ಚಂದ್ರಬಾಬು ನಾಯ್ಡುಗೆ ಮನೆ ಖಾಲಿ ಮಾಡಲು ನೋಟಿಸ್: ಕಾರಣ ಏನು ಗೊತ್ತೇ ?

Update: 2019-08-18 04:33 GMT

ವಿಜಯವಾಡ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅವರಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಕೃಷ್ಣಾ ನದಿ ದಂಡೆಯಲ್ಲಿರುವ ಬಾಡಿಗೆ ಬಂಗ್ಲೆಗೆ ನೆರೆಭೀತಿ ಇರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.

ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಹತ್ತಾರು ಗ್ರಾಮಗಳು ಹಾಗೂ ನೂರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿದೆ. ವಿಜಯವಾಡದ ಪ್ರಕಾಶಂ ಬ್ಯಾರೇಜ್‌ನಿಂದ ಗರಿಷ್ಠ 8.21 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಬ್ಯಾರೇಜ್‌ಗೆ 7.57 ಲಕ್ಷ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ ಎಂದು ಮೂಲಗಳು ಹೇಳಿವೆ.

ನದಿಬದಿಯ ಮನೆಗಳು ಮುಳುಗುವ ಭೀತಿ ಹಿನ್ನೆಲೆಯಲ್ಲಿ, ತಡೆಪಲ್ಲಿ ತಹಶೀಲ್ದಾರ್ ಜಿ.ಶ್ರೀನಿವಾಸ್ ಅವರು ಮಾಜಿ ಸಿಎಂ ಹಾಗೂ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ನೋಟಿಸ್ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾನದಿ ದಂಡೆಯ ಉಂಡವಲ್ಲಿ ಎಂಬಲ್ಲಿರುವ ಬಾಡಿಗೆ ಬಂಗ್ಲೆಯನ್ನು ತಕ್ಷಣ ತೆರವು ಮಾಡುವಂತೆ ಸೂಚಿಸಲಾಗಿದೆ. ನದಿದಂಡೆಯಲ್ಲಿ ಒಟ್ಟು 32 ಮನೆಗಳಿಗೆ ನೋಟಿಸ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News