ಮಧ್ಯಪ್ರದೇಶದ ಓಟಗಾರ ರಾಮೇಶ್ವರ್ ಟ್ರಯಲ್ಸ್ ನಲ್ಲಿ ವಿಫಲ

Update: 2019-08-19 18:28 GMT

 ಹೊಸದಿಲ್ಲಿ, ಆ.19: 100 ಮೀ. ಓಟವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕ್ರಮಿಸಿ ಸುದ್ದಿಯಾಗಿದ್ದ, ಮಧ್ಯಪ್ರದೇಶದ ಉಸೇನ್ ಬೋಲ್ಟ್ ಎಂದೇ ಕರೆಯಲ್ಪಟ್ಟಿದ್ದ ರಾಮೇಶ್ವರ ಗುರ್ಜರ್ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್)ನಡೆಸಿರುವ ಟ್ರಯಲ್ಸ್ ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಮೇಶ್ವರ್ ಓಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬರಿಗಾಲಲ್ಲಿ ಓಡಿದ್ದ ಅವರು 100 ಮೀ. ಓಟವನ್ನು ಕೇವಲ 11 ಸೆಕೆಂಡ್‌ನಲ್ಲಿ ಪೂರ್ಣಗೊಳಿಸಿದ್ದರು. ಭೋಪಾಲ್‌ನಲ್ಲಿರುವ ಸಾಯ್ ಸೆಂಟರ್‌ಗೆರಾಮೇಶ್ವರ್‌ರನ್ನು ಭರ್ತಿ ಮಾಡುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ ನೀಡಿದ್ದರು.

ಭೋಪಾಲ್‌ನ ಸಾಯ್ ಸೆಂಟರ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಭಾಗಿಯಾದ ರಾಮೇಶ್ವರ್ ಕೊನೆಯ ಸ್ಥಾನ ಪಡೆದರು. ಇತರ ಆರು ಓಟಗಾರರೊಂದಿಗೆ ಸ್ಪರ್ಧಿಸಿದ ರಾಮೇಶ್ವರ್ ಏಳನೇ ಸ್ಥಾನ ಪಡೆದರು. ಅವರು ತನ್ನ ಓಟವನ್ನು ಪೂರೈಸಲು 12.90 ಸೆಕೆಂಡ್ ಸಮಯ ತೆಗೆದುಕೊಂಡರು. ಇದು ಅಂತರ್‌ರಾಷ್ಟ್ರೀಯ ಸ್ಟಾಂಡರ್ಡ್‌ಗಿಂತ ತುಂಬಾ ಕಡಿಮೆಯಾಗಿತ್ತು . ಟ್ರಯಲ್ ರೇಸ್‌ನಲ್ಲಿ ಆಯುಷ್ ತಿವಾರಿ ಜಯಶಾಲಿಯಾದರು. ‘‘ಶೂಗಳನ್ನು ಧರಿಸಿ, ಸಿಂಥೆಟಿಕ್ ಟ್ರಾಕ್‌ನಲ್ಲಿ ಓಡಿರುವುದು ನನ್ನ ವೈಫಲ್ಯಕ್ಕೆ ಕಾರಣ. ಓಟದ ವೇಳೆ ನನಗೆ ಬೆನ್ನುನೋವು ಕಾಣಿಸಿಕೊಂಡ ಕಾರಣ ಸಂಪೂರ್ಣ ಸಾಮರ್ಥ್ಯದೊಂದಿಗೆ ಓಡಲು ಸಾಧ್ಯವಾಗಲಿಲ್ಲ. ಮುಂದಿನ ತಿಂಗಳು ನನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ’’ ಎಂದು ರಾಮೇಶ್ವರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News