ಒಲಿಂಪಿಕ್ ಟೆಸ್ಟ್ ಇವೆಂಟ್ : ಭಾರತ- ಆಸ್ಟ್ರೇಲಿಯ ಮಹಿಳಾ ಹಾಕಿ ಪಂದ್ಯ ಡ್ರಾ

Update: 2019-08-18 07:35 GMT

ಟೋಕಿಯೊ, ಆ.18: ಭಾರತತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಒಲಿಂಪಿಕ್ ಟೆಸ್ಟ್ ಇವೆಂಟ್‌ನ ರೌಂಡ್ ರಾಬಿನ್ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ.
  ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ಕ್ಯಾಟ್ಲಿನ್ ನೊಬ್ಸ್(14ನೇನಿಮಿಷ) ಮತ್ತು ಸ್ಟೇವರ್ಟ್ (43ನೇ ನಿಮಿಷ) ಗೋಲು ಜಮೆ ಮಾಡಿದರು. ಭಾರತದ ವಂದನಾ ಕಟಾರಿಯಾ (36ನೇ ನಿಮಿಷ) ಮತ್ತು ಗುರ್ಜಿತ್ ಕೌರ್(59ನೇ ನಿಮಿಷ) ಗೋಲು ಗಳಿಸಿ ಸಮಬಲ ಸಾಧಿಸಿದರು.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಜಪಾನ್‌ಗೆ ಭಾರತ 2-1 ಅಂತರದಲ್ಲಿ ಸೋಲುಣಿಸಿತ್ತು.

  ಇಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ಮತ್ತು ಭಾರತ ತಂಡಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿ, ಸಮಬಲದ ಹೋರಾಟ ನೀಡಿದ್ದವು. 14ನೇ ನಿಮಿಷದಲ್ಲಿ ಆಸ್ಟ್ರೇಲಿಯಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ಸಿಕ್ಕಿತ್ತು. ಭಾರತದ ಡಿಫೆಂಡರ್ ಮಾಡಿದ ತಪ್ಪಿಗಾಗಿ ಆಸ್ಟ್ರೇಲಿಯಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ನೋಬ್ಸ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಿಸಿಕೊಂಡು ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಆಸ್ಟ್ರೇಲಿಯ ಗೋಲು ಖಾತೆ ತೆರೆಯಿತು.
1-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯ ಮೊದಲ ಕ್ವಾರ್ಟರ್‌ನಲ್ಲಿ ಪಂದ್ಯದ ಮೇಲೆ ಮೇಲುಗೈ ಸಾಧಿಸಿತ್ತು. ಆಸ್ಟ್ರೇಲಿಯದ ಆಟಗಾರ್ತಿಯರು ಮತ್ತೆ ಎರಡು ಬಾರಿ ಗೋಲು ಜಮೆ ಮಾಡಲು ಪ್ರಯತ್ನ ನಡೆಸಿದರು. ಆದರೆ ಭಾರತದ ಗೋಲು ಕೀಪರ್ ಸವಿತಾ ಇದಕ್ಕೆ ಅವಕಾಶ ನೀಡಲಿಲ್ಲ.ವಿರಾಮದ ಹೊತ್ತಿಗೆ ಆಸ್ಟ್ರೇಲಿಯ 1-0 ಮುನ್ನಡೆ ಸಾಧಿಸಿತ್ತು.
 ಮೂರನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯ ಮತ್ತೆ ಗೋಲು ಗಳಿಸುವ ಯತ್ನ ಮುಂದುವರಿಸಿತು.ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಆಸ್ಟ್ರೇಲಿಯದ ಆಟಗಾರ್ತಿಯರಿಂದ ಮತ್ತೆ ಎರಡು ಬಾರಿ ಗೋಲು ಗಳಿಸುವ ಯತ್ನ ನಡೆಯಿತು. ಆದರೆ ಭಾರತದ ಗೋಲು ಕೀಪರ್ ಸವಿತಾ ಗೋಲು ನಿರಾಕರಿಸಿದರು.
35ನೇ ನಿಮಿಷದಲ್ಲಿ ಭಾರತದ ವಂದನಾ ಕಟಾರಿಯಾ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಲು ನೆರವಾದರು. 43ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಗ್ರೇಸ್ ಸ್ಟೇವರ್ಟ್ ಗೋಲು ಜಮೆ ಮಾಡಿ 2-1 ಮುನ್ನಡೆ ಸಾಧಿಸಲು ನೆರವಾದರು.
 59ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಮಾಡಿದ ಭಾರತದ ಗುರ್ಜಿತ್ ಕೌರ್ ಗೋಲು ಹೊಡೆದರು. ಬಳಿಕ ಉಭಯ ತಂಡಗಳಿಂದಲೂ ಗೋಲು ಬರಲಿಲ್ಲ. ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು.
ರೌಂಡ್ -ರಾಬಿನ್ ಟೂರ್ನಮೆಂಟ್‌ನ ತನ್ನ ಮೂರನೇ ಪಂದ್ಯದಲ್ಲಿ ಭಾರತ ಮಂಗಳವಾರ ಚೀನಾವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News