51 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆ ವಿಮಾನದ ಅವಶೇಷಗಳು ಪತ್ತೆ

Update: 2019-08-19 09:32 GMT
Photo: IANS

ಚಂಡೀಗಢ, ಆ.19: ಐವತ್ತೊಂದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ವಿಮಾನದ ಅವಶೇಷಗಳು  ಹಿಮಾಚಲ ಪ್ರದೇಶದ ಲಹೌಲ್-ಸ್ಪಿಟಿ ಜಿಲ್ಲೆಯ ಢಾಕ ಗ್ಲೇಶಿಯರ್ ನಲ್ಲಿ ಪತ್ತೆಯಾಗಿವೆ. ಸುಮಾರು 100 ಮಂದಿ ವಾಯುಸೇನಾ  ಸಿಬ್ಬಂದಿಯಿದ್ದ ಈ  ಈ ವಾಯುಪಡೆಯ ವಿಮಾನ ಎಎನ್ -12-ಬಿಎಲ್0534  ಫೆಬ್ರವರಿ 7, 1968ರಲ್ಲಿ ನಾಪತ್ತೆಯಾಗಿತ್ತು.

ಈ ವಿಮಾನದ ಅವಶೇಷ  ಹಾಗೂ ಅದರಲ್ಲಿದ್ದ ವಾಯುಸೇನಾ ಸಿಬ್ಬಂದಿಯ ಕಳೇಬರ ಈ ಹಿಂದೆ ಪತ್ತೆಯಾಗಿದ್ದರೂ ಈ ಬಾರಿ ವಿಮಾನದ  ಪ್ರಮುಖ ಭಾಗಗಳಾದ ಏರೋ ಇಂಜಿನ್, ಫ್ಯುಸಿಲೇಜ್, ಇಲೆಕ್ಟ್ರಿಕ್ ಸರ್ಕ್ಯೂಟ್, ಪ್ರೊಪೆಲ್ಲರ್, ಇಂಧನ ಟ್ಯಾಂಕ್ ಯುನಿಟ್, ಏರ್ ಬ್ರೇಕ್ ಅಸೆಂಬ್ಲಿ ಹಾಗೂ ಕಾಕ್‍ ಪಿಟ್ ಬಾಗಿಲು ಪತ್ತೆಯಾಗಿವೆ.

2003ರಲ್ಲಿ ಹಿಮಾಲಯನ್ ಪರ್ವತಾರೋಹಣ ಸಂಸ್ಥೆಯ ಸದಸ್ಯರು ಆ ವಿಮಾನದಲ್ಲಿದ್ದವರೆಂದು ಹೇಳಲಾದ ಸಿಪಾಯಿ ಬೇಲಿ ರಾಮ್ ಅವರದ್ದೆಂದು ತಿಳಿಯಲಾದ ಕಳೇಬರ ಪತ್ತೆ ಹಚ್ಚಿದ್ದರು. ಆಗಸ್ಟ್ 9, 2007ರಂದು ಭಾರತೀಯ ಸೇನೆಯ ತಂಡವೊಂದು ಮೂರು  ಮಂದಿ ಇತರರ ಶವಗಳನ್ನು ಪತ್ತೆ ಹಚ್ಚಿತ್ತು. ಜುಲೈ 1, 2018ರಂದು ಪರ್ವತಾರೋಹಿಗಳ ತಂಡವೊಂದು ಇನ್ನೊಬ್ಬ ಸೈನಿಕನ ಕಳೇಬರ ಹಾಗೂ ವಿಮಾನದ ಕೆಲ ಭಾಗಗಳನ್ನು ಪತ್ತೆ ಹಚ್ಚಿತ್ತು.

ಈ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಲು ಈ ವರ್ಷದ ಜುಲೈ 26ರಂದು ಡೋಗ್ರಾ ಸ್ಕೌಟುಗಳ ತಂಡ ವೆಸ್ಟರ್ನ್ ಕಮಾಂಡ್ ನೇತೃತ್ವದಲ್ಲಿ ಆರಂಭಿಸಿತ್ತು. ಸುಮಾರು 13 ದಿನಗಳ ನಿರಂತರ ಶೋಧದ ಬಳಿಕ ಅವಶೇಷಗಳು  5,240 ಮೀಟರ್ ಎತ್ತರದ  ಪ್ರದೇಶದಲ್ಲಿ ಪತ್ತೆಯಾಗಿದ್ದು, ವಿಮಾನದಲ್ಲಿದ್ದ ಕೆಲ ಮಂದಿಗೆ ಸೇರಿದ ವಸ್ತುಗಳೂ ಪತ್ತೆಯಾಗಿವೆ. ಆಗಸ್ಟ್ 6ರಂದು ವಾಯುಪಡೆಯ ಸಿಬ್ಬಂದಿಯೂ ಈ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ವಿಮಾನ ತನ್ನ ನಿಗದಿತ ಸ್ಥಳದಲ್ಲಿ ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಪ್ರತಿಕೂಲ ಹವಾಮಾನದ ಕಾರಣ ನೀಡಿ ವಾಪಸ್ ತೆರಳುವಂತೆ ನಿಯಂತ್ರಣಾ ಕೊಠಡಿಯಿಂದ ಸಂದೇಶ ಬಂದಿತ್ತು. ಚಂಡೀಗಢಕ್ಕೆ ವಾಪಸಾಗುತ್ತಿರುವ ವೇಳೆ ವಿಮಾನ ರೋಹ್ಟಂಗ್ ಪಾಸ್ ಮೂಲಕ ಹಾದು ಹೋಗುತ್ತಿರುವಾಗ ಸಂಪರ್ಕ ಕಳೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News