಇರಲಿಲ್ಲ.

ನಾಲ್ಕನೆಯದಾಗಿ, ಟ್ರಿಬ್ಯೂನಲ್‌ಗಳು ಸಾಕ್ಷ್ಯಾಧಾರಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಪಾದಿತರ ಮೇಲೆ ಹೊರಿಸುತ್ತವೆ. ಕ್ರಿಮಿನಲ್ ವಿಚಾರಣೆಗಳಲ್ಲಿ ಈ ರೀತಿ ಇಲ್ಲ. ಐದನೆಯದಾಗಿ ತಾವು ಭಾರತೀಯರೆಂದು ಅದಾಗಲೇ ಸಾಬೀತುಪಡಿಸಿರುವ ಹಲವು ವ್ಯಕ್ತಿಗಳು ಹೊಸ ದೂರುಗಳ ಹಿನ್ನೆಲೆಯಲ್ಲಿ ಪುನಃ ಪುನಃ ಭಾರತೀಯರೆಂದು ಸಾಬೀತುಪಡಿಸಬೇಕಾಗಿದೆ.

ಐವತ್ತರ ಹರೆಯದ ಗುಜರಿ ವ್ಯಾಪಾರಿ ಅಹಮದ್ 2005ರಲ್ಲಿ ವಿದೇಶಿಯರೆಂದು ಆಪಾದಿತರಾಗಿದ್ದರು. ಬಳಿಕ ಅವರು ಭಾರತೀಯನೆಂದು ಘೋಷಿಸಲಾಯಿತು. ಆದರೆ ಮತ್ತೆ ಪುನಃ 2016ರಲ್ಲಿ ಅವರನ್ನು ಅಕ್ರಮ ವಲಸಿಗನೆಂದು ಆಪಾದಿಸಲಾಯಿತು. ‘‘ಆ ನಡುವಿನ ವರ್ಷಗಳಲ್ಲಿ ನಾನು ಬಾಂಗ್ಲಾ ದೇಶಿಯನಾದೆನೇ?’’ ಎಂದು ಪ್ರಶ್ನಿಸುತ್ತಾರೆ ಅಹಮದ್. ಅವರನ್ನು ಭಾರತೀಯನೆಂದು ಪುನಃ ಘೋಷಿಸಲಾಯಿತು. ಆದರೂ 2018ರ ಕರಡು ಎನ್‌ಆರ್‌ಸಿ ಯಾದಿಯಲ್ಲಿ ಅವರ ಹೆಸರು ಇರದಂತೆ ಎರಡನೇ ಟ್ರಿಬ್ಯೂನಲ್ ಮೊಕದ್ದಮೆ ನೋಡಿಕೊಂಡಿತು.

ನಿಗದಿತ ವಿಚಾರಣೆ ಕ್ರಮವನ್ನು ಎಲ್ಲ ಎಫ್‌ಟಿಗಳು ಅನುಸರಿಸುತ್ತಿಲ್ಲ. ಎಂದು ಟ್ರಿಬ್ಯೂನಲ್ ತಾನು ವಿಚಾರಣೆ ನಡೆಸಿದ ಎಲ್ಲ ಜನರು ‘‘ವಿದೇಶಿಯರಲ್ಲ’’ ಎಂದು ಘೋಷಿಸಿತು. ಇನ್ನೊಂದು ಟ್ರಿಬ್ಯೂನಲ್ ಎಲ್ಲರನ್ನು ವಿದೇಶಿಯರು ಎಂದು ಘೋಷಿಸಿತು. ಯಾವ ದಾಖಲೆಗಳ ಸ್ವೀಕಾರಾರ್ಹ, ಲಿಖಿತ ಹೇಳಿಕೆಯಲ್ಲಿ ಏನೇನಿರಬೇಕು ಅಥವಾ ತಾಯಿಯ ಪೀಳಿಗೆಯ, ವಂಶದ ಸಂಬಂಧ ಒಪ್ಪತಕ್ಕದ್ದೇ ಎಂಬುದು ಟ್ರಿಬ್ಯೂನಲ್‌ನ ನ್ಯಾಯಾಧೀಶರನ್ನು ಅವಲಂಬಿಸಿ ನಿರ್ಧಾರವಾಗುತ್ತದೆ. ಕೆಲವು ನ್ಯಾಯಾಧೀಶರು ವಯಸ್ಸು, ಹೆಸರಿನ ಸ್ಪೆಲ್ಲಿಂಗ್‌ಗಳು ಹಾಗೂ ಸರ್‌ನೇಮ್‌ಗಳ ಮಿಶ್ರಣವಾಗಿರುವುದನ್ನು ವಿವಾಹಿತ ಮಹಿಳೆಯರ ಮಟ್ಟಿಗೆ ಒಪ್ಪಿಕೊಳ್ಳುತ್ತಿದ್ದರು. ಇತರ ನ್ಯಾಯಾಧೀಶರು ಈ ಕ್ಲರಿಕಲ್ ತಪ್ಪುಗಳೇ ವ್ಯಕ್ತಿಗಳನ್ನು ವಿದೇಶಿಯರೆಂದು ಘೋಷಿಸಲು ಸಾಕು ಎಂದು ನಿರ್ಧರಿಸಿದರು.

ಈ ವ್ಯವಸ್ಥೆಯಲ್ಲಿ ಅತ್ಯಂತ ಹೆಚ್ಚು ಒದ್ದಾಟ ಅನುಭವಿಸಿದವರು ಅಶಿಕ್ಷಿತ ಮಹಿಳೆಯರು, ಹಿರಿಯ ನಾಗರಿಕರು, ಕಡುಬಡವರು ಮತ್ತು ನದಿ ದ್ವೀಪಗಳಲ್ಲಿ ಭೂ ಸವೆತದಿಂದಾಗಿ ತೊಂದರೆಗೊಳಗಾದವರು.

ಅಲ್ಲದೆ ತಥಾಕಥಿತ ನ್ಯಾಯಾಧೀಶರು ಹಲವು ಸಂದರ್ಭಗಳಲ್ಲಿ ನ್ಯಾಯಾಧೀಶರೇ ಅಲ್ಲ; ಬದಲಾಗಿ ವಕೀಲರು ಹಾಗೂ ಸರಕಾರಿ ಅಧಿಕಾರಿಗಳು. ಇನ್ನು ದಶಕಗಳ ಹಿಂದಿನ ಸರಕಾರಿ ದಾಖಲೆಗಳು ದೇಶಾದ್ಯಂತ ನಿಖರವಾಗಿ, ಪರಿಪೂರ್ಣವಾಗಿ ಇಲ್ಲ. ಸರಿಯಾದ ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ಜನರನ್ನು ಅಕ್ರಮ ವಲಸಿಗರೆಂದು ಜೈಲಿಗೆ ತಳ್ಳುವುದು ಸರಿಯಲ್ಲ. ಟ್ರಿಬ್ಯೂನಲ್‌ನ ಸೀಮಿತ ವ್ಯಾಖ್ಯಾನಗಳ, ದಾಖಲೆಗಳ ಪ್ರಕಾರ ನಮ್ಮ ಪೋಷಕರು ಅಥವಾ ಅಜ್ಜ ಅಜ್ಜಿಯಂದಿರಲ್ಲಿ ಬಹಳ ಮಂದಿ ಭಾರತೀಯರೆಂಬ ಅರ್ಹತೆ ಪಡೆಯಲಾರರು.

ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ

Writer - ರೋಹಿಣಿ ಮೋಹನ್

contributor

Editor - ರೋಹಿಣಿ ಮೋಹನ್

contributor

Similar News