ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕದ ಡೊಮಿಂಗೊ ನೇಮಕ

Update: 2019-08-17 18:31 GMT

ಢಾಕಾ, ಆ.17: ದಕ್ಷಿಣ ಆಫ್ರಿಕದ ರಸೆಲ್ ಡೊಮಿಂಗೊರನ್ನು ತನ್ನ ಮುಖ್ಯ ಕೋಚ್ ಆಗಿ ಬಾಂಗ್ಲಾದೇಶ ತಂಡ ಶನಿವಾರ ನೇಮಕ ಮಾಡಿದೆ. ಕಳೆದ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ 8ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿದ ಬಳಿಕ ಸ್ಟೀವ್ ರೋಡ್ಸ್ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ್ದರು. ರೋಡ್ಸ್ ರಿಂದ ತೆರವಾದ ಸ್ಥಾನಕ್ಕೆ ಡೊಮಿಂಗೊ ಆಯ್ಕೆಯಾಗಿದ್ದಾರೆ.

2014ರ ಟ್ವೆಂಟಿ-20 ವಿಶ್ವಕಪ್ ಹಾಗೂ 2015ರ 50 ಓವರ್‌ಗಳ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕ ತಂಡ ಸೆಮಿ ಫೈನಲ್ ತಲುಪಲು ಡೊಮಿಂಗೊ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು. ಇದೀಗ ಅವರು ಬಾಂಗ್ಲಾದೊಂದಿಗೆ 2 ವರ್ಷಗಳ ಅವಧಿಯ ಗುತ್ತಿಗೆಗೆ ಸಹಿ ಹಾಕಿದ್ದಾರೆ.

‘‘ಡೊಮಿಂಗೊ ಬಳಿ ಸಾಕಷ್ಟು ಅನುಭವವಿದ್ದು, ಅವರ ಉತ್ಸಾಹ ಹಾಗೂ ಕೋಚಿಂಗ್ ಫಿಲಾಸಫಿ ನಮ್ಮ ಮೇಲೆ ಗಾಢ ಪ್ರಭಾವಬೀರಿದೆ. ತಂಡವನ್ನು ಮುಂದಕ್ಕೊಯ್ಯಲು ಏನು ಅಗತ್ಯವಿದೆ ಎಂಬ ಬಗ್ಗೆ ಡೊಮಿಂಗೊಗೆ ಸ್ಪಷ್ಟ ಕಲ್ಪನೆ ಇದೆ’’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಅಧ್ಯಕ್ಷ ನಝ್ಮುಲ್ ಹಸನ್ ಹೇಳಿದ್ದಾರೆ.

ಹೊಸ ಸವಾಲನ್ನು ಎದುರುನೋಡುತ್ತಿದ್ದೇನೆ ಎಂದು ಹೇಳಿದ ಡೊಮಿಂಗೊ,‘‘ಇದೊಂದು ಮಹಾ ಗೌರವ...ನಾನು ಬಾಂಗ್ಲಾದೇಶದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ತಂಡದ ಗುರಿ ತಲುಪಲು ನೆರವಾಗುವುದಕ್ಕೆ ಉತ್ಸುಕನಾಗಿದ್ದೇನೆ. ಗುರಿ ತಲುಪುವ ಶಕ್ತಿ ಆ ತಂಡಕ್ಕಿದೆ’’ ಎಂದರು. 44ರ ಹರೆಯದ ಡೊಮಿಂಗೊ ನ್ಯೂಝಿಲ್ಯಾಂಡ್‌ನ ಮಾಜಿ ಕೋಚ್ ಮೈಕ್ ಹೆಸನ್ ಮತ್ತು ಪಾಕ್‌ನ ಮಾಜಿ ಕೋಚ್ ಮಿಕಿ ಅರ್ಥರ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಸನ್ ಭಾರತದ ಮುಖ್ಯ ಕೋಚ್ ಹುದ್ದೆಯಲ್ಲೂ ಸ್ಪರ್ಧೆಯಲ್ಲಿದ್ದರು. ಆದರೆ, ರವಿ ಶಾಸ್ತ್ರಿ ಸತತ 2ನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಇದೀಗ ದಕ್ಷಿಣ ಆಫ್ರಿಕ ‘ಎ’ ತಂಡದ ಕೋಚ್ ಆಗಿರುವ ಡೊಮಿಂಗೊ ಭಾರತ ಪ್ರವಾಸದಲ್ಲಿದ್ದಾರೆ. ಮುಂದಿನ ತಿಂಗಳು ಚಿತ್ತಗಾಂಗ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಡೊಮಿಂಗೊರ ಮೊದಲ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News