ಅಫ್ಘಾನ್ ಶಾಂತಿ ಒಪ್ಪಂದ ಮಾತುಕತೆಯಲ್ಲಿ ಪ್ರಗತಿ: ಟ್ರಂಪ್ ಶ್ಲಾಘನೆ

Update: 2019-08-19 16:56 GMT

ವಾಶಿಂಗ್ಟನ್, ಆ. 19: ಅಫ್ಘಾನಿಸ್ತಾನ ಶಾಂತಿ ಒಪ್ಪಂದ ಕುರಿತ ಮಾತುಕತೆಗಳಲ್ಲಿ ಆಗಿರುವ ಪ್ರಗತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಶ್ಲಾಘಿಸಿದ್ದಾರೆ. ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರಕಾರಗಳರೆಡರ ಜೊತೆಯೂ ನಡೆಯುತ್ತಿರುವ ಮಾತುಕತೆಗಳು ಉತ್ತಮವಾಗಿ ಸಾಗುತ್ತಿವೆ ಎಂದು ಹೇಳಿದ್ದಾರೆ.

  ‘‘ನಾವು ತಾಲಿಬಾನ್‌ನೊಂದಿಗೆ ಅತ್ಯುತ್ತಮ ಮಾತುಕತೆಗಳನ್ನು ನಡೆಸುತ್ತಿದ್ದೇವೆ. ಅಫ್ಘಾನಿಸ್ತಾನ ಸರಕಾರದ ಜೊತೆಗಿನ ನಮ್ಮ ಮಾತುಕತೆಗಳೂ ಚೆನ್ನಾಗಿ ನಡೆಯುತ್ತಿವೆ’’ ಎಂದು ನ್ಯೂಜರ್ಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ನುಡಿದರು.

ಅಫ್ಘಾನಿಸ್ತಾನ ಶಾಂತಿ ಮಾತುಕತೆ ಕುರಿತ ನಿರೀಕ್ಷೆ ಹೆಚ್ಚುತ್ತಿದೆ. ಈ ಒಪ್ಪಂದದಂತೆ, ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಆರಂಭಿಸುತ್ತದೆ.

ಅಫ್ಘಾನಿಸ್ತಾನದಲ್ಲಿ ಸುಮಾರು ಎರಡು ದಶಕಗಳಿಂದ ನಡೆಯುತ್ತಿರುವ ಯುದ್ಧವು ಈಗ ಬಿಕ್ಕಟ್ಟಾಗಿ ಮಾರ್ಪಟ್ಟಿದೆ.

ಅಫ್ಘಾನಿಸ್ತಾನದಲ್ಲಿನ ತನ್ನ ಪಾತ್ರವನ್ನು ಕೊನೆಗೊಳಿಸಲು ಅಮೆರಿಕ ಉತ್ಸುಕವಾಗಿದೆ. ತಾಲಿಬಾನ್ ವಿರುದ್ಧದ ಯುದ್ಧಕ್ಕಾಗಿ ಅಮೆರಿಕ ಈವರೆಗೆ ಒಂದು ಟ್ರಿಲಿಯ ಡಾಲರ್ (ಸುಮಾರು 71.40 ಲಕ್ಷ ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ಖರ್ಚು ಮಾಡಿದೆ ಎಂದು ಹೇಳಲಾಗಿದೆ.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯನ್ನು ವಾಪಸ್ ತರುವುದಾಗಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂದಿನಿಂದಲೂ ಟ್ರಂಪ್ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News